ದಾವಣಗೆರೆ: ಭದ್ರಾ ಜಲಾಶಯ ವ್ಯಾಪ್ತಿಯ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಅಬ್ಬರ ತಗ್ಗಿದೆ. ಇಂದಿಗೆ (ಆಗಸ್ಟ್ 7ರಂದು) 7801 ಕ್ಯೂಸೆಕ್ ಒಳ ಹರಿವಿದೆ. ಒಳ ಹರಿವು ಕುಸಿತ ಆಗಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಜಲಾಶಯದ ಗೇಟ್ ಗಳ ಮೂಲಕ ಭದ್ರಾ ನದಿಗೆ ಹರಿಸುವ ನೀರಿನ ಪ್ರಮಾಣವನ್ನು ತಗ್ಗಿಸಿ ಬೇಸಿಗೆವರೆಗೂ ನೀರು ಉಳಿಸಿಕೊಳ್ಳಬೇಕು ಎಂದು ಅಚ್ಚುಕಟ್ಟು ರೈತರು ಆಗ್ರಹಿಸಿದ್ದಾರೆ.
ಬುಧವಾರ ನೀರಿನ ಮಟ್ಟ 181ಅಡಿ ಇದೆ. ಎಡ ದಂಡೆ ನಾಲೆಗೆ 308 ಕ್ಯೂಸೆಕ್ ಮತ್ತು ಬಲ ದಂಡೆ ನಾಲೆಗೆ 2650 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಈ ಬಾರಿಯ ಮುಂಗಾರು ಹಂಗಾಮಿನ ಬೆಳೆಗೆ 120 ದಿನ ನೀರು ಹರಿಸಲು ಕಾಡಾ ಸಭೆ ನಿರ್ಧಾರ ಕೈಗೊಳ್ಳಲಾಗಿದೆ. ಡ್ಯಾಂ ನಿಂದ ಗೇಟ್ ಗಳ ಮೂಲಕ 7223 ಕ್ಯೂಸೆಕ್ ನದಿಗೆ ನೀರು ಬಿಡಲಾಗುತ್ತಿದೆ.
ಕಳೆದ ವರ್ಷ ಇದೇ ದಿನ 6975 ಕ್ಯೂಸೆಕ್ ಒಳಹರಿವು ಇತ್ತು. 165’7 ಅಡಿ ಮಾತ್ರ ನೀರು ಸಂಗ್ರಹವಾಗಿತ್ತು. ಮಳೆ ಚನ್ನಾಗಿ ಆಗಿರುವುದರಿಂದ ಭದ್ರಾ ಡ್ಯಾಂ ಭರ್ತಿಯಾಗಿ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯ ರೈತರಲ್ಲಿ ಸಂತಸ ಮನೆ ಮಾಡಿದೆ. ಕಳೆದ ಬೇಸಿಗೆಯಲ್ಲಿ ನೀರಿಲ್ಲದೆ, ಅನುಭವಿಸಿದ ಕಷ್ಠ ನೆನೆದು ರೈತರು ಈಗಿನಿಂದಲೇ ಜಾಗರೂಕರಾಗಿದ್ದು, ನದಿಗೆ ನೀರು ಹರಿಸಿ ಪೋಲ್ ಮಾಡದಂತೆ ಜಲ ಸಂಪನ್ಮೂಲ ಇಲಾಖೆಗೆ ರೈತರು ಮನವಿ ಮಾಡಿದ್ದಾರೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ದಾವಣಗೆರೆ ಜಿಲ್ಲೆಯಲ್ಲಿ 65,847 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ನಾಲೆಗೆ ನೀರು ಬಿಟ್ಟಿದ್ದರಿಂದ
ರೈತರು ಭತ್ತ ನಾಟಿಗೆ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಕಳೆದ ವರ್ಷದ ತೀವ್ರ ಬರಗಾಲದಿಂದ ಅತಿ ಕಡಿಮೆ ನೀರು ಸಂಗ್ರಹವಾಗಿತ್ತು. ಈ ಬಾರಿ ಭದ್ರಾ ಜಲಾಶಯವ್ಯಾಪ್ತಿಯಲ್ಲಿ ಮುಂಗಾರು ಪೂರ್ವ ಮಳೆ ಮತ್ತು ಮುಂಗಾರು ಮಳೆಯ ಉತ್ತಮವಾಗಿ ಆಗಿದ್ದರಿಂದ ಕಳೆದ 30 ದಿನದಿಂದ ಭಾರೀ ಮಳೆಯಾಗಿ ಒಂದೇ ತಿಂಗಳಲ್ಲಿ ತುಂಬಿದೆ.
ತರೀಕೆರೆ ಮತ್ತು ಭದ್ರಾವತಿ ಗಡಿ ಭಾಗದಲ್ಲಿರುವ ಲಕ್ಕವಳ್ಳಿಯ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದ್ದು, ಗರಿಷ್ಠ 186 ಅಡಿಯಾಗಿದೆ. ಸದ್ಯದ ಜಲಾಶಯದ ನೀರಿನ ಮಟ್ಟ 181 ಅಡಿಯಷ್ಟಿದೆ. ಒಳ ಹರಿವು 7801 ಕ್ಯೂಸೆಕ್ ನಷ್ಟಿದೆ.