ಮಾಯಾಪೆಟ್ಟಿಗೆಯ ಮಾಯದಾಟ

ಲೇಖನ : ಸೌಮ್ಯ ಗಿರೀಶ್

ಮಾಯಾಪೆಟ್ಟಿಗೆಯ ಮಾಯದಾಟ

ಇಂದು ಬೆಳಗಾಗಿದೆ ಎಂದರೆ ಬಲಗೈಯಲ್ಲಿ ಮೊಬೈಲ್, ಎಡಗೈಯಲ್ಲಿ ರಿಮೋಟ್ ಇದ್ದರೆ ಮಾತ್ರ ಸೂರ್ಯೋದಯವಾದಂತೆ. ಅಷ್ಟರಮಟ್ಟಿಗೆ ಜನರು ತಂತ್ರಜ್ಞಾನದ ದಾಸರಾಗಿದ್ದಾರೆ. ಮೊಬೈಲ್ ಸಾಮಾಜಿಕ ಜಾಲತಾಣಗಳಿಗೆ ಆಸರೆಯಾದರೆ ರಿಮೋಟ್ ’ಟಿವಿ’ ಎಂಬ ಮಾಯಾಪಟ್ಟಿಗೆಯ ಮಾಯಾಲೋಕಕ್ಕೆ ಕರೆದೊಯ್ಯುವ ಸಾರಥಿ. ಈ ಎರಡು ಮಾಯಾಲೋಕಗಳಲ್ಲಿ ಜನರು ಎಷ್ಟು ತಲ್ಲೀನರಾಗಿದ್ದಾರೆ ಎಂದರೆ ಈ ಮಾಯಲೋಕವೇ ನಿಜ, ಇದು ಜೀವನದ ಅವಿಭಾಜ್ಯ ಅಂಗ ಎನ್ನುವಷ್ಟರ ಮಟ್ಟ ತಲುಪಿದ್ದಾರೆ. ಇಷ್ಟೇ ಆದರೆ ಏನೋ ಅನ್ನಬಹುದಿತ್ತು ಆದರೆ ಈ ಮಾಯಾಲೋಕದಲ್ಲೇ ಜೀವನವನ್ನು ಹುಡುಕುತ್ತೇನೆ, ಬದುಕು ಕಟ್ಟಿಕೊಳ್ಳೂತ್ತೇನೆ ಎಂದು ಹೋದವರಲ್ಲಿ ಗೆದ್ದವರು ಎಷ್ಟು ಮಂದಿ?
ಸಾವಿರಾರು ಕಂತುಗಳಲ್ಲಿ ನೂರಾರು ಲೀಟರ್ ಕಣ್ಣೀರು ಸುರಿಸುವ ಸೀರಿಯಲ್ ಕಥೆ ನಮ್ಮ ಮನೆಯ ಕಥೆ ಎಂಬಂತೆ, ಧಾರಾವಾಹಿಯ ನಾಯಕ ನಾಯಕಿಯ ಕ್ಷೇಮ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮಟ್ಟಕ್ಕೆ ಜನರು ದಾಸರಾಗಿದ್ದಾರೆ. ಇನ್ನೊಂದು ಆಘಾತಕಾರಿ ಬೆಳವಣಿಗೆ ಎಂದರೆ ರಿಯಾಲಿಟಿ ಶೋಗಳ ಹುಚ್ಚು.

ರಿಯಾಲಿಟಿ ಶೋಗಳು ಕೆಟ್ಟದ್ದು ಎಂದಲ್ಲ ಇಲ್ಲಿನ ವಾದ. ಅರ್ಚನಾ ಉಡುಪ, ಸೋನು ನಿಗಂರಂತಹ ಕಲಾವಿದರು ಜನಸಾಮಾನ್ಯರಿಗೆ ಪರಿಚಯವಾದದ್ದೂ ಕೂಡ ಒಂದು ರಿಯಾಲಿಟಿ ಶೋನಿಂದಲೇ. ಆದರೆ ರಿಯಾಲಿಟಿ ಶೋಗಳಲ್ಲಿ ಬದುಕು ಕಟ್ಟಿಕೊಳ್ಳಲು ಹೋದವರಲ್ಲಿ ಬದುಕು ಕಟ್ಟಿಕೊಂಡಿರುವ ನಿದರ್ಶನಗಳೂ ಇವೆ ಹಾಗೆಯೇ ಬದುಕನ್ನು ಬಲಿಕೊಟ್ಟಿರುವ ನಿದರ್ಶನಗಳೂ ಇವೆ.

