ರೈಲ್ವೆ ನಿಲ್ದಾಣ: ವಿಐಪಿ ಕೊಠಡಿ ಉದ್ಘಾಟನೆ

ಶಿವಮೊಗ್ಗ : ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಹೊಸದಾಗಿ ನಿರ್ಮಿ ಸಲಾಗಿರುವ ವಿಐಪಿ ಕೊಠಡಿಯನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಗೋವಾದಿಂದ ವಿಡಿಯೋ ಲಿಂಕ್ ಮೂಲಕ ಇಂದು ಉದ್ಘಾಟಿ ಸಿದರು.
ರೈಲು ನಿಲ್ದಾಣಕ್ಕೆ ಆಗಮಿಸುವ ಗಣ್ಯ ವ್ಯಕ್ತಿಗಳ ತಾತ್ಕಾಲಿಕ ತಂಗು ವಿಕೆಗೆ ಈ ಕೊಠಡಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸಭಾಪತಿ ಡಿ.ಎಲ್. ಶಂಕರ ಮೂರ್ತಿ ಮಾತನಾಡಿ, ರಾಜ್ಯದಲ್ಲಿ ಹಲವಾರು ರೈಲ್ವೆ ಯೋಜನೆಗಳಿಗೆ ವೇಗ ದೊರೆತಿದೆ. ರೈಲ್ವೆ ಪ್ಲಾಟ್ ಫಾರ್ಮ್‌ಗಳಲ್ಲಿ ಮೂಲ ಸೌಲಭ್ಯ ಗಳನ್ನು ಕಲ್ಪಿಸಲಾಗುತ್ತಿದೆ. ಆದರೆ, ರೈಲ್ವೆ ನಿಲ್ದಾಣಗಳಿಗೆ ಲಿಂಕ್ ರಸ್ತೆ ನಿರ್ಮಾಣ, ದುರಸ್ತಿ ಕಾಮ ಗಾರಿ ಗಳಿಗೆ ಗಮನ ಹರಿಸಬೇಕಾಗಿದೆ ಎಂದರು.
ನಗರದಲ್ಲಿ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ ಸ್ವಲ್ಪ ಭಾಗದಲ್ಲಿ ರೈಲ್ವೆ ಆಸ್ತಿ ಬಂದಿರುವ ಕಾರಣ ಯೋಜನೆ ಪೂರ್ಣ ಗೊಳಿಸಲು ಸಾಧ್ಯವಾಗಿಲ್ಲ. ರೈಲ್ವೆ ಇಲಾಖೆಯು ಈ ಸ್ಥಳವನ್ನು ಹಸ್ತಾಂತ ರಿಸಿದರೆ ಪರ್ಯಾಯವಾಗಿ ಬೇರೆ ಕಂದಾಯ ಜಮೀನು ಒದಗಿಸಲು ಜಿಲ್ಲಾಡಳಿತ ಸಿದ್ಧವಿದೆ. ರೈಲ್ವೆ ಇಲಾಖೆ ಇದನ್ನು ಪ್ರತಿಷ್ಠೆ ವಿಷಯವಾಗಿ ತೆಗೆದುಕೊಳ್ಳದೆ ವರ್ತುಲ ರಸ್ತೆ ನಿರ್ಮಾಣ ಪೂರ್ಣಗೊಳಿಸಲು ಸಹಕರಿಸಬೇಕು ಎಂದು ಕೋರಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್, ಪಾಲಿಕೆ ಮೇಯರ್ ಏಳುಮಲೈ, ರೈಲ್ವೆ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಅಜಯ್ ಸಿನ್ಹಾ ಮೊದಲಾದವರಿದ್ದರು.