Tuesday, July 23, 2024
Google search engine
Homeಇ-ಪತ್ರಿಕೆಜು.19 ರಂದು ಹೆಚ್.ಎಸ್.ರುದ್ರಪ್ಪನವರ ಸವಿನೆನಪು ಕಾರ್ಯಕ್ರಮ:  ಕೋಡಿಹಳ್ಳಿ ಚಂದ್ರಶೇಖರ್

ಜು.19 ರಂದು ಹೆಚ್.ಎಸ್.ರುದ್ರಪ್ಪನವರ ಸವಿನೆನಪು ಕಾರ್ಯಕ್ರಮ:  ಕೋಡಿಹಳ್ಳಿ ಚಂದ್ರಶೇಖರ್

ಶಿವಮೊಗ್ಗ : ಜು.19 ರಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ(ಕೋಡಿಹಳ್ಳಿ ಚಂದ್ರಶೇಖರ್ ಬಣ) ಜಿಲ್ಲಾ ಶಾಖೆ ವತಿಯಿಂದ ರೈತ ಸಂಘದ ಸಂಸ್ಥಾಪಕರಾದ ಹೆಚ್.ಎಸ್.ರುದ್ರಪ್ಪನವರ ಸವಿನೆನಪು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10.00 ಗಂಟೆಗೆ ಪ್ರವಾಸಿ ಮಂದಿರ ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಥಳವಾದ ಬೆಕ್ಕಿನ ಕಲ್ಮಠದವರೆಗೆ ಹೆಚ್.ಎಸ್. ರುದ್ರಪ್ಪನವರ ಭಾವಚಿತ್ರದೊಂದಿಗೆ ಮೆರವಣಿಗೆ ಆಯೋಜಿಸಲಾಗಿದೆ. ನಂತರ 11.00 ಗಂಟೆಗೆ ಬೆಕ್ಕಿನಕಲ್ಮಠದಲ್ಲಿ ವೇದಿಕೆ ಕಾರ್ಯಕ್ರಮವನ್ನು ಸಾಣೆಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸುವರು. ಬೆಕ್ಕಿನ ಕಲ್ಮಠ ಶ್ರೀಗಳಾದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ಸಾನಿಧ್ಯ ವಹಿಸುವರು. ಸಿಗಂದೂರು ಶ್ರೀ ಚೌಡೇಶ್ವರಿ ಟ್ರಸ್ಟ್ ಅಧ್ಯಕ್ಷ ರಾಮಪ್ಪ ಹಾಗೂ  ಪ್ರಗತಿಪರ  ಚಿಂತಕ ಹಾಗೂ ವಕೀಲ ಕೆ.ಪಿ.ಶ್ರೀಪಾಲ್ ಉಪಸ್ಥಿತರಿರುವರು ತಿಳಿಸಿದರು.

ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಿದ್ಧರಾಮಯ್ಯ ಸರ್ಕಾರ ಗ್ಯಾರಂಟಿಗಳಲ್ಲಿ ಮುಳುಗಿ ಅಭಿವೃದ್ಧಿಯನ್ನೇ ಕಡೆಗಾಣಿಸಿದ್ದಾರೆ. ಬರಗಾಲ ಬಂದರೂ ಅದಕ್ಕೆ ಪರಿಹಾರ ನೀಡಲಿಲ್ಲ. ಅದರ ಬದಲು ಬರಗಾಲದ ಸಂದರ್ಭದಲ್ಲಿ ತೆಲಂಗಾಣಕ್ಕೆ ಹೋಗಿ ಚುನಾವಣಾ ಪ್ರಚಾರದಲ್ಲಿ ಮುಳುಗಿದರು. ಕೇಂದ್ರ ಸರ್ಕಾರಕ್ಕೆ 36 ಸಾವಿರ ಕೋಟಿ ಪರಿಹಾರ ಕೇಳಿದ್ದರೂ ಕೂಡ ಕೇಂದ್ರ ಸರ್ಕಾರ ಕೇವಲ ರೂ.3 ಸಾವಿರ ಕೋಟಿ ನೀಡಿ ಕೈ ಚೆಲ್ಲಿದೆ. ರಾಜ್ಯ ಸರ್ಕಾರ ರೈತರಿಗೆ ರೂ.200 ಕೋಟಿ ಮಾತ್ರ ಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರೈತರನ್ನು ಕಡೆಗಾಣಿಸಿವೆ ಎಂದರು.