ಸ್ವಚ್ಛಂದ ಹಕ್ಕಿಯಂತೆ ಕಾಡಿನ ಮಡಿಲಲ್ಲಿದ್ದ ಹಳ್ಳಿ ಹೈದ ರಾಜೇಶನ್ನು ಪ್ಯಾಟೆಗೆ ಕರೆಸಲಾಯಿತು, ಶೋ ಗೆದ್ದನಾದರೂ ಇತ್ತ ನಗರದ ಸೋಗಿನಲ್ಲಿರಲಾಗದೆ ಅತ್ತ ಕಾಡಿಗೂ ಮರಳಲಾಗದೆ ಕೊನೆಗೆ ಆ ಅಮಾಯಕ ಜೀವ ಬಲಿಯಾಗಿ ಹೋಯಿತು. ತನ್ನನ್ನು ತಾನೇ ’ಹುಚ್ಚ’ ಎಂದು ಹೇಳಿಕೊಂಡು ತಿರುಗುತ್ತಿದ್ದ ಹುಚ್ಚ ವೆಂಕಟ್ ಹುಚ್ಚಾಟ ಕೂಡ ಇನ್ನೂ ಜನರ ಮನಸ್ಸಲ್ಲಿ ಹಸಿರಾಗಿಯೇ ಇದೆ. ಮಾನಸಿಕವಾಗಿ ಸೋಲನ್ನು ಒಪ್ಪಲಾಗದ, ತಾವು ಮಾತ್ರ ಸರಿ ಲೋಕವೆಲ್ಲಾ ತಪ್ಪು ಎನ್ನುವ ಮನೋಭಾವವನ್ನು ಪ್ರತಿಪಾದಿಸಿ ಅದನ್ನು. ಚೀರಾಟದ ಮೂಲಕ ವ್ಯಕ್ತಪಡಿಸಿ, ಅದನ್ನು ಜನ ಮೆಚ್ಚುತ್ತಿದ್ದಾರೆ ಎಂದು ತಿಳಿದಾಗ ಆ ಹುಚ್ಚಾಟಕ್ಕೆ ಇನ್ನಷ್ಟು ಬಣ್ಣ ಬಳೆಯುವ ಸಮಯ ಸಾಧಕರೂ ಇದ್ದಾರೆ. ಇಂತಹವರ ಸಾಲಲ್ಲಿ ಪ್ರಥಮ್ ನಿಲ್ಲುತ್ತಾರೆಯೇ?

