ರಂಗಭೂಮಿಯಿಂದ ಸಿನಿರಂಗದವರೆಗೆ ರಂಗೇರಿಸಿದ ರಘು ಶಿವಮೊಗ್ಗ

ಲೇಖನ : ಸೌಮ್ಯ ಗಿರೀಶ್

ರಂಗಭೂಮಿಯಿಂದ ಸಿನಿರಂಗದವರೆಗೆ ರಂಗೇರಿಸಿದ ರಘು ಶಿವಮೊಗ್ಗ

ಶಿವಮೊಗ್ಗದ ಗೋಪಾಳದ ಗಲ್ಲಿಯಲ್ಲಿ ಆಡಿ ಬೆಳೆದ ಒಬ್ಬ ತುಂಟ ಪೋರ ಇಂದು ಒಬ್ಬ ಭರವಸೆಯ ನಿರ್ದೇಶಕ. ನೂರಾರು ಧಾರಾವಾಹಿ ಕಂತುಗಳನ್ನು ನಿರ್ದೇಶಿಸುತ್ತಾ, ಕಿರುಚಿತ್ರಗಳಿಂದ ಹಿರಿಯ ಮನ್ನಣೆ ಪಡೆಯುತ್ತಾ ಚಿತ್ರನಿರ್ದೇಶನದತ್ತ ಕಾಲಿಡುತ್ತಿರುವ ಶಿವಮೊಗ್ಗದ ಪ್ರತಿಭೆ ರಘು ಶಿವಮೊಗ್ಗರ ಪರಿಚಯ ಇಲ್ಲಿದೆ.

ಗೋಪಾಳದ ತುಂಟ ಹೈದ ರಘು
ಬಾಲ್ಯವೆಂದರೆ ಅದೇ ಅಲ್ಲವೆ, ಒಂದಷ್ಟು ಹುಡುಗಾಟ, ಗೆಳೆಯರೊಂದಿಗಿನ ಆಟೋಟ, ಇಂತಹದ್ದೇ ಸಹಜ ಸುಂದರ ರಘು ಬಾಲ್ಯಕ್ಕೆ ಸಾಕ್ಷಿ ಅವರ ತಂದೆ ಕೆಂಚಪ್ಪ ಮತ್ತು ತಾಯಿ ಗೌರಮ್ಮ. ಅಕ್ಕನ ಮುದ್ದಿನ ತಮ್ಮನಾಗಿ, ಗೋಪಾಳದ ಗಲ್ಲಿಗಳಲ್ಲಿ ಆಡಿಬೆಳೆಯುತ್ತಿದ್ದ ರಘು ತಾನು ಬಣ್ಣದ ಬದುಕಿಗೆ ಕಾಲಿಡುತ್ತೇನೆಂದು ಎಂದೂ ಊಹಿಸಿರಲಿಲ್ಲ. ಇವರ ಚುರುಕುತನದ ಜೊತೆಗೆ ಅಡಗಿದ್ದ ಮತ್ತೊಂದು ಚತುರತೆ ಇವರ ಮಿಮಿಕ್ರಿ ಕಲೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದವರು ಕುಟುಂಬದ ಆಪ್ತರಾಗಿದ್ದ ಮಾನಸರವರು. ಇವರನ್ನು ಮಾನಸಿಕವಾಗಿ ತಯಾರು ಮಾಡಿದ ಮಾನಸ ಇವರಿಗೆ ದಾರಿ ತೋರಿದ್ದು ಶಿವಮೊಗ್ಗದ ಹೆಮ್ಮೆಯ ‘ನೀನಾಸಂ’ನತ್ತ.

