ಸಕಲೇಶಪುರ: ಭೂಸ್ವಾಧೀನ ಪ್ರಕರಣದಲ್ಲಿ ಪರಿಹಾರ ನೀಡಲು ನಿರ್ಲಕ್ಷ್ಯ ತೋರಿದ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಸಕಲೇಶಪುರದ ಉಪವಿಭಾಗಾಧಿಕಾರಿ ಕಚೇರಿಯ ವಾಹನ ಹಾಗೂ ಪೀಠೋಪಕರಣಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಬೇಲೂರು ಚನ್ನಕೇಶವ ದೇವಾಲಯಕ್ಕೆ ಹೊಂದಿಕೊಂಡಿದ್ದ ಸುದೀಂದ್ರ ಹಾಗೂ ರಾಮು ಎಂಬವರ 800 ಚದರ ಅಡಿ ಭೂಮಿಯನ್ನು ಹೋಟೆಲ್ ನಿರ್ಮಾಣಕ್ಕಾಗಿ 1994ರಲ್ಲಿ ಪ್ರವಾಸೋದ್ಯಮ ಇಲಾಖೆ ಸ್ವಾಧೀನಕ್ಕೆ ತಗೆದುಕೊಂಡಿತ್ತು. ಈ ವೇಳೆ ಪ್ರತಿ ಚದರ ಅಡಿಗೆ ಇಲಾಖೆ 277 ರೂ.ಗಳಂತೆ ಪರಿಹಾರ ನೀಡಿತ್ತು. ಹೆಚ್ಚಿನ ಪರಿಹಾರ ನೀಡುವಂತೆ ಸುದೀಂದ್ರ ಹಾಗೂ ರಾಮು ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಸುದೀರ್ಘ ವಿಚಾರಣೆ ನಂತರ ಚದರ ಅಡಿಗೆ 950 ರೂ. ನಂತೆ 1.75 ಕೋಟಿ ರೂ. ಪರಿಹಾರ ನೀಡುವಂತೆ ಅಂದಿನ ಭೂ ಸ್ವಾಧೀನಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಗೆ ನ್ಯಾಯಾಲಯ ಆದೇಶಿಸಿತ್ತು.
ತೀರ್ಪು ಬಂದು 7 ವರ್ಷವಾದರೂ ಪರಿಹಾರ ನೀಡದೆ ಇರುವುದರಿಂದ ಉಪವಿಭಾಗಾಧಿಕಾರಿ ಕಚೇರಿ ಜಪ್ತಿಗೆ ಬೇಲೂರು ನ್ಯಾಯಾಲಯ ಆದೇಶಿಸಿತ್ತು. ಆದೇಶದ ಅನ್ವಯ 2 ಲಾರಿಗಳಲ್ಲಿ ಅಧಿಕಾರಿಗಳು ಕಚೇರಿಯ ಪೀಠೋಪಕರಣಗಳನ್ನು ತುಂಬಿಕೊಂಡು ನ್ಯಾಯಾಲಯಕ್ಕೆ ಕೊಂಡೊಯ್ದಿದ್ದಾರೆ.