ಒಂದು ಕೋಟಿ ಮನೆಗಳಿಗೆ ಸೋಲಾರ್ ರೂಫ್ ಟಾಪ್ : ಎಸ್.ರುದೇಗೌಡ
ಶಿವಮೊಗ್ಗ : ಕೇಂದ್ರ ಸರ್ಕಾರವು ದೇಶದಲ್ಲಿ ಪ್ರಧಾನ ಮಂತ್ರಿ ಸೂರ್ಯಘರ್ ಸೋಲಾರ್ ರೂಫ್ ಟಾಪ್ ಸಬ್ಸಿಡಿ ಯೋಜನೆ ಅಡಿ ಒಂದು ಕೋಟಿ ಮನೆಗಳಿಗೆ ಸೋಲಾರ್ ರೂಫ್ ಟಾಪ್ ಅಳವಡಿಸುವ ಗುರಿ ಹೊಂದಿದ್ದು, ಗ್ರಾಹಕರಿಗೆ ಸಬ್ಸಿಡಿ ಸಹ ನೀಡಲಿದೆ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಹಾಗೂ ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಹೇಳಿದರು.
ಟಾಟಾ ಪವರ್ ಸೋಲಾರ್ ರೂಫ್‍ನ ಚಾನಲ್ ಪಾಟ್ರ್ನರ್ ಎಸ್.ಎಸ್ ಏಜೆನ್ಸಿಸ್ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಸಹಯೋಗದಲ್ಲಿ ಶುಕ್ರವಾರ ಸಂಜೆ ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಹೋಟೆಲ್ ಗ್ರೀನ್ ವ್ಯೂ ಕ್ಲಾರ್ಕ್ ಇನ್‍ನಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಸೂರ್ಯಘರ್ ಸೋಲಾರ್ ರೂಫ್ ಟಾಪ್ ಸಬ್ಸಿಡಿ ಯೋಜನೆ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಹಾಗೂ ಈ ಯೋಜನೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ದೀರ್ಘ ಕಾಲದ ಕಡಿಮೆ ಬಡ್ಡಿ ಸೌಲಭ್ಯವನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಿ ಮಾತನಾಡಿದ ಅವರು, ಸೂರ್ಯಘರ್ ಸೋಲಾರ್ ರೂಫ್ ಟಾಪ್ ಯೋಜನೆಯಿಂದ ಜಾಗತಿಕ ತಾಪಮಾನ ಕಡಿಮೆ ಮಾಡಬಹುದು. ಅಲ್ಲದೆ ಪ್ರತಿ ಮನೆಗೆ ಅಗತ್ಯ ಇರುವ ವಿದ್ಯುತ್ತನ್ನು ತಾವೇ ಉತ್ಪಾದಿಸಿಕೊಳ್ಳುವ ಮೂಲಕ ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಗಳಾಗಬಹುದು ಎಂದರು.
ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸ್ಥಳೀಯ ಸಂಸ್ಥೆಯಾಗಿರುವ ಎಸ್.ಎಸ್ ಏಜೆನ್ಸಿಸ್ ಮುಂದಾಗಿದೆ. ಈ ಸಂಸ್ಥೆಯು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಟಾಟಾ ಪವರ್ ಸೋಲಾರ್‍ನ ಗ್ರಾಹಕರನ್ನು ಹೊಂದಿದೆ. ಸೂರ್ಯಘರ್ ಸೋಲಾರ್ ರೂಫ್ ಟಾಪ್ ಯೋಜನೆ ಅಳವಡಿಸಿಕೊಳ್ಳಲು ಇಚ್ಛಿಸುವವರಿಗೆ ಎಸ್.ಎಸ್ ಏಜೆನ್ಸಿಸ್ ಏಕ ಗವಾಕ್ಷಿ (ಸಿಂಗಲ್ ವಿಂಡೋ) ಪದ್ಧತಿ ಮೂಲಕ ಎಲ್ಲಾ ಸೌಲಭ್ಯಗಳನ್ನು ಒಂದೇ ಕಡೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥ ಯು.ವಿಶುಕುಮಾರ್ ಮಾತನಾಡಿ, ಸೌರಶಕ್ತಿ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಗ್ರಾಹಕರಿಗೆ ಈ ಯೋಜನೆ ಅನುಕೂಲಕರವಾಗಿದೆ ಎಂದರು.
ಈ ಸಂದರ್ಭದಲ್ಲಿ ಟಾಟಾ ಪವರ್ ಸೋಲಾರ್‍ನ ಬ್ರಾಂಚ್ ಮ್ಯಾನೇಜರ್ ಕಾರ್ತಿಕ್ ಗೌಡ, ಸೇಲ್ಸ್ ಎಕ್ಸಿಕ್ಯೂಟಿವ್ ದರ್ಶನ್ ಹೆಗಡೆ, ಟಾಟಾ ಪವರ್ ಸೋಲಾರ್‍ನ ಚಾನಲ್ ಪಾರ್ಟನರ್ ಎಸ್.ಎಸ್ ಏಜೆನ್ಸಿಯ ಎಸ್.ಎಂ ಶಣೈ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.