ಬದುಕ ರಂಗಮಂಚವ ಪರಿಚಯಿಸಿದ ನೀನಾಸಂ
ಗುರಿಯಿಲ್ಲದ ಜೀವನಕ್ಕೊಂದು ಹೊಸಭಾಷ್ಯ ಬರೆದದ್ದು ನೀನಾಸಂ ಎಂದರೆ ತಪ್ಪಿಲ್ಲ. ಮುಖಕ್ಕೆ ಹಚ್ಚುವ ಬಣ್ಣ, ಬೆಳಕಿನ ಬಣ್ಣ, ನಟನೆಯ ರಂಗಿನ ಜೊತೆಗೆ ನೀನಾಸಂ ಬದುಕನ್ನೂ ಕಲಿಸಿತ್ತು ರಘುರವರಿಗೆ. ನೀನಾಸಂ ಈಗಾಗಲೇ ನೂರಾರು ಜನರಿಗೆ ಬದುಕು ಕಟ್ಟಿಕೊಡುವ ಸಾರ್ಥಕ ಕೆಲಸ ಮಾಡಿದೆ, ಸಂಸ್ಥೆಯ ಉದ್ದೇಶವೂ ಕೂಡ ಅದೇ, ಆ ಸದುದ್ದೇಶದ ಯಶಸ್ಸಿಗೆ ಸಾಕ್ಷಿ ಎಂದರೆ ರಾಘವೇಂದ್ರ ಇಂದು ರಘು ಶಿವಮೊಗ್ಗ ಆಗಿ ಮನೆಮಾತಾಗಿರುವುದು. “ನೀನಾಸಂ ಅನ್ನೋದು ಇಲ್ಲದೇ ಹೋಗಿದ್ದರೆ ನನ್ನ ಜೀವನ ತರಗೆಲೆಯಂತೆ ದಿಕ್ಕಿಲ್ಲದಂತಾಗುತ್ತಿತ್ತೇನೋ” ಎನ್ನುವ ಅವರ ಮಾತುಗಳೇ ಸಾಕ್ಷಿ. ನೀನಾಸಂ ತಿರುಗಾಟದೊಂದಿಗೆ ರಘು ತಮ್ಮೊಳಗಿನ ತಂತ್ರಜ್ಞನನ್ನ, ನಟನನ್ನ, ನಿರ್ದೇಶಕನನ್ನ ಗುರುತಿಕೊಂಡಿದ್ದರು. ೨೦೦೪ರಲ್ಲಿ ನೀನಾಸಂ ಸೇರಿದ ಇವರು ಡಿಪ್ಲೊಮಾ ಇನ್ ಥೀಯೆಟರ್ ಆರ್ಟ್ಸ್ ಮುಗಿಸಿದರು. ಇಷ್ಟು ಹೊತ್ತಿಗೆ ವೃತ್ತಿ ಮತ್ತು ಜೀವನದ ಹಾದಿಗಾಗಿ ಹಪಹಪಿಕೆ ಪ್ರಾರಂಭವಾಗಿತ್ತು, ಅದಕ್ಕೆ ಉತ್ತರವಾದವರು ಸ್ನೇಹಿತ ಅರುಣ್ ಮೂರ್ತಿ.

ಬೆಳವಣಿಗೆಯ ಪ್ರಕಾಶ ಚೆಲ್ಲಿದ ಬೆಳವಾಡಿಯವರು
ಬಣ್ಣವೇ ಬದುಕು ಎಂದು ನಿರ್ಧರಿಸಿದ್ದ ರಘುರವರನ್ನು ಪ್ರಕಾಶ್ ಬೆಳವಾಡಿಯವರ ಸೆಂಟರ್ ಫಾರ್ ಫಿಲಂ ಅಂಡ್ ಡ್ರಾಮದತ್ತ ಕರೆದೊಯ್ದವರು ಗೆಳೆಯ ಅರುಣ್ ಮೂರ್ತಿ. ಬೆಳವಾಡಿಯವರ ಒಡಾನಾಟ ಒಂದು ಯೂನಿವರ್ಸಿಟಿಯ ಶಿಕ್ಷಣದಂತೆ. “ಬಂದವರನ್ನೆಲ್ಲಾ ಬಂಧುಗಳಂತೆ ಬೆಳೆಸುತ್ತಾರೆ ಬೆಳವಾಡಿಯವರು, ನನಗೆ ಅವರು ತಂದೆಯ ಸಮಾನ” ಎನ್ನುವ ಇವರ ಮಾತುಗಳು ಪ್ರಕಾಶ್ ಬೆಳವಾಡಿಯವರು ಮತ್ತು ಅವರ ಸಂಸ್ಥೆ ರಘುರ ವೃತ್ತಿ ಬದುಕಿನಲ್ಲಿ ಬೀರಿದ ಪ್ರಭಾವವನ್ನು ತಿಳಿಸುತ್ತದೆ. ೨೦೦೬ರಲ್ಲಿ ಬೆಳವಾಡಿಯವರ ಗರಡಿ ಸೇರಿದ ಇವರು ೨೦೦೭ರಲ್ಲಿ ಟಿ.ಎನ್.ಸೀತಾರಾಂರವರ ನಿರ್ದೇಶನದ ‘ಮುಗಿಲು’ ‘ಮುಕ್ತ’ ಧಾರಾವಾಹಿಗಳಲ್ಲಿ ನಟಿಸಿದ್ದರು. ಬೆಳವಾಡಿಯವರ ಸಂಸ್ಥೆಯಲ್ಲಿ ದಿನಕ್ಕೆ ೨೫-೨೬ ವಿಶ್ವ ಸಿನಿಮಾಗಳನ್ನು ನೋಡುವ ಅನುಭವ, ಪ್ರತಿಯೊಂದೂ ಒಂದು ವಿಭಿನ್ನ ಅನುಭವ ಮತ್ತು ಕಲಿಕೆಯ ಮಾರ್ಗ. ಇವೆಲ್ಲವೂ ಇವರನ್ನು ಬರಿ ನಟನಾಗದೆ ನಿರ್ದೇಶಕನಾಗಬೇಕು ಎನ್ನುವ ಆಸೆ ಚಿಗುರುವಂತೆ ಮಾಡಿತು. ಈ ಚಿಗುರಿದ ಕನಸಿಗೆ ನೀರೆರೆಯಲು ಪ್ರಾರಂಭಿಸಿದರು.

