ಶಿವಮೊಗ್ಗ : ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ಮತದಾನ ನಡೆಯಿತು.ಬೆಳಗ್ಗೆ 8 ಗಂಟೆಯಿಂದಲೇ ಶುರುವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಯ ವರೆಗೆ ನಡೆಯಿತು. ಬೆಳಗ್ಗೆಯಿಂದಲೇ ಎಲ್ಲಾ ಕಡೆಗೂ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯಿತು.
ನೈರುತ್ಯ ಪದವೀಧರ ಕ್ಷೇತ್ರಕ್ಕೆ ಜಿಲ್ಲೆಯಲ್ಲಿ ಒಟ್ಟು 27412 ಮತದಾರರಿದ್ದು, ಒಟ್ಟು 38 ಮತಕೇಂದ್ರಗಳನ್ನು ತೆರೆಯಲಾಗಿತ್ತು. ಶಿವಮೊಗ್ಗ ನಗರವೊಂದರಲ್ಲಿಯೇ ೧೧ ಕಡೆಗಳಲ್ಲಿ ಮತ ಚಲಾಯಿಸಲು ಮತ ಕೇಂದ್ರ ತೆರೆಯಲಾಗಿತ್ತು. ಹಾಗೆಯೇ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ 4365 ಮತದಾರರು ಇದ್ದು ಒಟ್ಟು 32 ಮತಕೇಂದ್ರಗಳನ್ನು ತೆರೆಯಲಾಗಿತ್ತು.
ಬೆಳಗ್ಗೆ ಶಿವಮೊಗ್ಗ ನಗರದ ಕಾರ್ಯಪಾಲಕ ಅಭಿಯಂತರ ಕಛೇರಿ ಲೋಕೋಪಯೋಗಿ ಇಲಾಖೆ ಬಾಲರಾಜ್ ಅರಸ್ ರಸ್ತೆ ಬೂತ್ ಸಂಖ್ಯೆ ೫೯ ಮತದಾನ ಕೇಂದ್ರದಲ್ಲಿ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶ್ರೀ ಡಿ.ಎಸ್.ಅರುಣ್ ಅವರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಪ್ರತಿಭಾ ಅರುಣ್ ಅವರೊಂದಿಗೆ ಮತದಾನ ಮಾಡಿದರು.
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಪತ್ನಿ ನಮಿತಾ ಸರ್ಜಿ ಅವರೊಂದಿಗೆ ತೆರಳಿ ಸೋಮವಾರ ಬೆಳಗ್ಗೆ ಶಿವಮೊಗ್ಗ ವಿನೋಬ ನಗರದ ದೇಶೀಯ ವಿದ್ಯಾಶಾಲಾ ಹೈಸ್ಕೂಲ್ ವಿಭಾಗದ ಮತ ಕೇಂದ್ರದಲ್ಲಿ ಮತ ಚಲಾಯಿಸಿದರು.
ನೈರುತ್ಯ ಕ್ಷೇತ್ರದ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರು ಬಾಲರಾಜ್ ಅರಸ್ ರಸ್ತೆಯಲ್ಲಿರುವ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿ ಮತದಾನ ಮಾಡಿದರು. ಹಾಗೆಯೇ ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಸ್.ಪಿ.ದಿನೇಶ್ ಅವರು, ವಿನೋಬನಗರದ ಡಿ.ವಿ.ಎಸ್.ಶಾಲೆಯಲ್ಲಿ ಮತದಾನ ಮಾಡಿದರು.ಮತದಾನ ಪ್ರಕ್ರಿಯೆಗೆ ಜಿಲ್ಲಾಡಳಿತ ಬಿಗಿ ಬಂದೋಬಸ್ತ್ ಮಾಡಿತ್ತು.
