ಶಿವಮೊಗ್ಗ: ಪ್ರತಿಷ್ಠಿತ ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಹಿರಿಯ ನ್ಯಾಯವಾದಿ ಜಿ.ಆರ್.ರಾಘವೇಂದ್ರ ಸ್ವಾಮಿ ಗೆಲುವು ಸಾಧಿಸಿದ್ದಾರೆ.
ಭಾರೀ ಪೈಪೋಟಿ ಏರ್ಪಟ್ಟಿದ್ದ ಅಧ್ಯಕ್ಷ ಸ್ಥಾನದ ಆಯ್ಕೆಗೆ ಚಲಾವಣೆಯಾದ 740 ಮತಗಳಲ್ಲಿ ರಾಘವೇಂದ್ರ ಸ್ವಾಮಿ ಅವರು 561 ಮತಗಳನ್ನು ಗಳಿಸಿದರೆ, ಅವರ ಎದುರಾಳಿ ಕೆ.ಎಂ.ಜಯರಾಂ ಅವರು ೧೭೩ ಮತಗಳನ್ನು ಪಡೆದರು. ವಕೀಲ ಕೆ.ಎಂ. ಜಯರಾಂ ಅವರಿಗಿಂತ 382 ಹೆಚ್ಚು ಮತಗಳನ್ನು ಪಡೆದು ಜಿ.ಆರ್.ರಾಘವೇಂದ್ರ ಸ್ವಾಮಿ ಅವರು ಪ್ರಚಂಡ ಗೆಲುವು ದಾಖಲಿಸಿದರು.
ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಗೆ ಶುಕ್ರವಾರ ಮತದಾನ ನಡೆದಿತ್ತು. ಅದರ ಮತ ಎಣಿಕೆ ಕಾರ್ಯ ಶನಿವಾರ ಶನಿವಾರ ನಡೆಯಿತು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಶ್ರೀನಿವಾಸ್ ಅವರು 428 ಮತ ಪಡೆದು ಗೆಲುವು ಸಾಧಿಸಿದರು. ಈ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ
ಕೆ.ಎಸ್. ದೇವರಾಜ್ ಅವರು ೨೦೪ಮತ ಪಡೆದರೆ, ಜಿ.ಎಸ್. ಶಿವಪ್ಪ ಅವರು ಕೇವಲ ೯೬ ಮತ ಪಡೆದುಕೊಳ್ಳುವುದರಲ್ಲಿ ಹರಸಾಹಸ ಪಟ್ಟರು.
ಇನ್ನು ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಕೀಲರಾದ ಎಂ.ಬಿ. ಮಾಲತೇಶ್ ಮತ್ತು ಉಮೇಶ್ ಕೆ.ಎಲ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಗೆಲುವಿಗಾಗಿ ಕಣದಲ್ಲಿದ್ದ ಇಬ್ಬರು ವಕೀಲರು ತಮ್ಮದೇ ರೀತಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ್ದರು. ಅಂತಿಮವಾಗಿ ಈ ಹೋರಾಟದಲ್ಲಿ ಮಾಲತೇಶ್ ಅವರು 366 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿ ಕೆ.ಎಲ್.ಉಮೇಶ್ ಅವರಿಗೆ ೩೫೩ ಮತ ಬಂದಿವೆ. ಕೇವಲ 13 ಮತಗಳ ಅಂತರದಲ್ಲಿ ಅವರು ಪರಾಭವ ಹೊಂದಿದ್ದಾರೆ.
ನಿರ್ದೇಶಕ ಆಯ್ಕೆಯ ಚುನಾವಣೆಯಲ್ಲಿ ನಿರಂಜನ್ ಮೋಹಿತೆ(421), ಹೆಚ್. ಎಂ. ಜನಾರ್ದನ್(417), ಅತಾವುಲ್ಲಾ ಖಾನ್(376), ಕಿಲಕ ಕುಮಾರಿ(ಮಹಿಳಾ ಮೀಸಲು -371), ನಂದಿನಿ ದೇವಿ(349), ಜಗದೀಶ್(289) ಮತಪಡೆದು ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ. ಸಾರ್ವತ್ರಿಕ ಚುನಾವಣೆಗಳ ಪ್ರಚಾರದ ಯಾವುದೇ ವೈಖರಿಗೆ ಕಡಿಮೆ ಇಲ್ಲದಂತೆ ನಡೆದಿದ್ದ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಚುನಾವಣೆಯೂ, ವಕೀಲರ ವಲಯ ಮಾತ್ರವಲ್ಲದೆ, ಸಾರ್ವಜನಿಕರ ನಡುವೆಯೂ ತೀವ್ರ ಕುತೂಹಲ ಮೂಡಿಸಿತ್ತು.
ಚುನಾವಣೆಗೆ ಹಿಂದೆಂದೂ ಕಾಣದ ಬಗೆಯಲ್ಲಿ ಪ್ರಚಾರ ನಡೆದಿತ್ತು. ಚುನಾವಣಾ ಕಣದಲ್ಲಿದ್ದ ವಕೀಲರು ತಮ್ಮ ಗೆಲವುಗಳನ್ನು ಪ್ರತಿಷ್ಟೆಯಾಗಿಯೇ ತೆಗೆದುಕೊಂಡಿದ್ದರು. ಗೆಲುವಿಗಾಗಿ ಸಿಂಡಿಕೇಟ್ ರಚನೆಯ ಯಾವುದೇ ತಂತ್ರಗಾರಿಕೆಗಳು ಇಲ್ಲಿ ನಡೆದಿರಲಿಲ್ಲವಾದರೂ, ಅವರದೇ ರೀತಿಯಲ್ಲಿ ಪ್ರಚಾರಗಳು ಬಿರುಸಿನಿಂದ ನಡೆದಿದ್ದವು. ಅಂತಿಮವಾಗಿ ಈಗ ಫಲಿತಾಂಶ ಪ್ರಕಟವಾಗಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಮುಂದಿನ ಎರಡು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿ ಆಯ್ಕೆಯಾಗಿದೆ.
ಭರ್ಜರಿ ಸಂಭ್ರಮ
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಸೇರಿದಂತೆ ನೂತನ ಪದಾಧಿಕಾರಿಗಳ ಆಯ್ಕೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಕೀಲರ ಭವನದ ಎದುರು ಘೋಷಣೆ ಕೂಗಿ ಸಂಭ್ರಮಿಸಿದರು. ಆನಂತರ ವಕೀಲರ ಸಂಘದ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು.