ಕರ್ನಾಟಕವನ್ನು ಈವರೆಗೆ ಆಳಿರುವ ಮುಖ್ಯಮಂತ್ರಿಗಳಲ್ಲಿ ಡಿ.ರಾಮಕೃಷ್ಣ ಹೆಗಡೆಯವರದು ತುಂಬಾ ಭಿನ್ನ ಹಾಗೂ ಪ್ರತ್ಯೇಕವಾಗಿ ಗೋಚರಿಸುವ ವ್ಯಕ್ತಿತ್ವ. ದೇವೇಗೌಡರು ದಿನದ ೨೪ ಗಂಟೆಯೂ ರಾಜಕೀಯವನ್ನೇ ಉಸಿರಾಡುವವರಾದರೆ, ಹೆಗಡೆಯವರದು ಬಹುಮುಖೀ ವ್ಯಕ್ತಿತ್ವ ಹಾಗೂ ಮೌಲ್ಯಾಧಾರಿತ ರಾಜಕಾರಣಿ.
ಮೂಲತಃ ಸಿರ್ಸಿ, ಸಿದ್ದಾಪುರದವರಾದ ಹೆಗಡೆ ‘ದೊಡ್ಡಮನೆ’ ಮನೆತನಕ್ಕೆ ಸೇರಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ‘ದೊಡ್ಡಮನೆ’ಯ ಕೊಡುಗೆ ಬಹುದೊಡ್ಡದು.
ಹೀಗಾಗಿ ರಾಮಕೃಷ್ಣ ಹೆಗಡೆ ರಕ್ತದಲ್ಲಿಯೇ ಹೋರಾಟದ ಕೆಚ್ಚು ಅಡಗಿತ್ತು. ಮಾಜಿ ಮುಖ್ಯಮಂತ್ರಿ ಕರ್ನಾಟಕ ಕಂಡ ಮುತ್ಸದ್ದಿ ರಾಜ ಕಾರಣಿಗಳಲ್ಲೊಬ್ಬರಾದ ಸಿದ್ದವನಹಳ್ಳಿ ನಿಜಲಿಂಗಪ್ಪನವರ ಅಪ್ಪಟ ಶಿಷ್ಯರ ಪೈಕಿ ಹೆಗಡೆ ಕೂಡಾ ಒಬ್ಬರು. ಇನ್ನೊಬ್ಬರು ವೀರೇಂದ್ರ ಪಾಟೀಲರು. ಪಾಟೀಲ್ ಹಾಗೂ ಹೆಗಡೆ ಜೋಡಿಯನ್ನು ನಿಜಲಿಂಗಪ್ಪ ನವರು ಲವ-ಕುಶರೆಂದೇ ಕರೆಯುತ್ತಿದ್ದರು.
ಸಂಸ್ಥಾ ಕಾಂಗ್ರೆಸ್ ಮೂಲಕ ರಾಜಕೀಯ ಬದುಕು ಕಟ್ಟಿಕೊಂಡ ಹೆಗಡೆ ಹಾಗೂ ಪಾಟೀಲರು ತಿರುಗಿ ನೋಡಲಿಲ್ಲ. ನಿಜಲಿಂಗಪ್ಪ ಸಂಪುಟದಲ್ಲಿ ಹೆಗಡೆ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದರು.
ಪಾಟೀಲರು ಬಹು ಬೇಗನೆ ಮುಖ್ಯಮಂತ್ರಿ ಪದವಿಗೇರಿ ದರೆ, ಹೆಗಡೆ ಇದಕ್ಕಾಗಿ ಎರಡು ದಶಕಗಳ ಕಾಲ ಕಾಯಬೇಕಾಯಿತು. ತುರ್ತು ಪರಿಸ್ಥಿತಿಯಲ್ಲಿ ಜೈಲು ವಾಸ ಅನುಭವಿಸಿದ ಹೆಗಡೆ ಈ ಸಂದರ್ಭದಲ್ಲಿ ಜೊತೆಯಲ್ಲಿದ್ದ ಎಲ್.ಕೆ. ಅಡ್ವಾಣಿಯವರಿಗೆ ಆತ್ಮೀಯರಾದರು. ಅಲ್ಲದೆ ಅವರಿಗೆ ಕನ್ನಡ ಕೂಡಾ ಕಲಿಸಿದ್ದರು.
