Thursday, July 25, 2024
Google search engine
Homeಇ-ಪತ್ರಿಕೆಭೂಮಿ ಸಮಸ್ಯೆ: 26ಕ್ಕೆ ಪ್ರತಿಭಟನೆ - ಡಿಸಿ ಕಚೇರಿಗೆ ಬೀಗ

ಭೂಮಿ ಸಮಸ್ಯೆ: 26ಕ್ಕೆ ಪ್ರತಿಭಟನೆ – ಡಿಸಿ ಕಚೇರಿಗೆ ಬೀಗ

ಪತ್ರಿಕಾಗೋಷ್ಟಿಯಲ್ಲಿ ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ.ಶ್ರೀನಿವಾಸ್ ಎಚ್ಚರಿಕೆ

ಶಿವಮೊಗ್ಗ : ಶಿವಮೊಗ್ಗ ತಾಲ್ಲೂಕು ಕುಂಚೇನಹಳ್ಳಿ ಹಾಗೂ ಬೀರನಕೆರೆ ಗ್ರಾಮಗಳ ಸುಮಾರು 110 ಕುಟುಂಬಗಳ 200 ಕ್ಕೂ ಹೆಚ್ಚು ಎಕರೆ ಸಾಗುವಳಿ ಭೂಮಿಗಳಿಗೆ ಹಕ್ಕು ಪತ್ರ ನೀಡಿದ್ದರೂ ಕೂಡ ಅದನ್ನು ವಜಾ ಮಾಡಲಾಗಿದೆ. ಇದರ ವಿರುದ್ಧ ಕುಂಚೇನಹಳ್ಳಿ ಗ್ರಾಮಸ್ಥರಿಂದ ಜೂ.26 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಗಂಭೀರ ಹೋರಾಟ ಹಮ್ಮಿಕೊಳ್ಳಲಾಗಿದೆ. ರೈತರ ಅರ್ಜಿ ವಜಾ ಆದರೆ ಜಿಲ್ಲಾಧಿಕಾರಿಗಳ ಕಚೇರಿಯನ್ನ ಬೀಗ ಹಾಕಲಾಗುವುದು ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ.ಶ್ರೀನಿವಾಸ್ ಎಚ್ಚರಿಸಿದರು.

ಸೋಮವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲೆಯ ಸುಮಾರು 110 ಕುಟುಂಬಗಳ ಜಮೀನುಗಳಿಗೆ ಹಕ್ಕು ಪತ್ರ ಹಾಗೂ ಪಹಣಿಯನ್ನು ನೀಡಿದ್ದರೂ ಕೂಡ ಈಗ ಯಾವುದೋ ಉದ್ದೇಶ ಇಟ್ಟುಕೊಂಡು ಹಕ್ಕು ಪತ್ರ ಮತ್ತು ಪಹಣಿಯನ್ನು ವಜಾ ಮಾಡಲಾಗಿದೆ. ನಮ್ಮ ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತ ಬಂದಿವೆ. ಒಂದು ಕಡೆ ಶರಾವತಿ ಸಂತ್ರಸ್ಥರಿಗೆ ಅನ್ಯಾಯವಾದರೆ ಮತ್ತೊಂದು ಕಡೆ ಬಗರ್‍ಹುಕುಂ ಸಾಗುವಳಿದಾರರಿಗೆ ನ್ಯಾಯ ಸಿಕ್ಕಿಲ್ಲ ಎಂದು ದೂರಿದರು.

ಕುಂಚೇನಹಳ್ಳಿ ಮತ್ತು ಬೀರನಕೆರೆ ಗ್ರಾಮಗಳ ಸರ್ವೆ ನಂ. 45,43,82,99 ರ 110 ಕುಟುಂಬಗಳು ಇದೇ ಜಮೀನನ್ನು ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಬೇರೆ ಎಲ್ಲಿಯೂ ಕೂಡ ಜಮೀನು ಇಲ್ಲ. ಆದ್ದರಿಂದ ಇವರ ಬದುಕು ಈಗ ಬೀದಿಗೆ ಬಿದ್ದಿದೆ. ತಕ್ಷಣವೇ ರದ್ದುಗೊಳಿಸಿರುವ ಪಹಣಿ ಮತ್ತು ಹಕ್ಕುಪತ್ರಗಳನ್ನು ಮತ್ತೇ ಮೊದಲಿನಂತೆ ನೀಡಿ ಸಾಗುವಳಿ ಮಾಡಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು. ಅರಣ್ಯ ಇಲಾಖೆಯವರು ರೈತರಿಗೆ ಸದಾ ಕಿರುಕುಳ ನೀಡುತ್ತಲೇ ಬಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾಯ್ದೆಗಳಂತೆ ಹಾಗೂ ನ್ಯಾಯಾಲಯದ ಆದೇಶದಂತೆಯೇ ಸಾಗುವಳಿದಾರರಿಗೆ ಭೂಮಿಹಕ್ಕನ್ನು ನೀಡಲು ಅವಕಾಶವಿದ್ದರೂ ಕೂಡ ಇದುವರೆಗೂ ಯಾವ ಅಧಿಕಾರಿಗಳೇ ಆಗಲಿ, ರಾಜಕಾರಣಿಗಳಾಗಲಿ ಈ ಬಗ್ಗೆ ಪ್ರಯತ್ನ ಪಡದೇ ಇಚ್ಛ ಶಕ್ತಿ ಪ್ರದರ್ಶಿಸದೇ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಶಿವಮೊಗ್ಗದ ಬಸ್‍ಸ್ಟ್ಯಾಂಡ್, ಎಸ್‍ಪಿ ಆಫೀಸ್, ಡಿಸಿ ಆಫೀಸ್, ಡಿಸಿ ಮನೆ ಸೇರಿದಂತೆ ಅನೇಕ ಪ್ರದೇಶಗಳು ಈಗಲೂ ಅರಣ್ಯ ಇಲಾಖೆಯಲ್ಲಿಯೇ ಇವೆ. ಹಾಗಂತ ಅವುಗಳನ್ನು ಕೆಡವಲು ಸಾಧ್ಯವೇ. ಅದೇ ರೀತಿ ಯಡಿಯೂರಪ್ಪನವರ ಫೆಸಿಟ್ ಕಾಲೇಜು ಕೂಡ ಅರಣ್ಯ ಇಲಾಖೆಯಲ್ಲಿಯೇ ಬರುತ್ತದೆ. ಅದರಲ್ಲೂ ಅಭಯಾರಣ್ಯ ವ್ಯಾಪ್ತಿಗೆ ಬರುತ್ತದೆ. ತಮ್ಮ ಕಾಲೇಜುಗಳನ್ನು ಉಳಿಸಿಕೊಳ್ಳಲು ಹೋರಾಟ ಮಾಡುವ ಯಡಿಯೂರಪ್ಪ ಕುಟುಂಬ, ರೈತರ ಸಮಸ್ಯೆಗಳಿಗೆ ಏಕೆ ಸ್ಪಂಧಿಸುವುದಿಲ್ಲ ಎಂದು ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿನಾಯಕ, ತೀರ್ಥನಾಯ್ಕ, ಠಾಕ್ಯನಾಯ್ಕ, ವೆಂಕಟೇಶ ನಾಯ್ಕ, ದಶರಥ ನಾಯ್ಕ, ಶಂಕರ ನಾಯ್ಕ, ಬೂದ್ಯನಾಯ್ಕ, ಜಯರಾಮ್ ನಾಯ್ಕ ಸೇರಿದಂತೆ ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular

Recent Comments