ಶಿವಮೊಗ್ಗ : ನಗರದ ಕಾಶಿಪುರ ಫ್ಲೈ ಓವರ್ ಎಡ ಭಾಗದಲ್ಲಿ ಪಶು ವೈದ್ಯಕೀಯ ಕಾಲೇಜಿಗೆ ಹೋಗುವ ರಸ್ತೆಯ ಎಡ ಭಾಗದಲ್ಲಿ 1, 2 ಮತ್ತು 3ನೇ ಕ್ರಾಸ್‍ನಲ್ಲಿರುವ ಬಡಾವಣೆಗಳಲ್ಲಿ ಶುಕ್ರವಾರ ಸುರಿದ ಸಣ್ಣ ಮಳೆಗೆ ಐದು ಅಡಿಗಳಷ್ಟು ನೀರು ನಿಂತು ದ್ವೀಪದಂತಾಗಿದೆ.
ಶುಕ್ರವಾರ ಸುರಿದ ಸಣ್ಣ ಮಳೆಗೆ ನಗರದ ಕಾಶಿಪುರ ಪ್ರದೇಶ ಸೇರಿದಂತೆ ವಿನೋಬನಗರ ಸಾಯಿ ಮಂದಿರ ಎದುರುಗಡೆ ಚರಂಡಿ ಸರಿ ಇಲ್ಲದ ಕಾರಣ ನೀರು ಮನೆಯೊಳಗೆ ನುಗ್ಗಿದೆ. ಇನ್ನೂ ಹಲವೆಡೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ನಾಗರಿಕರು ಪರದಾಡುವಂತಾಗಿದೆ. ರಾಜ ಕಾಲುವೆಗಳು ಕೆರೆಯಂತಾಗಿ ರಸ್ತೆಗಳಲ್ಲಿಯೇ ನೀರು ನಿಂತು ಅವಾಂತರ ಸೃಷ್ಟಿಸಿದೆ.
ರಾಜಕಾಲುವೆ ಮೂಲಕ ಹೋಗಬೇಕಿದ್ದ ನೀರು ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ರಿವರ್ಸ್ ಹೊಡೆಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶ ನೀರಿನಿಂದ ತುಂಬಿ ದ್ವೀಪದಂತಾಗಿದೆ. ಶುಕ್ರವಾರ ಸುರಿದ ಸಣ್ಣ ಮಳೆಗೆ ಈ ಪರಿ ಅವಾಂತರವಾಗಿದ್ದು, ಮುಂದೆ ಬರುವ ಭಾರಿ ಮಳೆಗೆ ಜನರು ತಲ್ಲಣಗೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯೂ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಗಾಲಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿರುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ತಗ್ಗು ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ನಿಗಾವಹಿಸಬೇಕು.
ಮಳೆಗಾಲದ ಈ ಸಮಸ್ಯೆ ಹಲವಾರು ವರ್ಷಗಳ ಸಮಸ್ಯೆಯಾಗಿದ್ದು, ಈ ಬಗ್ಗೆ ಪಾಲಿಕೆಯ ಆಯುಕ್ತರು ಮತ್ತು ಸ್ಥಳೀಯ ಅಧಿಕಾರಿಗಳು ಹಾಗೂ ಇಂದಿನ ಜನಪ್ರತಿನಿಧಿಗಳ ಗಮನಕ್ಕೆ ಹಲವು ಬಾರಿ ತರಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಭಾರಿ ಮಳೆ ಬಂದರೆ ಇಲ್ಲಿನ ನಿವಾಸಿಗಳ ಗೋಳು ಕೇಳುವವರಿಲ್ಲ. ಹಾಗಾಗಿ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
……………………….
ಈ ಸ್ಥಳ ತಗ್ಗು ಪ್ರದೇಶದಲ್ಲಿರುವ ಕಾರಣ ಇಲ್ಲಿ ಹೆಚ್ಚು ನೀರು ನಿಲ್ಲುತ್ತಿದೆ. ಅದಕ್ಕೆ ಮೇಲಿನಿಂದ ಸ್ಥಳ ಡೈವರ್ಟ್ ಮಾಡಬೇಕು. ತಾತ್ಕಾಲಿಕವಾಗಿ ಜೆಸಿಬಿ ಮೂಲಕ ನೀರು ತಗಿಸಿ ಪರಿಹಾರ ಮಾಡುತ್ತೇವೆ. ಶಾಶ್ವತ ಪರಿಹಾರಕ್ಕೆ ತಗ್ಗು ಪ್ರದೇಶದ ಎದುರು ರೈಲ್ವೆ ಡಿಪಾರ್ಟ್‍ಮೆಂಟ್ ಇರುವಲ್ಲಿ ಸ್ವಲ್ಪ ಅಗಲವಾದ ಜಾಗ ಬೇಕಾಗುತ್ತದೆ. ಹಾಗಾಗಿ ಅವರೊಂದಿಗೆ ಮಾತನಾಡಿ ತೀರ್ಮಾನ ತೆಗೆದುಕೊಂಡು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುತ್ತೇವೆ.
– ಸೆಂತೆಯ್ಯ, ಎಇಇ
ಅವೈಜ್ಞಾನಿಕ ಚರಂಡಿ ಕಾಮಗಾರಿ: ಜಲದಿಗ್ಭಂದನದಿಂದ ದ್ವೀಪದಂತಾದ ರಾಜಕಾಲುವೆ
RELATED ARTICLES