ಶಿವಮೊಗ್ಗ : ರಾಜ್ಯ ಸರ್ಕಾರದ ಸುಪರ್ದಿಗೆ ಬರುವ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಉದ್ದೇಶ ಪೂರ್ವಕವಾಗಿ ನಡೆದಿರುವ ರೂ.187 ಕೋಟಿ ಭ್ರಷ್ಟಾಚಾರದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಗೆ ನ್ಯಾಯ ಸಿಗಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶುಕ್ರವಾರ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಭ್ರಷ್ಟಾಚಾರ ಖಂಡಿಸಿ ಬಿಜೆಪಿ ಎಸ್‍ಟಿ ಮೋರ್ಚಾದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಸಮುದಾಯವನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಮುನ್ನಡೆಗೆ ತರುವ ಉದ್ದೇಶದಿಂದ ರಚಿತವಾಗಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಆತ್ಮಹತ್ಯೆ ನ್ಯಾಯ ಸಿಗಬೇಕು. ಅವರ ಕುಟುಂಬಕ್ಕೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕು. ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸಬೇಕು. ನ್ಯಾಯಯುತ ತನಿಖೆ ಆಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಇನ್ನೂ ಉಗ್ರವಾಗಿ ಹೋರಾಡಲಿದೆ. ಹಣಕಾಸು ಇಲಾಖೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ, ಸಮುದಾಯದ ಪರವಾಗಿ ಸರ್ಕಾರದ ವಿರುದ್ಧ ಧ್ವನಿ ಎತ್ತಿದರು.
ಪ್ರತಿಭಟನೆ ಭಾಷಣ ಮುಗಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಕಾರ್ಯಕರ್ತರನ್ನು ಪೊಲೀಸರು ಬ್ಯಾರಿಕೇಡ್ ಹಾಕುವುದರ ಮೂಲಕ ತಡೆಹಿಡಿದರು. ಅಲ್ಲಿಯೇ ಘೋಷಣೆಗಳನ್ನು ಕೂಗುತ್ತಿದ್ದ ಕಾರ್ಯಕರ್ತರಿಗೆ, ಅಧಿಕಾರಿಗಳು ಕಚೇರಿಯಲ್ಲಿಲ್ಲ ಜನಸ್ಪಂದನೆ ಕಾರ್ಯಕ್ರಮ ನಡೆಯುತ್ತಿದೆ, ಅಲ್ಲಿ ಅಧಿಕಾರಿಗಳು ಇದ್ದಾರೆ ಎಂದು ಪೊಲೀಸರು ತಿಳಿಸಿದರು.
ಆಗ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಕುವೆಂಪು ರಂಗಮಂದಿರಕ್ಕೆ ಹೋಗೋಣವೆಂದು ಹೇಳಿದರು. ಪ್ರತಿಭಟನಾಕಾರರೆಲ್ಲರೂ ರಂಗಮಂದಿರದ ಕಡೆ ನಡೆದರು. ಮಹಾವೀರ ವೃತ್ತದ ಬಳಿ ಬಂದ ಶಾಸಕರು ಮತ್ತು ಸಚಿವರನ್ನು ಪೊಲೀಸರು ತಡೆದು ವಶಕ್ಕೆ ಪಡೆದರೆ, ಇನ್ನೂ ರಂಗಮಂದಿರದ ಗೇಟ್ ಬಳಿ ಬಂದ ಕೆಲ ಕಾರ್ಯಕರ್ತರನ್ನು ತಡೆದು ವಶಕ್ಕೆ ಪಡೆದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ, ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್, ಬಿಜೆಪಿ ಶಿವಮೊಗ್ಗ ನಗರ ಅಧ್ಯಕ್ಷ ಮೋಹನ್ ರೆಡ್ಡಿ ಸೇರಿದಂತೆ ಪಕ್ಷದ ಅನೇಕ ಹಿರಿಯ ಮುಖಂಡರು ಮತ್ತು ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.