ನಿರ್ದೇಶನದ ‘ನಿರೀಕ್ಷೆ’
ನಿರ್ದೇಶನದ ಆಸೆಹೊತ್ತ ಇವರ ಮೊದಲ ಕನಸಿನ ಕೂಸು ‘ಮಕ್ಕಳ ರಂಗಭೂಮಿ’ ಎಂಬ ಸಾಕ್ಷ್ಯಚಿತ್ರ. ಅಲ್ಲಿಂದ ನಿರ್ದೇಶನದ ಚಿಗುರು ಒಡೆದು ಬೆಳೆದದ್ದು ‘ನಿರೀಕ್ಷೆ’ಯಲ್ಲಿ. ಮಲಯಾಳಂ ಸಾಹಿತಿ ವೈ.ಕಂ. ಮೊಹಮ್ಮದ್‌ರ ‘ಪ್ರೇಮಲೇಖನಂ’ನ ಎಸ್. ಗಂಗಾಧರಯ್ಯ ಅವರ ಅನುವಾದಿತ ಕಥೆಯನ್ನು ಆಧರಿಸಿ ಮಾಡಿದ ಒಂದು ಕಿರುಚಿತ್ರ ‘ನಿರೀಕ್ಷೆ’. ಹೀಗೆ ಪ್ರಾರಂಭವಾದ ಇವರ ನಿರ್ದೇಶನದ ಪಯಣದ ಮಧ್ಯೆ ಇವರಿಗೆ ದೊರೆತ ಒಂದು ಸಣ್ಣ ನಟನೆಯ ಅವಕಾಶ ಬಿ.ಸುರೇಶ್‌ರ ನಿರ್ದೇಶನದ ‘ಪುಟ್ಟಕ್ಕನ ಹೈವೇ’ ಚಿತ್ರದಲ್ಲಿ. ಅಲ್ಲಿಂದ ಸಿಕ್ಕ ಬಿ.ಸುರೇಶ್‌ರ ಸಾಂಗತ್ಯ ಇವರ ವೃತ್ತಿ ಬದುಕಿಗೆ ಒಂದು ಹೊಸ ತಿರುವನ್ನು ನೀಡಿತು.