ಇದು ತರ್ಕಕ್ಕೆ ನಿಲುಕದ್ದಲ್ಲ. ಆದರೆ ಆಶ್ಚರ್ಯವೆನಿಸುವುದೆಂದರೆ ತಾನು ’ಒಳ್ಳೆ ಹುಡುಗ’ ಎಂದು ಪ್ರತಿಪಾದಿಸಿಕೊಳ್ಳುವ ಪ್ರಥಮ್ ನಡವಳಿಕೆ ಎಷ್ಟರ ಮಟ್ಟಿಗೆ ’ಒಳ್ಳೆ ಹುಡುಗ’ ಮಾಡುವ ಕೆಲಸ ಎನ್ನುವುದು ಪ್ರಶ್ನೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ಎಲ್ಲರೂ ಕೊಂಡಾಡುವಾಗ ಅದನ್ನು ಸಂಭ್ರಮಿಸುವ ಮನೋಭಾವ ಉಳ್ಳವರು ತಮ್ಮ ಬಗೆಗಿನ ಟೀಕೆ-ಟಿಪ್ಪಣಿಗಳನ್ನೂ ಅಷ್ಟೇ ಸಮಾನವಾಗಿ ಸ್ವೀಕರಿಸಬೇಕಲ್ಲವೆ? ಕೈಯಲ್ಲೊಂದು ಮೊಬೈಲ್, ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಅಭಿಮಾನಿ ಬಳಗ, ಲೈವ್ ಬಂದಾಗ ಸಿಗುವ ರೆಸ್ಪಾನ್ಸ್‌ಗಳನ್ನೇ ಬಂಡವಾಳವಾಗಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪರಾಧ ಎಸಗುವುದು, ಸಮಾಜಕ್ಕೊಂದು ತಪ್ಪು ಸಂದೇಶ ರವಾನಿಸುವುದು ಅಪರಾಧವಲ್ಲವೆ?

ಮಾಡಿದ ರಂಪಾಟವೆಲ್ಲಾ ನಾಟಕವೋ, ಉದ್ದೇಶಪೂರಿತವೋ ಅಥವಾ ವೈಯಕ್ತಿಕ ವಿಷಯವೋ ಎನ್ನುವುದು ಕೇಸು ದಾಖಲಿಸಿರುವ ಪೊಲೀಸರ ತನಿಖೆಯ ನಂತರ ಬಹಿರಂಗವಾಗಲಿದೆ. ಪೊಲೀಸ್ ಬಿಟ್ಟರೂ ಟಿವಿ ಮಾಧ್ಯಮಗಳು ಈ ವಿಷಯವನ್ನು ತಣ್ಣಗಾಗಲು ಬಿಟ್ಟಾರೆಯೇ, ಹಾಗಾಗಿ ಪ್ರಥಮ್‌ನ ಅಸಲಿಯತ್ತು ಬಯಲಾಗುವವರೆಗೂ ಕಾದರೆ ಜನರ ಅಭಿಮಾನಕ್ಕೆ ಪ್ರಥಮ್ ಸಲ್ಲಿಸಿದ ಮರ್ಯಾದೆ ಏನು ಎನ್ನುವುದು ಬಹಿರಂಗವಾಗಲಿದೆ.

ಆದರೆ ಇಲ್ಲಿ ಕಾಡುವ ಪ್ರಶ್ನೆ ಈ ’ಟಿವಿ’ ಎಂಬ ಮಾಯಾಲೋಕದಲ್ಲಿ ನಿರ್ದೇಶಕರಿಗೆ, ನಿರ್ಮಾಪಕರಿಗೆ ಟಿಆರ್‌ಪಿಯ ಯೋಚನೆಯಾದರೆ ಸ್ಪರ್ಧಿಗಳಿಗೆ ಗೆಲ್ಲುವ ತವಕ. ಜೀವನವೇ ಅರಿಯದ ಸಣ್ಣಮಕ್ಕಳನ್ನು ರಿಯಾಲಿಟಿ ಹೆಸರಲ್ಲಿ ಸೆಲೆಬ್ರಿಟಿಗಳನ್ನಾಗಿಸುತ್ತಾರೆ, ಆನಂತರದ ಅವರ ಜೀವನದಲ್ಲಿ ಓದಿನ ಬಗೆಗೆ ಗಮನ ಎಷ್ಟರ ಮಟ್ಟಕ್ಕೆವಹಿಸಬಹುದು. ಪ್ರತಿಭೆಗಳು ಬೆಳಕಿಗೆ ಬರಲು ಒಂದು ಉತ್ತಮ ವೇದಿಕೆ ಆದರೆ ಅದನ್ನು ತೀವ್ರ ಸ್ಪರ್ಧೆಯಾಗಿಸಿ ಮಾನಸಿಕ ಒತ್ತಡ ಹೇರುವುದು ಎಷ್ಟರ ಮಟ್ಟಿಗೆ ಸರಿ. ಸೋತಾಗ ಅಳುವ ಮಕ್ಕಳನ್ನು ನೋಡಿದರೆ ಅವರ ಮಾನಸಿಕ ವೇದನೆ ತಿಳಿಯುತ್ತದೆ. ಮಕ್ಕಳು ನಾಲ್ಕು ದಿನಕ್ಕೆ ಮರೆತು ಮತ್ತೊಂದು ಹೊಸ ದಾರಿಯತ್ತ ಹೊರಡುತ್ತಾರೆ ಆದರೆ ಯುವಕ-ಯುವತಿಯರು ನೂರಾರು ಕನಸುಗಳನ್ನು ಕಟ್ಟಿಕೊಂಡು, ಆ ಬಣ್ಣದ ಮೋಡಿಗೆ ಬಿದ್ದು ಅಲ್ಲೇ ಬದುಕುವ ಆಸೆಯಿಂದ, ಸೆಲೆಬ್ರಿಟಿ ಸ್ಟೇಟಸ್ ಉಳಿಸಿಕೊಳ್ಳಲೆಂದು ತಮ್ಮ ಸುಂದರ ಜೀವನ, ಭವಿಷ್ಯಗಳನ್ನು ಬಲಿಕೊಡುವ ನಿದರ್ಶನಗಳು ಎಷ್ಟೋ ಇವೆ.

