ಸಾಗರ : ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ವಿಶ್ವಸಂಸ್ಥೆ ಧ್ವನಿ ಎತ್ತಬೇಕು. ಹಿಂದೂ ಬಾಂಧವರನ್ನು ರಕ್ಷಣೆ ಮಾಡಲು ಸಮರೋಪಾದಿಯ ಕಾರ್ಯಚಟುವಟಿಕೆ ಕೈಗೊಳ್ಳಬೇಕು ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಒತ್ತಾಯಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಾಂಗ್ಲಾ ದೇಶದಲ್ಲಿ ಪ್ರಧಾನ ಮಂತ್ರಿ ಬದಲಾವಣೆ ವಿಷಯಕ್ಕೆ ನಡೆಯುತ್ತಿರುವ ರಾಜಕೀಯ ಸಂಘರ್ಷದಲ್ಲಿ ಹಿಂದೂ ಬಾಂಧವರನ್ನು ಬಲಿಪಶು ಮಾಡಲಾಗುತ್ತಿದೆ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಹಿಂದೂ ದೇಗುಲಗಳ ಧ್ವಂಸ ಸೇರಿದಂತೆ ಹಿಂದೂ ಬಾಂಧವರನ್ನು ಟಾರ್ಗೇಟ್ ಮಾಡಲಾಗುತ್ತಿದೆ ಎಂದು ದೂರಿದರು.
ದೇಶ ವಿಭಜನೆಯ ಸಂದರ್ಭದಲ್ಲಿ ಶೇ. ೩೨ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ. ೮ಕ್ಕೆ ಇಳಿದಿದೆ. ಬಾಂಗ್ಲಾ ದೇಶದ ಜಿಹಾದಿಗಳ ಅಟ್ಟಹಾಸಕ್ಕೆ ಹಿಂದೂಗಳು ಬಲಿಯಾಗುತ್ತಿದ್ದಾರೆ. ಅಲ್ಪಸಂಖ್ಯಾತ ಹಿಂದೂಗಳ ಸುರಕ್ಷತೆಗೆ ವಿಶ್ವಸಮುದಾಯ ಮುಂದಾಗುವ ತೀರ ಅಗತ್ಯವಿದೆ. ಭೀಕರ ಪರಿಸ್ಥಿತಿಯ ಲಾಭವನ್ನು ಪಡೆಯಲು ಗಡಿಯಾಚೆಯಿಂದ ಜಿಹಾದಿಗಳು ಭಾರತ ದೇಶದೊಳಗೆ ನುಗ್ಗುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಹಿಂದೂಗಳಿಗೆ ಸಂಕಷ್ಟ ಎದುರಾಗಿರುವ ಈ ತುರ್ತು ಸಂದರ್ಭದಲ್ಲಿ ಪಕ್ಷ, ಜಾತಿಯನ್ನು ಮರೆತು ಸiಸ್ತರು ಒಂದಾಗಿ ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ರಕ್ಷಣೆಗೆ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.
ವಿಶ್ವಹಿಂದೂ ಪರಿಷತ್ ಪ್ರಮುಖ ರಾಜೇಶ್ ಗೌಡ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಅವರ ಆಡಳಿತ ಸಮಸ್ಯೆ ಬಗೆಹರಿಸಿಕೊಳ್ಳಲು ನಡೆದ ಪ್ರತಿಭಟನೆ ಹಿಂದೂಗಳ ಹತ್ಯೆಗೆ ಬಳಕೆ ಮಾಡಿಕೊಳ್ಳುತ್ತಿರುವುದು ಖಂಡನೀಯ. ಪ್ರಪಂಚದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವಾದರೆ ಎಲ್ಲರೂ ಅದರ ಬಗ್ಗೆ ಧ್ವನಿ ಎತ್ತುತ್ತಾರೆ. ಆದರೆ ಬಾಂಗ್ಲಾ ದೇಶದಲ್ಲಿರುವ ಹಿಂದೂ ಅಲ್ಪಸಂಖ್ಯಾತರ ಮೇಲೆ ನಿರಂತರ ನಡೆಯುತ್ತಿರುವ ದಬ್ಬಾಳಿಕೆ ವಿರುದ್ದ ಯಾರೂ ಧ್ವನಿ ಎತ್ತದೆ ಇರುವುದು ದುರದೃಷ್ಟಕರ ಸಂಗತಿ. ಭಾರತ ಸರ್ಕಾರ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿ ಬಾಂಗ್ಲಾ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು. ಬಾಂಗ್ಲಾ ದೇಶೀಯರು ಶಿವಮೊಗ್ಗ ಜಿಲ್ಲೆಯ ಬೇರೆಬೇರೆ ತಾಲ್ಲೂಕುಗಳಲ್ಲಿ ವಾಸವಿದ್ದಾರೆ. ಅವರನ್ನು ಸ್ಥಳೀಯ ಆಡಳಿತ ಹೊರಗೆ ದಬ್ಬುವ ಕೆಲಸ ಮಾಡದೆ ಹೋದಲ್ಲಿ ಮುಂದೆ ನಮ್ಮಲ್ಲಿನ ಹಿಂದೂಗಳ ಮೇಲೂ ದಬ್ಬಾಳಿಕೆ ನಡೆದರೆ ಆಶ್ಚರ್ಯವಿಲ್ಲ ಎಂದರು.
ಗೋಷ್ಟಿಯಲ್ಲಿ ಭಜರಂಗ ದಳದ ಪ್ರಮುಖರಾದ ಸಂತೋಷ್ ಶಿವಾಜಿ, ಮಂಜುಗೌಡ, ಪ್ರಜೀತ್, ಸುನೀಲ್ ರುದ್ರಪ್ಪ, ರಾಘವೇಂದ್ರ ಉಪಸ್ಥಿತರಿದ್ದರು.