ಪ್ರತಾಪ್‌ಸಿಂಹ ಬಂಧನಕ್ಕೆ ಒತ್ತಾಯ

ಶಿವಮೊಗ್ಗ : ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹರ ದೌರ್ಜನ್ಯ ಹಾಗೂ ಟಿ.ವಿ. ವಾಹಿನಿಯೊಂದರ ವರದಿಗಾರನ ಮೇಲೆ ತುಮಕೂರಿನ ಬಿಜೆಪಿ ಮುಖಂಡರು ನಡೆಸಿರುವ ಹಲ್ಲೆಯನ್ನು ಖಂಡಿಸಿ ಯುವ ಜೆಡಿಎಸ್ ಹಾಗೂ ಜೆಡಿಎಸ್ ಕಾರ್ಮಿಕ ವಿಭಾಗದ ವತಿಯಿಂದ ಇಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹುಣಸೂರಿನಲ್ಲಿ ಹನುಮ ಭಕ್ತರ ಪಾದಯಾತ್ರೆಯ ಸಮಯದಲ್ಲಿ ಬಿಜೆಪಿ ಸಂಸದ ಪ್ರತಾಪ ಸಿಂಹರು ಬಂದೋಬಸ್ತ್‌ಗೆ ಅಳವಡಿಸಿದ್ದ ಬ್ಯಾರಿಕೇಡ್ ಮೇಲೆ ತಮ್ಮ ವಾಹನ ನುಗ್ಗಿಸಿ, ಪೊಲೀಸರನ್ನು ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ಖಂಡನೀಯ ಎಂದು ಹೇಳಿದರು.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭ ದಲ್ಲಿ ಧರ್ಮ ಮತ್ತು ಜಾತಿ ನಡುವೆ ಸಂಘರ್ಷ ಹುಟ್ಟು ಹಾಕಿ ಓಟ್ ಬ್ಯಾಂಕ್ ರಾಜಕಾರಣ ಮಾಡುವ ಬಿಜೆಪಿಯ ಜನಪ್ರತಿನಿಧಿಗಳು ಪ್ರಜಾ ಪ್ರಭುತ್ವದ ಮೌಲ್ಯ ಕಾಪಾಡುವ ನಿಟ್ಟಿನಲ್ಲಿ ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕೆಂದರು.
ತುಮಕೂರಿನಲ್ಲಿ ಟಿ.ವಿ. ವಾಹಿನಿಯೊಂದರ ವರದಿಗಾರನ ಮೇಲೆ ದೌರ್ಜನ್ಯ ಎಸಗಿರುವ ಬಿಜೆಪಿಯ ಮುಖಂಡರ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ಆಡಳಿತ ವೈಫಲ್ಯದ ವಿರುದ್ಧ ಜನರು ಧಂಗೆ ಏಳುತ್ತಾರೆ ಎಂದು ಹೇಳಿದರು.
ಜನಸಾಮಾನ್ಯರಿಗೆ ಒಂದು ಕಾನೂನು, ಜನಪ್ರತಿನಿಧಿಗಳಿಗೆ ಇನ್ನೊಂದು ಕಾನೂನು ಇದೆಯೇ ಎಂಬುದನ್ನು ಬಿಜೆಪಿ ನಾಯಕರು ಅರಿತುಕೊಳ್ಳಬೇಕು. ಪ್ರತಾಪ್‌ಸಿಂಹ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ಉಗ್ರ ಪ್ರತಿಭಟನೆ ಎಂದರೆ ಲಾಠಿ ಚಾರ್ಜ್, ಆಶ್ರುವಾರ್ಯು ಸಿಡಿತದಂತಹ ಗಲಭೆ ಸೃಷ್ಟಿಸಿ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಿಳಿಸಿರುವುದು ಆಘಾತಕಾರಿಯಾಗಿದೆ. ಈ ಹೇಳಿಕೆ ಯನ್ನು ಸಾಕ್ಷಿಯಾಗಿ ಸ್ವೀಕರಿಸಿ ಪೊಲೀಸ್ ಇಲಾಖೆಗೆ ತಮ್ಮ ಕರ್ತವ್ಯ ನಿರ್ವಹಿ ಸಲು ಅಡ್ಡಿಪಡಿಸಿ, ವಾಹನ ಚಲಾಯಿ ಸುವುದನ್ನು ಪರಿಗಣಿಸಿ, ಸಿಂಹ ವಿರುದ್ಧ ತಕ್ಷಣ ಕಾನೂನು ಕ್ರಮಕೈ ಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೇಯರ್ ಏಳುಮಲೈ, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಜಿ.ಡಿ. ಮಂಜುನಾಥ್, ಪಾಲಿಕೆ ಸದಸ್ಯ ಹೆಚ್.ಪಾಲಾಕ್ಷಿ, ನರಸಿಂಹ ಗಂಧದ ಮನೆ, ವಿನ್ಸೆಂಟ್, ವಿನಯ್, ರವಿಕುಮಾರ್, ಮಹಮದ್ ಗೌಸ್, ರಾಘವೇಂದ್ರ ಮೊದಲಾದ ವರಿದ್ದರು.