‘ಮದರಂಗಿ’ಯಿಂದ ಮನಗೆದ್ದರು
೨೦೧೧ರಲ್ಲಿ ಬಂದ ಜನರ ಮನಗೆದ್ದ ‘ಪ್ರೀತಿ ಪ್ರೇಮ’, ಪ್ರೇಮ ಕಥೆಗಳ ಟೆಲಿಫಿಲಂ ಮಾಲಿಕೆಯಲ್ಲಿ ೨೦ ಟೆಲಿಫಿಲಂಗಳ ನಿರ್ದೇಶನದ ಅನುಭವ ಪಡೆದರು ರಘು. ಈ ಪರಿಕಲ್ಪನೆಯ ರೂವಾರಿ ಬಿ.ಸುರೇಶ್‌ರವರು ಇಷ್ಟು ಹೊತ್ತಿಗಾಗಲೇ ಇವರಲ್ಲಿನ ನಿರ್ದೇಶನಾ ಕೌಶಲ್ಯವನ್ನು ಗುರುತಿಸಿದ್ದರು. ಹಾಗಾಗಿ ಅವರ ನಿರ್ಮಾಣದ ‘ಮದರಂಗಿ’ ಧಾರಾವಾಹಿಯ ಜವಾಬ್ದಾರಿಯನ್ನು ರಘುರ ಹೆಗಲಮೇಲಿರಿಸಿದರು ಬಿ.ಸುರೇಶ್. ೬೭೦ಕಂತುಗಳನ್ನು ಸೊಗಸಾಗಿ ನಿರ್ದೇಶಿಸಿ ನಿರ್ಮಾಪಕರಷ್ಟೇ ಅಲ್ಲದೆ ಜನ ಮನ್ನಣೆಯನ್ನೂ ಪಡೆದರು ರಘು ಶಿವಮೊಗ್ಗ. “ಬಿ.ಸು.ರ ವಿಶೇಷತೆಯೇ ಅದು, ಪ್ರತಿಭೆ ಇದೆ ಎಂದರೆ ಅವಕಾಶ ಕೊಡುವ ಮತ್ತು ಅವರನ್ನು ತಿದ್ದಿ, ತೀಡಿ ಬೆಳೆಸುವ ವಿಶಾಲ ಮನೋಭಾವದವರು. ಅವರು ನನಗೆ ಏನು ಅಂತ ಪದಗಳಲ್ಲಿ ಹೇಳಲಾರೆ” ಎಂದರು ರಘು. ನಿರ್ದೇಶನದ ಒಳಹೊರಗನ್ನು ಅರಿತು, ತನ್ನ ಕಲಿಕೆಯನ್ನು ಒರೆಗೆ ಹಚ್ಚಲು ಇದೊಂದು ಉತ್ತಮ ವೇದಿಕೆಯಾಯಿತು ರಘುರವರಿಗೆ. ‘ನೀನಾಸಂ’ನಿಂದ ಪ್ರಾರಂಭವಾದ ಕಲಿಕೆ ಬೆಳವಾಡಿಯವರ ಗರಡಿಯಲ್ಲಿ ಬೆಳೆಯುತ್ತಾ, ಟಿ.ಎನ್.ಸೀತಾರಾಂರ ಬಳಿ ಪಳಗುತ್ತಾ, ಸುರೇಶ್‌ರ ಸಾಂಗತ್ಯದಲ್ಲಿ ಪಕ್ವಗೊಳ್ಳುತ್ತಾ ರಘುರನ್ನು ಒಬ್ಬ ಯಶಸ್ವೀ ನಿರ್ದೇಶಕನನ್ನಾಗಿಸಿತು.

