ಶಿವಮೊಗ್ಗ: ನಾವು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲದ ಕಾರಣ ನೈರುತ್ಯ ಪದವೀಧರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಅವರಿಗೆ ಬೆಂಬಲ ನೀಡಿದ್ದು, ಅವರ ಗೆಲುವಿಗಾಗಿ ಸಾಕಷ್ಟು ಪ್ರಚಾರ ಕಾರ್ಯವನ್ನು ಬಿರುಸಿನಿಂದ ಮುಂದುವರಿಸಿದ್ದೇವೆ ಎಂದು ರಾಷ್ಟ್ರಭಕ್ತ ಬಳಗದ ಶ್ರೀಕಾಂತ್ ತಿಳಿಸಿದ್ದಾರೆ.
ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಈ ಹಿಂದೆ ೩ ಬಾರಿ ಶಾಸಕರಾಗಿರುವ ಹಿಂದುತ್ವವಾದಿ ಹಿನ್ನೆಲೆಯ ರಘುಪತಿ ಭಟ್ ಅವರಿಗೆ ಬಿಜೆಪಿಯು ಟಿಕೇಟ್ ನಿರಾಕರಿಸಿದೆ. ತಮ್ಮನ್ನು ಪಕ್ಷದಿಂದ ಉಚ್ಚಾಟಿಸಿರುವುದನ್ನು ಟಿ.ವಿ. ಮೂಲಕ ತಿಳಿದುಕೊಳ್ಳಬೇಕಾಗಿ ಬಂದಿದ್ದು ದುರಂತ. ಈ ಹಿಂದೆಯೇ ಅವರಿಗೆ ಟಿಕೇಟ್ ನೀಡುವ ಭರವಸೆಯನ್ನು ನೀಡಲಾಗಿತ್ತು. ಪಕ್ಷಕ್ಕಾಗಿ ದುಡಿದ ಈಶ್ವರಪ್ಪನಂತಹವರಿಗೆ ಟಿಕೇಟ್ ನಿರಾಕರಿಸುವ ಚಾಳಿ ರಘುಪತಿ ಭಟ್ ಅವರಿಗೂ ಮುಂದುವರಿಸಲಾಗಿದೆ. ರಾಷ್ಟ್ರೀಯತೆ, ಹಿಂದುತ್ವಕ್ಕಾಗಿ ನಿರಂತರವಾಗಿ ಹೋರಾಡುತ್ತಿರುವವರನ್ನು ಕಡೆಗಣಿಸುವ ಸರಣಿ ಇಲ್ಲೂ ಇದೆ. ಇದೆಲ್ಲವನ್ನು ಗಮನಿಸಿ ನಮ್ಮ ಸಂಘಟನೆಯು ರಘುಪತಿ ಭಟ್ ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದೇವೆ ಎಂದು ಅವರು ಹೇಳಿದರು.
ರಾಷ್ಟ್ರಭಕ್ತ ಬಳಗದಿಂದ ಮತದಾರರ ಮನೆಮನೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದೇವೆ. ನಗರದ ವಾರ್ಡ್‌ಗಳಲ್ಲಿ ಪರಿಣಿತ ೧೫-೨೦ ಜನರ ತಂಡಗಳನ್ನು ರಚಿಸಿದ್ದು, ಇಂತಹ ೧೬ರಿಂದ ೧೭ ತಂಡಗಳು ನಿರಂತರ ಪ್ರಚಾರ ಕಾರ್ಯವನ್ನು ನಡೆಸುತ್ತಿವೆ. ನಗರದಲ್ಲಿರುವ ೧೦,೫೦೦ ಮತದಾರರಲ್ಲಿ ೮ ಸಾವಿರ ಮತದಾರರನ್ನು ಮುಖ ಭೇಟಿ ಮಾಡಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿಯೂ ಕೆಲವರನ್ನು ಭೇಟಿಯಾಗಿದ್ದೇವೆ ಎಂದು ಮಾಹಿತಿ ನೀಡಿದರು.