ನನ್ನ ಮತ್ತು ಬೋಜೇಗೌಡರ ಗೆಲುವು ಖಚಿತ: ಸರ್ಜಿ ವಿಶ್ವಾಸ
ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ದಲ್ಲಿ ತಾವು ಮತ್ತು ಮೈತ್ರಿ ಅಭ್ಯರ್ಥಿ ಎಸ್.ಎಲ್.ಭೋಜೇಗೌಡರ ಗೆಲುವು ಖಚಿತ ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ವಿನೋಬ ನಗರದ ದೇಶೀಯ ವಿದ್ಯಾಶಾಲಾ ಹೈಸ್ಕೂಲ್ ವಿಭಾಗದ ಮತಕೇಂದ್ರದಲ್ಲಿ ಸೋಮವಾರ ಬೆಳಗ್ಗೆ ಮತ ಚಲಾಯಿಸಿ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಎದುರಾಳಿಗಳಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ ಎಂದು ಗುಂಡು ಪಾರ್ಟಿಯ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಈ ವೇಳೆ ರಾಜ್ಯ ಪ್ರಕೋಷ್ಟಗಳ ಸಂಯೋಜಕ ಎಸ್.ದತ್ತಾತ್ರಿ, ಜೆಡಿಎಸ್ ನಾಯಕ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಚ್. ಮಾಲತೇಶ್, ಅನಿತಾ ರವಿಶಂಕರ್ ಮತ್ತಿತರರು ಹಾಜರಿದ್ದರು.
ಇದಕ್ಕೂ ಮೊದಲು ಡಾ.ಧನಂಜಯ ಸರ್ಜಿ ಅವರು ತಂದೆ ಸರ್ಜಿ ರುದ್ರಪ್ಪ ಹಾಗೂ ತಾಯಿ ಶ್ರೀಮತಿ ರೇಣುಕಮ್ಮ ಹಾಗೂ ಸಂಘ ಪರಿವಾರ ಪ್ರಮುಖರಾದ ಭಾ.ಮ. ಶ್ರೀಕಂಠಯ್ಯ ಮತ್ತು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರುಗಳ ಆಶೀರ್ವಾದ ಪಡೆದರು.
……………………………
ಕಾರ್ಮಿಕರು, ನೌಕರರ ಒಲವು ನನ್ನ ಕಡೆಯಿದೆ: ಆಯನೂರು ಮಂಜುನಾಥ್ ವಿಶ್ವಾಸ
ನೈರುತ್ಯ ಕ್ಷೇತ್ರದ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಈ ಬಾರಿ ಗೆಲ್ಲಿಸುತ್ತಾರೆ ಎಂದು ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.
ಬಾಲರಾಜ್ ಅರಸ್ ರಸ್ತೆಯಲ್ಲಿರುವ ಕಾರ್ಯಪಾಲಕ ಅಭಿಯಂತರ ಕಚೇರಿಯಲ್ಲಿಸೋಮವಾರ ಮತದಾನ ಮಾಡಿ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದರು.
ಪದವೀಧರರ ಮತ್ತು ಅತಿಥಿ ಉಪನ್ಯಾಸಕರ ಪರವಾಗಿ ನಾನು ಹೋರಾಟ ಮಾಡುತ್ತಲೇ ಬಂದಿದ್ದೇನೆ. ಕಾರ್ಮಿಕರ ಸಮಸ್ಯೆಗಳನ್ನು ಅರಿತಿದ್ದೇನೆ. ಹಳೆಪಿಂಚಣಿ ಜಾರಿಗೆ, ಒತ್ತಾಯ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿಯೇ ಹಳೆ ಪಿಂಚಣಿ ವ್ಯವಸ್ಥೆ ಮತ್ತು ಉಪನ್ಯಾಸಕರ ಶಿಕ್ಷಕರ ಹಾಗೂ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದೆ. ಇದು ನನಗೆ ಅನುಕೂಲಕರವಾಗಿದೆ ಎಂದರು.
