ಜೂ.24ಕ್ಕೆ ವಿಚಾರಣೆಯನ್ನು ಮುಂದೂಡಿದ ವಿಶೇಷ ನ್ಯಾಯಾಲಯ
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಿದೆ.
ಪ್ರಜ್ವಲ್ ಪ್ರಕರಣದಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದ ಕಾರಣ SIT ಪೊಲೀಸರು ಆತನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ.
ಎರಡನೇ ಪ್ರಕರಣದಲ್ಲಿ ಬಾಡಿ ವಾರೆಂಟ್ ಪಡೆದಿದ್ದ ಎಸ್‍ಐಟಿ, ಇಂದು ಕೋರ್ಟ್‍ಗೆ ಹಾಜರುಪಡಿಸಿತು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಂತೋಷ್ ಗಜಾನನ ಭಟ್, ಎಸ್‍ಐಟಿಗೆ ನೋಟಿಸ್ ನೀಡಿ ಅರ್ಜಿ ವಿಚಾರಣೆಯನ್ನು ಮುಂದೂಡಿದ್ದಾರೆ.
ಹಲವಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸುವುದರ ಜೊತೆಗೆ ತನ್ನ ಲೈಂಗಿಕ ದೌರ್ಜನ್ಯವನ್ನು ತಾನೇ ವಿಡಿಯೋ ಮಾಡಿಟ್ಟುಕೊಂಡ ಆರೋಪವನ್ನು ಪ್ರಜ್ವಲ್ ಎದುರಿಸುತ್ತಿದ್ದಾನೆ.
ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ನಿಮಗೆ ಆರೋಗ್ಯ ಸಮಸ್ಯೆ ಇದೆಯೇ ಎಂದು ವಿಚಾರಿಸಿದ್ದಾರೆ. ಈ ವೇಳೆ ಪ್ರಜ್ವಲ್ ಉಸಿರಾಟದ ಸಮಸ್ಯೆ ಇದೆ. ಎಂಆರ್‍ಐ ಮಾಡಿಸಬೇಕಿದೆ ಎಂದು ಹೇಳಿದ್ದಾರೆ. ನಾನು ಎರಡು ಕೇಸ್‍ನಲ್ಲಿ ಪುರುಷತ್ವ ಪರೀಕ್ಷೆ ಒಪ್ಪಿ ಮಾಡಿಸಿಕೊಂಡಿದ್ದೇನೆ. ಇದರಿಂದ ತುಂಬಾ ಮುಜುಗರ ಆಗತ್ತೆ. ಮತ್ತೆ ಅದೇ ಟೆಸ್ಟ್ ಮಾಡಿಸಲು ಹೇಳ್ತಾರೆ. ಈಗಾಗಲೇ ಎರಡು ಬಾರಿ ಒಂದೇ ಟೆಸ್ಟ್ ಮಾಡಲಾಗಿದೆ ಎಂದು ಅವರು ಜಡ್ಜ್ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಈ ವೇಳೆ ಮೂರನೇ ಕೇಸ್‍ನಲ್ಲಿ ಕಸ್ಟಡಿಗೆ ಬಾಡಿ ವಾರಂಟ್ ಅರ್ಜಿ ಸಲ್ಲಿಸಲು ಸೂಚನೆ ನೀಡಲಾಗಿದ್ದು, ಜೂ.19 ರಂದು ಅರ್ಜಿ ವಿಚಾರಣೆ ನಡೆಯಲಿದೆ.