ಹುಚ್ಚಾಟಗಳು ತಿಳಿದು ಮಾಡುತ್ತಾರೋ ಅಥವಾ ತಿಳಿಯದೇ ಮಾಡುತ್ತಾರೋ ಆದರೆ ಇಂತಹ ಹುಚ್ಚಾಟಗಳನ್ನು ಟಿಆರ್‌ಪಿಗಾಗಿ ಬಳಸಿಕೊಳ್ಳುವ ರಿಯಾಲಿಟಿ ಶೋಗಳು ಇನ್ನಾದರೂ ತಾವು ಸಮಾಜಕ್ಕೆ ಯಾವ ರೀತಿಯ ಉದಾಹರಣೆಯನ್ನು ನೀಡುತ್ತಿದ್ದಾರೆ ಎಂಬ ಬಗ್ಗೆ ಯೋಚಿಸಲಿ. ಹುಚ್ಚಾಟ ಮಾಡಿದರೆ ನಾನೂ ಜನಪ್ರಿಯತೆ ಗಳಿಸಬಹುದು ಎನ್ನುವ ತಪ್ಪು ಸಂದೇಶ ಜನರಿಗೆ ತಲುಪದೇ ಇರಲಿ. ಜನಪ್ರಿಯತೆ ಮತ್ತು ಜನಮನ್ನಣೆಗೂ, ಸಾಧನೆಗೂ ಬಹಳ ವ್ಯತ್ಯಾಸವಿದೆ. ಜನಪ್ರಿಯತೆ ಸಾಧನೆಯಲ್ಲಿ, ಮತ್ತೊಂದು ಹೊಸನೀರು ಬರುವವರೆಗೂ ಜನಪ್ರಿಯತೆಯ ಸೋಗು ಆದರೆ ಸಾಧನೆ ಕೊನೆಯವರೆಗೂ ಉಳಿಯುವಂತಹದ್ದು. ಹಾಗಾಗಿ ಯುವ ಪೀಳಿಗೆ ಜನಪ್ರಿಯತೆಗಿಂತ ಸಾಧನೆಯತ್ತ ಗಮನಹರಿಸಲಿ. ಮಾಯಾಪೆಟ್ಟಿಗೆಯ ಮಾಯಾಲೋಕವೇ ಜೀವನವೆಂದು ಭಾವಿಸದೆ, ಸಾಧನೆಯ ಹಾದಿಯಲ್ಲಿ ಅದೊಂದು ಮೈಲಿಗಲ್ಲಾಗುವಂತೆ ನೋಡಿಕೊಳ್ಳಿ.