೧೯೭೭ ರಲ್ಲಿ ವಿಪಕ್ಷಗಳೆಲ್ಲ ಒಗ್ಗೂಡಿ ಜನತಾ ಪಕ್ಷ ರಚನೆಯಾ ದಾಗ ಚಂದ್ರಶೇಖರ್ ಪಕ್ಷದ ಅಧ್ಯಕ್ಷರಾದರೆ, ಹೆಗಡೆ ಹಾಗೂ ಜಾರ್ಜ್ ಫರ್ನಾಂಡೀಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಳಾದರು.
ಜಾರ್ಜ್ ಮುಂದೆ ಕೇಂದ್ರದಲ್ಲಿ ರಚನೆ ಯಾದ ಜನತಾ ಪಕ್ಷದ ಸರ್ಕಾರದಲ್ಲಿ ಕಾರ್ಮಿಕ ಮಂತ್ರಿಯಾದರು. ಆದರೆ ಹೆಗಡೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿಯೇ ಮುಂದುವರೆ ದರು. ಮುಂದೆ ಗುಂಡೂರಾಯರ ಸರ್ಕಾರ ರೈತರ ಮೇಲೆ ಗೋಲಿಬಾರ್ ನಡೆಸಿದ ಪರಿಣಾಮ ಕಾಂಗ್ರೆಸ್‌ಗೆ ಕೆಟ್ಟ ಹೆಸರು ಬಂದಿತ್ತು.
ಹೀಗಾಗಿ ೧೯೮೩ ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಕ್ರಾಂತಿರಂಗ, ಬಿಜೆಪಿ ಬೆಂಬಲದೊಂದಿಗೆ ನೇಗಿಲು ಹೊತ್ತ ರೈತನ ಚಿಹ್ನೆಯಡಿ ಜನತಾ ಪಕ್ಷ ಆಧಿಕಾರಕ್ಕೆ ಬಂದಿತು.
ಬಂಗಾರಪ್ಪ ಬದಲು ಹೆಗಡೆ ಕರ್ನಾಟಕದ ಮುಖ್ಯಮಂತ್ರಿಯಾದರು. ಯಾರೂ ನಿರೀಕ್ಷಿಸಿರದ ರೀತಿಯಲ್ಲಿ ಜನಪರ ಆಡಳಿತ ನೀಡಿದರು.
ವಿಧಾನಸೌಧದ ಮೆಟ್ಟಿಲ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಹೆಗಡೆ ಸಂಪು ಟದಲ್ಲಿ ಹೆಚ್.ಡಿ.ದೇವೇಗೌಡ, ಜೆ.ಹೆಚ್. ಪಟೇಲ್, ಎಸ್.ಆರ್.ಬೊಮ್ಮಾಯಿ, ನಜೀರ್ ಸಾಬ್, ಎಂ.ಪಿ.ಪ್ರಕಾಶ್, ಜೀವರಾಜ್ ಆಳ್ವ, ಜಾಲಪ್ಪ, ದೇಶ ಪಾಂಡೆ, ಪಿ.ಜಿ.ಆರ್. ಸಿಂಧ್ಯಾ, ನಾಗೇಗೌಡ, ಸಿದ್ಧರಾಮಯ್ಯ, ಭೈರೇಗೌಡ, ರಘುಪತಿ ಸೇರಿದಂತೆ ಘಟಾನುಘಟಿ ನಾಯಕರಿದ್ದರು.