ಕೇಂದ್ರ ಸರ್ಕಾರ ರೈತರ ಎಪಿಎಂಸಿ ಹಾಗೂ ಭೂಸುಧಾರಣಾ ಕಾಯ್ದೆ ರದ್ದು ಮಾಡಿದರೂ ನಮ್ಮ ರಾಜ್ಯ ಸರಕಾರವು ರದ್ದುಪಡಿಸಿಲ್ಲ. ಈ ಕಾಯ್ದೆಗಳನ್ನು ದೇಶದಲ್ಲಿ ರದ್ದು ಮಾಡದೆ ಇರುವ ಏಕೈಕ ರಾಜ್ಯವೆಂದರೆ ನಮ್ಮದಾಗಿದೆ. ಇದರ ಬದಲು ಮತ್ತಷ್ಟು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಜಾರಿಗೆ ತರುತ್ತಿದೆ. ಭೂ ಸುಧಾರಣೆ ಕಾಯ್ದೆಯಿಂದಾಗಿ 10 ಲಕ್ಷ ರೈತರು ತಮ್ಮ ಭೂಮಿ ಮಾರಿಕೊಂಡಿದ್ದಾರೆ. ಎಪಿಎಂಸಿ ಕಾಯ್ದೆಯಿಂದಾಗಿ ಕೃಷಿ ಮಾರುಕಟ್ಟೆಗೆ ಬಹುರಾಷ್ಟ್ರೀಯ ಕಂಪನಿಗಳು ಲಗ್ಗೆಹಾಕಿವೆ. ರಾಜ್ಯ ಸರಕಾರವು ಈ ಎರಡೂ ಕಾಯ್ದೆಗಳನ್ನು ವಾಪಸ್ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಮೈತ್ರಿ ರೈತ ಸಂಘಟನೆಯೊಂದು ಜು.26ರಂದು ಅಂತರರಾಷ್ಟ್ರೀಯ ರೈತ ಸಮ್ಮೇಳನ ಆಯೋಜಿಸಿದೆ. ಈ ಸಮ್ಮೇಳನಕ್ಕೆ ರಾಜ್ಯದ ಮುಖ್ಯಮಂತ್ರಿ  ಸಿದ್ಧರಾಮಯ್ಯ ಅವರಿಗೆ ಆಹ್ವಾನ ನೀಡಿದೆ. ಇದರ ಆಯೋಜಕರಾದ ಉತ್ತರ ಪ್ರದೇಶದ ರೈತ ಹೋರಾಟಗಾರ ರಾಕೇಶ್ ಟಿಕಾಯತ್ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದರು. ಇದಕ್ಕೂ ಮೊದಲು ಬಿಜೆಪಿಯಲ್ಲಿದ್ದವರು. ಭೂ ಸುಧಾರಣೆ ಕಾಯ್ದೆಯನ್ನು ಜಾರಿ ಮಾಡುತ್ತಿರುವ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಇವರು ಆಹ್ವಾನಿಸುತ್ತಿರುವುದು ಖಂಡನೀಯ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಮೇಶ್ ಪಾಟೀಲ್, ಮಂಜುನಾಥ್, ಸುನಿತಾ, ಈಶ್ವರಪ್ಪ, ಸತೀಶ್, ಶಫೀವುಲ್ಲಾ ಮುಂತಾದವರಿದ್ದರು.

RELATED ARTICLES
- Advertisment -
Google search engine

Most Popular

Recent Comments