ಜನ ಮನ್ನಣೆ ಜೊತೆಗೆ ರಾಜ್ಯಪ್ರಶಸ್ತಿ ತಂದುಕೊಟ್ಟ ‘ಚೌಕ ಬಾರ’
ಹೆಸರಿಗೆ ಆಟ ಆದರೆ ಅದು ಬಾಳಲ್ಲಿ ಕೋಲಾಹಲ ಎಬ್ಬಿಸಬಲ್ಲ ಬೇನಾಮಿ ಕರೆಯ ಸುಳಿಯ ಕಥೆ ಹಂದರ ಹೊಂದಿದ್ದ ‘ಚೌಕ ಬಾರ’ ಕಿರುಚಿತ್ರದ ಕಥೆ ಒಂದು ಅನುಭವದಿಂದ ಹುಟ್ಟಿದ್ದು ಎನ್ನುತ್ತಾರೆ ರಘು. ಇಂಥದ್ದೊಂದು ಕಥೆಯನ್ನು ಮಾಡಬೇಕೆಂದಿದ್ದೇನೆ ಎಂದಾಗ ಬಂಡವಾಳ ಹೂಡಿದವರು ನಾಯಕ ನಟ ಸತೀಶ್ ನೀನಾಸಂ. ಮುಖ್ಯ ಭೂಮಿಕೆಯಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ ಹಾಗೂ ಘಟಾನುಘಟಿಗಳು, ಒಂದು ರೂಪಾಯಿ ಸಂಭಾವನೆ ನಿರೀಕ್ಷೆ ಇಲ್ಲದೆ ಉತ್ತಮ ಚಿತ್ರಕ್ಕೊಂದು ಬೆಂಬಲವಾಗಿ ನಿಂತರು. ಮಲ್ಟಿಪ್ಲೆಕ್ಸ್‌ನಲ್ಲಿ ಬಿಡುಗಡೆಗೊಂಡ ಮೊದಲ ಕಿರುಚಿತ್ರ ೫೨ ಪ್ರದರ್ಶನಗಳನ್ನು ರಾಜ್ಯಾದ್ಯಂತ ಕಂಡಿದ್ದು ದಾಖಲೆಯೇ ಸರಿ. ೨೦೧೫ರ ಸಾಲಿನ ‘ಉತ್ತಮ ಕಿರುಚಿತ್ರ’ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಗಳಿಸಿದ್ದು ಇವರ ಕಥೆ ಮತ್ತು ನಿರ್ದೇಶನಕ್ಕೆ ಸಂದ ಗೆಲುವು. “ನನ್ನನ್ನು ನಂಬಿ ಸಿನಿಮಾಕ್ಕೆ ಬಂಡವಾಳ ಹೂಡಿದ ಮತ್ತು ಪ್ರತಿಫಲ ನಿರೀಕ್ಷಿಸದೇ ನಿಂತ ನಟರಿಗೆ ನಾನು ಋಣಿ. ಇದು ಇಡೀ ತಂಡದ ಯಶಸ್ಸು” ಎನ್ನುತ್ತಾರೆ ರಘು.

ಕಿರುತೆರೆಯಿಂದ ಬೆಳ್ಳಿತೆರೆಯತ್ತ
೨೦೧೦ರಲ್ಲೇ ಚಿತ್ರ ನಿರ್ದೇಶಿಸಬೇಕೆಂದುಕೊಂಡಿದ್ದ ಇವರು ಇದೀಗ ‘ಚೂರಿಕಟ್ಟೆ’ ಚಿತ್ರದ ಮೂಲಕ ಚೊಚ್ಚಲ ಚಿತ್ರ ನಿರ್ದೇಶನ ಮಾಡಲು ಹೊರಟಿದ್ದಾರೆ. “೨೦೧೦ರಲ್ಲಿ ಮಾಡದೇ ಇದ್ದದ್ದೆ ಒಳ್ಳೆಯದಾಯಿತು. ಆಗಿನ್ನು ಇಷ್ಟು ಪ್ರೌಢಿಮೆ ಇರಲಿಲ್ಲ. ಈಗಲೂ ಕಲಿಯುತ್ತಿದ್ದೇನೆ ಯಾದರೂ ಅನುಭವಗಳಿಂದ, ಗುರುವಿನಂತೆ ದಾರಿತೋರಿ ಕೆಲಸ ಕಲಿಸಿದವರಿಂದ ಬಹಳಷ್ಟು ಕಲಿತಿದ್ದೇನೆ. ಈಗ ಮಾಡಬಲ್ಲೆ ಎಂಬ ನಂಬಿಕೆಯೂ ಮೂಡಿದೆ.” ಎನ್ನುತ್ತಾರೆ ರಘು. ತಾಳಗುಪ್ಪದ ಒಂದು ಸಣ್ಣ ಗ್ರಾಮ ಚೂರಿಕಟ್ಟೆ, ಇಲ್ಲಿ ನಡೆಯುವ ಒಂದು ಕಥೆಯನ್ನಿಟ್ಟುಕೊಂಡು ಮಾಡುತ್ತಿರುವ ಒಂದು ಥ್ರಿಲ್ಲರ್ ಕಥಾನಕ ‘ಚೂರಿಕಟ್ಟೆ’ ಈ ಸಿನಿಮಾದ ನಾಯಕ ಕೂಡ ಶಿವಮೊಗ್ಗದ ಹುಡುಗ, ‘ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ’ ಮತ್ತು ‘೫ಜಿ’ಯ ನಾಯಕ ಪ್ರವೀಣ್. ಜೊತೆಗೆ ಅಚ್ಯುತ್ ಕುಮಾರ್, ಆರ್ಮುಗ ರವಿಶಂಕರ್ ರಂತಹ ದೊಡ್ಡ ತಾರಾ ಬಳಗವೇ ಇದೆ. ಮಾರ್ಚ್‌ನಿಂದ ಚಿತ್ರೀಕರಣವನ್ನು ಮಲೆನಾಡ ಮಡಿಲಲ್ಲಿ, ತಾಳಗುಪ್ಪ, ಕೋಣಂದೂರು, ಹುಂಚದಲ್ಲಿ ಮಾಡುವ ಯೋಜನೆ ಯನ್ನು ಹಾಕಿಕೊಂಡಿದ್ದಾರೆ ರಘು. ಹೆಸರಿನಿಂದ ಕಾಯಕದವರೆಗೂ ಶಿವಮೊಗ್ಗವನ್ನು ಬಿಡದ ಇವರ ಊರ ಮೇಲಿನ ಒಲವು ನೋಡಿದರೆ ನಿಜಕ್ಕೂ ಇವರು ನಮ್ಮೂರಿನ ಹೆಮ್ಮೆ. ಇವರ ಈ ಚಿತ್ರ ಯಶಸ್ಸು ಕಂಡು ಕೀರ್ತಿ ತಂದುಕೊಡಲಿ ಎನ್ನುವುದೇ ನಮ್ಮ ಹಾರೈಕೆ.

