ಖಾಸಗಿ ಆಸ್ಪತ್ರೆಗಳ ಪ್ರತಿಭಟನೆ – ಸೇವೆ ಸ್ಥಗಿತ

ಶಿವಮೊಗ್ಗ: ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದಲ್ಲೂ ಇಂದು ಎಲ್ಲಾ ಆಸ್ಪತ್ರೆಗಳನ್ನು ಬಂದ್‌ಗೊಳಿಸಿ ಅದರ ವೈದ್ಯರು ಹಾಗೂ ಸಿಬ್ಬಂದಿ ವರ್ಗ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇಂದು ಬೆಳಿಗ್ಗೆ ೮ರಿಂದ ನಾಳೆ ಬೆಳಿಗ್ಗೆ ೮ರ ವರೆಗೆ ಬಂದ್‌ಗೆ ಐಎಂಎ ರಾಜ್ಯ ಘಟಕ ಎಲ್ಲಾ ರಾಜ್ಯದ ಖಾಸಗಿ ಆಸ್ಪತ್ರೆಗಳು ಸಾಂಕೇ ತಿಕವಾಗಿ ಬಂದ್ ಮಾಡಲು ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಲಾಯಿತು.
ನಗರ ವ್ಯಾಪ್ತಿಯಲ್ಲಿರುವ ಸುಮಾರು ೬೦ ಖಾಸಗಿ ಆಸ್ಪತ್ರೆಗಳ ೮೦೦ಕ್ಕೂ ಹೆಚ್ಚು ವೈದ್ಯರು, ಫಾರ್ಮಾಸಿಸ್ಟ್ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ನಗರದ ಐಎಂಎ ಹಾಲ್‌ನಲ್ಲಿ ಸಭೆ ನಡೆಸಿ ನಂತರ ಗೋಪಿ ವೃತ್ತ, ಮಹಾವೀರ ವೃತ್ತ ದ ಮೂಲಕ ಡಿಸಿ ಕಛೇರಿಗೆ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ವೈದ್ಯಕೀಯ ಸಮುದಾಯವನ್ನ ಬೆದರಿಸಿ ಸೇವೆ ಪಡೆಯುವಂತಹ ಜನವಿರೋಧಿ ಕಾಯ್ದೆಯನ್ನು ರಾಜ್ಯ ಸರ್ಕಾರ ಕೈಬಿಡಬೇಕು, ವೈದ್ಯಕೀಯ ಶಸ್ತ್ರ ಚಿಕಿತ್ಸೆ ನಡೆಸುವಾಗ ರೋಗಿ ಸತ್ತರೆ ವೈದ್ಯರಿಗೆ ಜೈಲು ಶಿಕ್ಷೆ ವಿಧಿಸುವ ಹಕ್ಕನ್ನು ರಾಜ್ಯ ಸರ್ಕಾರ ಕಾಯ್ದೆಯಲ್ಲಿ ತರಲಿಚ್ಚಿಸುತ್ತಿದ್ದು ಇದು ಅವೈಜ್ಞಾನಿಕ ಕಾಯ್ದೆಯಾಗಿರುವುದರಿಂದ ಹಿಂಪಡೆಯ ಬೇಕು, ರಾಜ್ಯ ಸರ್ಕಾರ ಶಸ್ತ್ರ ಚಿಕಿತ್ಸೆಗೆ ನಿರ್ಬಂಧ ಹೇರಲು ಮುಂದಾಗಿರುವುದನ್ನು ಹಿಂಪಡೆಯಬೇಕು ಎಂಬ ಮೂರು ಬೇಡಿಕೆ ಗಳನ್ನು ಸರ್ಕಾರ ಈಡೇರಿಸಬೇಕೆಂದು ವೈದ್ಯರು ಹಾಗೂ ಸಿಬ್ಬಂದಿ ವರ್ಗದವರು ಒತ್ತಾಯಿಸಿದರು.
