ಶಿವಮೊಗ್ಗ: ನಮ್ಮ ಹಕ್ಕಿನ ಹೋರಾಟ ಇಂದು ಅತ್ಯಗತ್ಯವಾಗಿದ್ದು, ಇದಕ್ಕಾಗಿ ಜಸ್ಟ್ ಆಸ್ಕಿಂಗ್ ಆಂದೋಲನವನ್ನು ಪ್ರಾರಂಭಿಸುತ್ತಿದ್ದೇನೆ. ಜನರು ರಾಜಕಾರಣಿಗಳಿಗೆ ಪ್ರತಿಯೊಂದನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದೇ ಇದರ ಉದ್ದೇಶ. ಇದರಿಂದ ಸಮಾಜ ಸುಧಾರಣೆ ಸಾಧ್ಯ ಎಂದು ನಟ, ಚಿಂತಕ ಪ್ರಕಾಶ್ ರೈ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇಂದು ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾನು ಹಿಂದೂ ವಿರೋಧಿಯಲ್ಲ, ಕಮ್ಯುನಿಷ್ಟ್ ಅಲ್ಲ, ಪ್ರಜಾಪ್ರಭುತ್ವವನ್ನು ನಂಬಿದ್ದೇನೆ. ಬಹುಸಂಖ್ಯಾತರಾದ ಜನರು ಅಲ್ಪಸಂಖ್ಯಾತರಾದ ರಾಜಕಾರಣಿಗಳ ಪ್ರತಿ ತಪ್ಪು ನಿರ್ಧಾರಗಳನ್ನು ಪ್ರಶ್ನಿಸಬೇಕು, ನೀಡಿದ ಭರವಸೆ ಈಡೇರಿಸದಿದ್ದರೂ ಪ್ರಶ್ನಿಸಬೇಕು. ಆದರೆ ಇಂದು ಪ್ರಶ್ನಿಸುವವರೇ ಇಲ್ಲವಾಗಿದೆ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಎಲ್ಲರನ್ನು ಈ ನಿಟ್ಟಿನಲ್ಲಿ ಕರೆದೊಯ್ಯುವ ಪ್ರಯತ್ನ ನನ್ನದು ಎಂದರು.
ಯಾವುದೇ ಸರ್ಕಾರ ಇದ್ದರೂ ಜನರಿಗೆ ಪ್ರಶ್ನಿಸುವ ಅಧಿಕಾರ ನೀಡಬೇಕು, ಪ್ರತಿಯೊಂದು ವಿಷಯಕ್ಕೆ ಪ್ರಶ್ನಿಸಿದರೆ ಮಾತ್ರ ಸಮಾಜದಲ್ಲಿ ಸುಧಾರಣೆ ಸಾಧ್ಯ ಎಂದ ಅವರು, ಪ್ರಸ್ತುತ ಕೋಮುವಾದಿಗಳ ವಿರುದ್ಧ ನಿಂತಿದ್ದೇನೆ, ಜಾತಿವಾದ ಕೆಟ್ಟದ್ದು, ಇದೇ ದೇಶದ ದೊಡ್ಡ ಸಮಸ್ಯೆ, ಉಳಿದವು ನಂತರದಲ್ಲಿವೆ. ಆದ್ದರಿಂದ ಇದಕ್ಕೆ ಒತ್ತು ನೀಡಿದ್ದೇನೆ. ಈ ವಿಚಾರದಲ್ಲಿ ನಾನು ಏಕಮುಖ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಯಾವುದೇ ಸರ್ಕಾರವನ್ನು ಪ್ರಶ್ನಿಸಲು ನಾನು ಸಿದ್ಧ ಎಂದರು.
ಯಾರಾದರೋ ಕೊಲೆಯಾದರೆ ಹಿಂದೂ ಹತ್ಯೆ ಅಥವಾ ಮುಸಲ್ಮಾನ ಹತ್ಯೆ ಎಂದು ಹೇಳುವುದು ಸರಿಯಲ್ಲ, ಮನುಷ್ಯನ ಹತ್ಯೆ ಎಂದು ಹೇಳುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದ ಅವರು, ಆಹಾರ ಪದ್ಧತಿ ಬಗ್ಗೆಯೂ ಅನಗತ್ಯ ಚರ್ಚೆ ಆಗುತ್ತಿದೆ. ಆಹಾರ ಅವರವರ ಇಷ್ಟ. ಗೋವು ಹಿಂದೂ, ಕುರಿ ಮುಸ್ಲಿಂ ಎಂದು ನಿರ್ಧಾರ ವಾಗಿದೆಯೇ ಎಂದು ಪ್ರಶ್ನಿಸಿದರು.
ಬಿಜೆಪಿಯಿಂದ ಪ್ರತಿ ವರ್ಷ ೨ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರೂ ಆಗಿಲ್ಲ, ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ಜಮಾ ಮಾಡುವುದಾಗಿ ಹೇಳಿದ್ದು ಈಡೇರಿಲ್ಲ, ಇದನ್ನು ಪ್ರಶ್ನಿಸುವಂತಿಲ್ಲವೇ ಎಂದ ಅವರು, ಸುಳ್ಳು ಹೇಳಿ ಬದುಕುವಲ್ಲಿ ಅರ್ಥವಿಲ್ಲ, ಜನರಿಗೆ ಸತ್ಯ ಹೇಳಬೇಕು. ದೇಶದ ಹಿತಕ್ಕೆ ತಕ್ಕಂತೆ ಪ್ರಣಾಳಿಕೆ ನೀಡಬೇಕು ಎಂದರು.
ಈ ನಿಟ್ಟಿನಲ್ಲಿ ಜಸ್ಟ್ ಆಸ್ಕಿಂಗ್ ಫೌಂಡೇಷನ್ ಸ್ಥಾಪಿಸುತ್ತಿದ್ದು, ಇದರ ಮೂಲಕ ರಾಜಕಾರಣಿಗಳಿಗೆ ಆಯಾ ಭಾಗದ ಸಮಸ್ಯೆ ಬಗ್ಗೆ ಪ್ರಶ್ನಿಸಲಾಗುವುದು. ಇದಕ್ಕಾಗಿ ವಾಟ್ಸಪ್ ಗ್ರೂಪ್ ಸಹ ರೂಪಿಸಲಾಗು ವುದು. ಆಂದೋಲನದ ರೀತಿಯಲ್ಲಿ ಇದನ್ನು ಮುಂದುವರೆಸಿ ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನೀಡುವ ಪ್ರಯತ್ನ ನನ್ನದು ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಎನ್. ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು, ನಗರ ಕಾರ್ಯದರ್ಶಿ ನಿಂಗನಗೌಡ ಉಪಸ್ಥಿತರಿದ್ದರು.