ಶಿವಮೊಗ್ಗ : ಹಿರಿಯ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆದು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ದೇಶದ ಬೀದಿ ಬೀದಿಗಳಲ್ಲಿ ಇಂದು ಪೈಶಾಚಿಕತನಗಳು ಎಲ್ಲೆ ಮೀರುತ್ತಿವೆ. ಅನ್ಯಾಯದ ವಿರುದ್ಧ ಸಿಡಿದೆದ್ದ ಧ್ವನಿಗಳನ್ನು ಇಲ್ಲದಾಗಿ ಸಲು ಕತ್ತು ಹಿಸುಕಲಾಗುತ್ತಿದೆ. ಆಡಳಿತ ಯಂತ್ರದ ದಬ್ಬಾಳಿಕೆಯನ್ನು ಪ್ರಶ್ನಿಸುವ ಬರಹ, ಚಿಂತನೆ ಮತ್ತು ವಿಚಾರಧಾರೆಗಳನ್ನು ಅರಗಿಸಿಕೊಳ್ಳಲಾಗದ ಒಂದು ವಿಭಾಗ ಕೇವಲ ಸೈದ್ಧಾಂತಿಕವಾಗಿ ತಮ್ಮನ್ನು ಒಪ್ಪಿಕೊಳ್ಳದ ಕಾರಣಕ್ಕಾಗಿ ಸಾಮಾಜಿಕ ಕಾರ್ಯಕರ್ತರ, ಚಿಂತಕರ, ಪತ್ರಕರ್ತರ ಹಾಗೂ ಪ್ರಗತಿಪರರ ನರ ಹತ್ಯೆಗೆ ಮುಂದಾಗಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಆಕ್ರಮಣಕಾರಿ ಕ್ರಿಯೆಗಳಿಗಿಂತ ಕೋಮುವಾದಿ ಚಿಂತನೆಗಳೇ ಈ ದೇಶಕ್ಕೆ ಮಾರಕವಾಗಿ ಮಾರ್ಪಾಡಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ಈ ವಿಚಾರವಾಗಿ ಮಧ್ಯ ಪ್ರವೇಶಿಸಿ ಹಂತಕರನ್ನು ಬಂಧಿಸಬೇಕು, ಪ್ರಗತಿಪರ ಚಿಂತಕರಿಗೆ ಭದ್ರತೆಯನ್ನು ಖಾತರಿಪಡಿ ಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆಯ ಮೊಹಮದ್ ಆರೀಫ್, ಫಾರೂಕ್, ಮೊಹಮ್ಮದ್ ದಸ್ತಗೀರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕನ್ನಡ ಸೇನೆ ಮನವಿ : ಹಿರಿಯ ಪತ್ರಕರ್ತೆ ಹಾಗೂ ಚಿಂತಕಿ ಗೌರಿ ಲಂಕೇಶ್‌ರನ್ನು ಹತ್ಯೆಗೈದಿರುವವರನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಇಂದು ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಕರ್ನಾಟಕ ಕನ್ನಡ ಸೇನೆ ಒತ್ತಾಯಿಸಿದೆ.
ಭಾರತದ ಸಂವಿಧಾನದ ನಾಲ್ಕು ಅಂಗಗಳಲ್ಲಿ ಪತ್ರಿಕಾ ರಂಗವು ಸಹ ಒಂದು. ಪತ್ರಿಕೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಸಮಾಜದ ಅನ್ಯೂನ್ಯತೆಯ ಬಗ್ಗೆ ಧ್ವನಿ ಎತ್ತುತ್ತಿದ್ದ ಗೌರಿ ಲಂಕೇಶ್ ಕೋಮು ಸೌಹಾರ್ದತೆಯಂತಹ ಮೌಲ್ಯಗಳಿಗೆ ಒತ್ತು ಕೊಡುತ್ತಿದ್ದ ದಿಟ್ಟ ಮಹಿಳೆ. ಗೌರಿ ಲಂಕೇಶ್ ಮತ್ತು ಕಲ್ಬುರ್ಗಿಯವರಂತಹ ಸಾಹಿತಿಗಳು ದುಷ್ಕರ್ಮಿಗಳಿಂದ ಹತ್ಯೆಯಾಗುತ್ತಿದ್ದಾರೆ ಎಂದರೆ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನ ಹುಟ್ಟುತ್ತಿದೆ. ಕೂಡಲೇ ಸರ್ಕಾರ ಗೌರಿ ಲಂಕೇಶ್‌ರವರನ್ನು ಹತ್ಯೆಗೈದಿರುವವರನ್ನು ಬಂಧಿಸಬೇಕು. ನಾಡಿನ ಹಿರಿಯ ಪತ್ರಕರ್ತರು, ಸಾಹಿತಿಗಳಿಗೆ ವಿಶೇಷ ಭದ್ರತೆ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಸೇನೆಯ ರಾಜ್ಯಾಧ್ಯಕ್ಷ ಎ.ನಾಗರಾಜ್ ಅಂಬರ್‌ಕರ್, ಜಿಲ್ಲಾಧ್ಯಕ್ಷ ಆರ್.ನಿಸಾರ್ ಅಹಮ್ಮದ್, ಶಾಂತಮ್ಮ ಮಹದೇವ್, ಕೆ.ಲತಾ, ಲಕ್ಷ್ಮಿ, ವೀಣಾ, ಭವಾನಿ ಶಂಕರ್ ಇನ್ನಿತರರು ಹಾಜರಿದ್ದರು.
ಕನ್ನಡಿಗರ ಕಾರ್ಮಿಕರ ರಕ್ಷಣಾ ವೇದಿಕೆ : ದಿಟ್ಟ ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿಯಾದ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣವನ್ನು ಸಿಐಡಿಗೆ ಒಪ್ಪಿಸಬೇಕೆಂದು ಇಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಕನ್ನಡಿಗರ ಕಾರ್ಮಿಕರ ರಕ್ಷಣಾ ವೇದಿಕೆ ಒತ್ತಾಯಿಸಿದೆ.
ಖ್ಯಾತ ಪತ್ರಕರ್ತರಾಗಿದ್ದ ಪಿ.ಲಂಕೇಶ್ ಅವರ ಪುತ್ರಿಯಾದ ಗೌರಿ ಲಂಕೇಶ್ ಅವರು ಶೋಷಿತರ ಪರ ಧ್ವನಿಯಾಗಿದ್ದರು ಹಾಗೂ ದಲಿತ, ರೈತ ಹಾಗೂ ಮಹಿಳಾ ಪರ ಕನ್ನಡಪರ ಹೋರಾಟಗಳಿಗೆ ತಮ್ಮನ್ನು ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಕನ್ನಡದ ಬೆರಳೆಣಿಕೆ ಮಂದಿ ಸಂಪಾದಕೀಯರಲ್ಲಿ ಗೌರಿ ಪ್ರಮುಖರು. ಇವರನ್ನು ಹತ್ಯೆಗೈದಿರುವುದನ್ನು ವೇದಿಕೆ ಖಂಡಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ವಾಟಾಳ್ ಮಂಜುನಾಥ್, ರವಿ ಸಾಧುಶೆಟ್ಟಿ, ನಿತಿನ್ ರೆಡ್ಡಿ, ವೈಷ್ಣವಿ, ಅರ್ಚನಾ ಇನ್ನಿತರರು ಹಾಜರಿದ್ದರು.