ಜಿ.ಪಂ. ಸ್ಥಾಯಿ ಸಮಿತಿ ಗೊಂದಲ ನಿವಾರಣೆ ೧೫-೧೫ ತಿಂಗಳ ಎರಡು ಅವಧಿಯಲ್ಲಿ ಅಧಿಕಾರ ಹಂಚಿಕೆ

ಶಿವಮೊಗ್ಗ: ಜಿಲ್ಲಾ ಪಂಚಾ ಯತ್ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಹಂಚಿಕೆಯಲ್ಲಿ ರಾಜಕೀಯ ಪಕ್ಷಗಳ ನಡುವೆ ಉಂಟಾಗಿದ್ದ ಗೊಂದಲ ದೂರವಾಗಿದೆ.
ಇಂದು ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಯನ್ನು ಗಮನದಲ್ಲಿಟ್ಟುಕೊಂಡು ಮೂರು ಪಕ್ಷದ ಸದಸ್ಯರು ಹೊಂದಾಣಿಕೆ ಮೂಲಕ ಒಮ್ಮತಕ್ಕೆ ಬಂದಿರುವುದಾಗಿ ಹೇಳಿದರು.
ಪಂಚಾಯತ್‌ರಾಜ್ ನಿಯಮ ದಂತೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಸಾಮಾನ್ಯ ಸ್ಥಾಯಿಸಮಿತಿ ಉಪಾಧ್ಯಕ್ಷರಿಗೆ ನೀಡಲಾಗುತ್ತಿದೆ. ಉಳಿದಿರುವ ೩ ಸ್ಥಾಯಿ ಸಮಿತಿಗಳನ್ನು ಬಾಕಿ ಉಳಿದಿರುವ ೩೦ ತಿಂಗಳ ಅಧಿಕಾರವಧಿಯನ್ನು ೧೫-೧೫ ತಿಂಗಳ ಎರಡು ಅವಧಿಗೆ ವಿಭಜಿಸಿ ಹಂಚಿಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲ ೧೫ ತಿಂಗಳ ಅವಧಿಯಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟ ದಲ್ಲಿರುತ್ತದೆ. ಈ ಅವಧಿಯಲ್ಲಿ ಬಿಜೆಪಿ ಬಳಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಇರುತ್ತದೆ ಎಂದರು.
ಎರಡನೇ ಅವಧಿಯ ಅಧಿಕಾರ ಹಂಚಿಕೆಯಲ್ಲಿ ಬಿಜೆಪಿಗೆ ಸಾಮಾಜಿಕ ನ್ಯಾಯ ಸಮಿತಿ ಒಂದನ್ನು ಮಾತ್ರ ನೀಡಲಾಗುವುದು. ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟಕ್ಕೆ ಕೃಷಿ ಮತ್ತು ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ನೀಡಲಾಗುವುದು. ಪ್ರತಿ ಸ್ಥಾಯಿ ಸಮಿತಿಯಲ್ಲಿ ಇರುವ ನಾಲ್ಕು ಸದಸ್ಯ ಸ್ಥಾನಗಳನ್ನು ಬಿಜೆಪಿಗೆ ೨, ಮೈತ್ರಿ ಕೂಟಕ್ಕೆ ೨ ಸ್ಥಾನ ನೀಡಲಾಗುತ್ತಿದೆ ಎಂದರು.
ಸ್ಥಾಯಿ ಸಮಿತಿ ಹಂಚಿಕೆಯಲ್ಲಿ ಉಂಟಾಗಿದ್ದ ಗೊಂದಲ ನಿವಾರಿಸಿ ಕೊಂಡಿದ್ದು ಮುಂದಿನ ಅಲ್ಪ ಅವಧಿಯ ಅಧಿಕಾರದಲ್ಲಿ ಸರ್ಕಾರದ ಅನುದಾನಗಳ ಸದ್ಭಳಕೆಗೆ ಪ್ರಯತ್ನಿಸ ಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿ.ಪಂ. ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ಬಿಜೆಪಿ ಜಿ.ಪಂ. ಸದಸ್ಯ ರಾದ ಕೆ.ಈ. ಕಾಂತೇಶ್, ವೀರಭದ್ರಪ್ಪ ಪೂಜಾರಿ, ಶಿವಲಿಂಗೇಗೌಡ ಉಪಸ್ಥಿತರಿದ್ದರು.