ನಾವು ಯಾವುದೋ ಒಂದು ಜಾತಿಯ ಜನರನ್ನು ಭೇಟಿ ಮಾಡದೇ, ಎಲ್ಲರನ್ನು ಭೇಟಿಯಾಗುತ್ತಿದ್ದೇವೆ. ಹಣ ಬಲದ ಪ್ರಚಾರಕ್ಕೆ ತದ್ವಿರುದ್ದವಾಗಿ ಖುದ್ದು ಮತದಾರರನ್ನೇ ಭೇಟಿಯಾಗುತ್ತಿದ್ದೇವೆ. ಇನ್ನೊಂದು ದಿನದಲ್ಲಿ ಉಳಿದ ಮತದಾರರನ್ನು ಭೇಟಿಯಾಗಿ ಮತಯಾಚಿಸಲಿದ್ದೇವೆ. ಅತಿ ಹೆಚ್ಚಿನ ಅಂತರದಲ್ಲಿ ಜಯ ಗಳಿಸಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ಬಾರಿ ಮತದಾರರು ಉತ್ಸಾಹಗೊಂಡು ಜಾಗೃತರಾಗಿದ್ದಾರೆ. ಈ ಬದಲಾವಣೆಗೆ ಮಾಧ್ಯಮದವರ ಪಾತ್ರ ದೊಡ್ಡದಿದೆ. ಶಿವಮೊಗ್ಗ, ದಾವಣಗೆರೆಗಳಲ್ಲಿ ನಮ್ಮ ಬಳಗದಿಂದ ೪೦ ಅಭಿಯಾನಗಳನ್ನು ನಡೆಸಿದ್ದೇವೆ. ದಿನವೊಂದಕ್ಕೆ ೧೦೦೦ ಮತದಾರರನ್ನು ಶಾಲೆ, ಕಾಲೇಜು, ಬ್ಯಾಂಕ್ ಮುಂತಾದ ಕಡೆ ನೇರವಾಗಿ ಭೇಟಿಯಾಗಿದ್ದೇವೆ. ಮತದಾರರು ನಮಗೆ ಮೊದಲ ಪ್ರಾಶಸ್ತ್ಯದ ಮತ ನೀಡುವರೆಂಬ ವಿಶ್ವಾಸವಿದೆ ಎಂದು ರಾಷ್ಟ್ರಭಕ್ತ ಬಳಗದ ಎಂ.ಶಂಕರ್ ಹೇಳಿದ್ದಾರೆ.
ಮತದಾರರು ಯಾರಿಗೆ ಮತ ಚಲಾಯಿಸಬೇಕೆಂದು ಮೊದಲೇ ನಿಶ್ಚಯಿಸಿದ್ದಾರೆ. ಕಾರ್ಯಕರ್ತರು ಉತ್ಸಾಹಭರಿತರಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಜೆಪಿಯು ಮತದಾರರಿಗೆ ನಗದು ವರ್ಗಾವಣೆ ಮಾಡುತ್ತಿರುವುದು ನಮ್ಮ ಕಾರ್ಯಕರ್ತರ ಅಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿಯವರೆಗೂ ಬಿಜೆಪಿಯು ಸಂಘಟನಾತ್ಮಕ ಪ್ರಚಾರದ ಶೈಲಿಯನ್ನು ಉಲ್ಲಂಘಿಸಿಲ್ಲ. ಈಗ ಅಕ್ರಮ ಚಟುವಟಿಕೆ ಮೂಲಕ ಬಿಜೆಪಿಯು ಪ್ರಚಾರ ಕಾರ್ಯಕ್ಕೆ ಹೋಗುತ್ತಿರುವುದು ನಮ್ಮ ಕಾರ್ಯಕರ್ತರನ್ನು ಮತ್ತುಷ್ಟು ಕೆರಳಿಸಿದೆ. ಈ ಅಕ್ರಮವನ್ನು ಖಂಡಿಸುತ್ತೇವೆ. ರಘುಪತಿ ಭಟ್‌ರ ಗೆಲುವು ನಮ್ಮ ಕಾರ್ಯಕರ್ತರ ಗೆಲುವು, ಬಡವರ ಗೆಲುವು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಾಲು, ಸುವರ್ಣಾ ಶಂಕರ್, ಸೋಗಾನೆ ರಮೇಶ್, ಶಂಕರ್ ಉಪಸ್ಥಿತರಿದ್ದರು.