ದಾವಣಗೆರೆ: ಇತ್ತೀಚಿಗೆ ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಿಂದ ಕಾಲ್ನಡಿಗೆಯಲ್ಲಿ ಗಾಂಧಿವೃತ್ತಕ್ಕೆ ತೆರಳಿ ಅಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ಪ್ರತಿಭಟನೆ ನಡೆಸಿದರು. ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪ ವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಬಸವರಾಜ್ ಬೊಮ್ಮಾಯಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾದ ಕಾರಣ ಜನರ ಮೇಲೆ ಸೇಡು ತೀರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಕೊಡುತ್ತೇವೆ ಎಂದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಒಂದು ವರ್ಷದಲ್ಲಿ 1.05 ಲಕ್ಷ ಕೋಟಿ ರೂ. ದಾಖಲೆಯ ಸಾಲ ಮಾಡಿ, ಜನರ ಮೇಲೆ ಆರ್ಥಿಕ ಹೊರೆ ಹೊರಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯವನ್ನೂ ಮಾಡದೆ.
ಆರ್ಥಿಕವಾಗಿಯೂ ರಾಜ್ಯವನ್ನು ಹತ್ತು ವರ್ಷ ಹಿಂದಕ್ಕೆ ತಳ್ಳಿದೆ ಎಂದು ಆರೋಪಿಸಿದರು.
ಇಷ್ಟು ದಿನ ಮೋಟಾರ್ ವೆಹಿಕಲ್ ಟ್ಯಾಕ್ಸ್, ಸ್ಟ್ಯಾಂಪ್ ಡ್ಯುಟಿ, ಮದ್ಯ, ವಿದ್ಯುತ್ ಮತ್ತು ಹಾಲಿನ ದರ ಹೆಚ್ಚಿಸಿದ ಸರಕಾರ ಈಗ ತೈಲ ದರ ಹೆಚ್ಚಿಸಿದೆ. ರಾಜ್ಯದ ಅಭಿವೃದ್ಧಿಗೆ ನಯಾ ಪೈಸೆ ಬಿಡುಗಡೆ ಮಾಡದ ಕಾರಣ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಇದನ್ನು ನೋಡಿ ಜನರು ರಾಜ್ಯ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ರಾಜಶೇಖರ್, ಮಾಜಿ ಜಿಲ್ಲಾಧ್ಯಕ್ಷರಾದ ಯಶವಂತರಾವ್ ಜಾಧವ್, ವೀರೇಶ್ ಹನಗವಾಡಿ, ಮುಖಂಡರಾದ ಲೋಕಿಕೆರೆ ನಾಗರಾಜ್, ಬಿ.ಜಿ.ಅಜಯಕುಮಾರ್, ಎಸ್.ಟಿ. ವೀರೇಶ್, ಕೆ.ಪ್ರಸನ್ನಕುಮಾರ್, ಯಶೋಧ ಯಗ್ಗಪ್ಪ, ಆರ್.ಎಲ್. ಶಿವಪ್ರಕಾಶ್, ಪಿ.ಸಿ. ಶ್ರೀನಿವಾಸ್ ಭಟ್, ಮಂಜಾ ನಾಯ್ಕ, ಬಸವರಾಜ ಗುಬ್ಬಿ, ಪರಶುರಾಮ್, ನನ್ನಯ್ಯ, ಶಿವನಗೌಡ ಪಾಟೀಲ್, ಪುಷ್ಪಾ ವಾಲಿ, ಭಾಗ್ಯ ಪಿಸಾಳೆ ಮತ್ತಿತರರು ಭಾಗವಹಿಸಿದ್ದರು.