ಸುಮನ್‌ರ ಪ್ರಿಯ ರಘು
ಆರು ವರ್ಷಗಳ ಸುಖೀ ದಾಂಪತ್ಯ. ಇಬ್ಬ ರದ್ದೂ ಒಂದು ರೀತಿಯ ಲೇಖನಿಯುಕ್ತ ಬದುಕು, ಇತ್ತ ಕಥೆ ನಿರ್ದೇಶನಕ್ಕಾಗಿ ರಘು ಲೇಖನಿ ಹಿಡಿದರೆ ಸಂಗಾತಿ ಸುಮನ್ ಪ್ರಿಯ ಪತ್ರಿಕೋದ್ಯಮಕ್ಕಾಗಿ ಲೇಖನಿ ಹಿಡಿದಿ ದ್ದಾರೆ. ಹೌದು ಸುಮನ್ ಪ್ರಿಯ ರಘುರ ಬಾಳ ಸಂಗಾತಿ, ವೃತ್ತಿಯಲ್ಲಿ ಜರ್ನಲಿಸ್ಟ್. ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಹೆರಾಲ್ಡ್‌ಗಳಲ್ಲಿ ಕೆಲಸ ನಿರ್ವಹಿಸಿದ್ದ ಸುಮನ್ ಈಗ ಏಷಿಯಾ ನ್ಯುಸೇಬಲ್‌ನಲ್ಲಿ ಕೆಲಸ ನಿರ್ವಹಿಸುತ್ತಿ ದ್ದಾರೆ. ಬಣ್ಣ ತುಂಬಿದಾಗ ಅಕ್ಷರಕ್ಕೆ ಮೆರುಗು, ಅಕ್ಷರವಿ ದ್ದಾಗ ಬಣ್ಣಕ್ಕೊಂದು ಹೊಸ ಭಾಷ್ಯ, ಇವರಿಬ್ಬರ ಈ ಪಯಣ ಸದಾ ಸಂತಸದಿಂದ ಕೂಡಿರಲಿ. ಒಬ್ಬ ಭರ ವಸೆಯ ನಿರ್ದೇಶಕನನ್ನು ಕೊಟ್ಟ ಹೆಮ್ಮೆ ಶಿವಮೊಗ್ಗೆ ಯದ್ದು. ಇವರ ವೃತ್ತಿ-ಪ್ರವೃತ್ತಿ ಮತ್ತು ಬದುಕು ಸದಾ ಯಶಸ್ಸು ಮತ್ತು ಸಂತಸದಿಂದ ಕೂಡಿರಲಿ ಎನ್ನುವುದೇ ನಮ್ಮ ಹಾರೈಕೆ.