ಐಎಂಎ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪುರುಷೋತ್ತಮ ಮಾತನಾಡಿ, ನಮ್ಮ ರಾಜ್ಯಾದ್ಯಕ್ಷರು ಕಾಯ್ದೆ ವಿರುದ್ದ ರಾಜ್ಯಾದ್ಯಂತ ಕರೆ ನೀಡಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾ ಗುತ್ತಿದೆ. ಈ ಮಧ್ಯೆ ಒಳ ರೋಗಿಗಳಿಗೆ ತೊಂದರೆ ಆಗದಂತೆ ಹಾಗೂ ತುರ್ತು ಘಟಕಗಳನ್ನು ತೆರೆಯಲಾಗಿದೆ. ಆದರೆ ಹೊರ ರೋಗಿಗಳ ಸೇವೆಯನ್ನು ಎಲ್ಲಾ ಆಸ್ಪತ್ರೆಗಳಲ್ಲಿ ಬಂದ್ ಮಾಡಲಾಗಿದೆ ಎಂದು ಹೇಳಿದರು.
ಈ ಬಂದ್‌ಗಾಗಿ ಖಾಸಗಿ ಆಸ್ಪತ್ರೆಗಳ ಎಲ್ಲಾ ವೈದ್ಯರು, ಸಿಬ್ಬಂದಿಗಳು, ಹಾಗೂ ಹೊರ ಮತ್ತು ಒಳ ಫಾರ್ಮಸಿಸ್ಟ್‌ಗಳಿಗೂ ಕೈಜೋಡಿ ಸಲು ಮನವಿ ಮಾಡಿಕೊಳ್ಳಲಾಗಿತ್ತು. ಸುಮಾರು ೮೦೦ಕ್ಕೂ ಅಧಿಕವಾಗಿ ಎಲ್ಲರೂ ಸ್ಪಂದಿಸಿದ್ದಾರೆ ಎಂದ ಅವರು, ಬೆಳಗಾವಿ ಅಧಿವೇಶನದಲ್ಲಿ ಈ ಮಸೂದೆ ಜಾರಿಗೆ ತರಲು ಸರ್ಕಾರ ಮುಂದಾಗಿದ್ದು ತಕ್ಷಣವೇ ನಮ್ಮ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಹಾದಿ ಹಿಡಿಯಲಾಗುವುದು ತಿಳಿಸಿದರು.
ಮಾಧ್ಯಮ ಮತ್ತು ಟಿವಿಗಳಲ್ಲಿ ಖಾಸಗಿ ಆಸ್ಪತ್ರೆಗಳು ಇಂದು ಬಂದ್ ಮಾಡಲು ಮುಂದಾಗಲಿದ್ದಾರೆ ಎಂಬ ಸೂಚನೆ ತಿಳಿದುಬಂದ ಹಿನ್ನೆಲೆಯಲ್ಲಿ ಮೂರು ದಿನ ಹಿಂದೇ ಸರ್ಕಾರಿ ಆಸ್ಪತ್ರೆಗಳ ವೈದ್ಯ ಹಾಗೂ ಇತರೆ ಸಿಬ್ಬಂದಿಗಳೊಂದಿಗೆ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಹೆಚ್ಚಿನ ವೈದ್ಯರನ್ನು ತಾಲೂಕಿನ ಆಸ್ಪತ್ರೆಗಳಲ್ಲಿ ನೇಮಿಸಲಾಗಿದೆ. ಅಲ್ಲದೆ, ವೈದ್ಯರು ರಜೆ ಹಾಕದಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಐಎಂಎ ಕಾರ್ಯದರ್ಶಿ ಡಾ.ರವೀಶ್, ಪ್ರಮುಖರಾದ ಡಾ.ಕೆ.ಆರ್.ಶ್ರೀಧರ್, ಡಾ.ಧನಂಜಯ ಸರ್ಜಿ, ಡಾ.ವಾಣಿ ಕೋರಿ, ಡಾ.ಪಿ.ಕೆ.ಪೈ, ಡಾ.ಪ್ರಿಯಂವಧ, ಡಾ.ಮಲ್ಲೇಶ್ ಹುಲ್ಲುಮನಿ ಇನ್ನಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.