ನೈರುತ್ಯ ಪದವೀಧರ ಕ್ಷೇತ್ರದ ಎಲ್ಲಾ ಕಡೆಗಳಲ್ಲಿಯೂ ಮತದಾನ ಬಿರುಸಾಗಿಯೇ ನಡೆದಿದೆ. ಈ ಬಾರಿ ಹೆಚ್ಚಿನ ಮತದಾನವಾಗುವ ನಿರೀಕ್ಷೆ ಇದೆ. ನಾನು ಸೇರಿದಂತೆ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಡಾ.ಕೆ.ಕೆ. ಮಂಜುನಾಥ್‌ಕುಮಾರ್ ಗೆಲ್ಲುವುದು ಖಚಿತ ಎಂದರು.
………………………………….
ಸಮರ್ಥವಾಗಿ ಚುನಾವಣೆ ನಡೆಸಿದ್ದೇನೆ, ಗೆಲ್ಲುತ್ತೇನೆ: ಎಸ್.ಪಿ.ದಿನೇಶ್ ವಿಶ್ವಾಸ
ಶಿವಮೊಗ್ಗ,: ಎರಡು ರಾಷ್ಟ್ರೀಯ ಪಕ್ಷಗಳ ಎದುರು ಸಮರ್ಥವಾಗಿ ಚುನಾವಣೆ ನಡೆಸಿದ್ದೇನೆ. ಗೆಲ್ಲುವ ವಿಶ್ವಾಸವಿದೆ ಎಂದು ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಎಸ್.ಪಿ.ದಿನೇಶ್ ಹೇಳಿದರು.
ಅವರು ಇಂದು ವಿನೋಬನಗರದ ಡಿ.ವಿ.ಎಸ್.ಶಾಲೆಯಲ್ಲಿ ಮತದಾನ ಮಾಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಕಡೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಕಾರ್ಯಕರ್ತರ ಅಭಿಲಾಷೆಯಂತೆ ಚುನಾವಣೆಗೆ ಸ್ಪರ್ಧಿಸಿದ್ದೆ. ಎಲ್ಲರ ವಿಶ್ವಾಸ ಕಂಡು ಸಂತೋಷವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ನನ್ನ ಕೈಯಿಡಿಯಲ್ಲಿದ್ದಾರೆ. ನನ್ನ ಗೆಲುವು ಖಚಿತ ಎಂದರು.
ಎರಡು ಬಾರಿ ಸ್ಪರ್ಧೆ ಮಾಡಿದ್ದರಿಂದ ಮತದಾರರ ಪರಿಚಯ ಹೆಚ್ಚಾಗಿದೆ. ಆತ್ಮಸ್ಥೈರ್ಯ ಕೂಡ ಹೆಚ್ಚಿದೆ. ತಾವು ಗೆದ್ದರೆ ಪದವೀಧರರ ಸಮಸ್ಯೆಯನ್ನು ಪ್ರಮಾಣಿಕವಾಗಿ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.
………………………
ಪದವೀಧರ ಪಟ್ಟಿಯಲ್ಲಿ ಶಿಕ್ಷಕರ ಹೆಸರು ನಾಪತ್ತೆ: ಆರೋಪ
ಶಿವಮೊಗ್ಗ: ತಾವು ನೈಋತ್ಯ ಪದವೀಧರ ಮತ್ತು ಶಿಕ್ಷಕರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನಿಗಧಿತ ಅವಧಿಯಲ್ಲೇ ನೋಂದಣಿ ನಮೂನೆಯನ್ನು ಆಯೋಗಕ್ಕೆ ಸಲ್ಲಿಸಿದ್ದರೂ ಪದವೀಧರ ಕ್ಷೇತ್ರದ ಮತಪಟ್ಟಿಯಲ್ಲಿ ತಮ್ಮ ಹೆಸರು ನಾಪತ್ತೆ ಆಗಿರುವುದರ ಬಗ್ಗೆ ಶಿಕ್ಷಕರು ದಿಗ್ಭ್ರಮೆ ವ್ಯಕ್ತಪಡಿಸಿದರು.
ನಗರದ ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಮತಗಟ್ಟೆಗೆ ಮತ ಚಲಾಯಿಸಲು ಆಗಮಿಸಿದ್ದ ಅಲ್ ಮಹಮ್ಮದ್ ಪ್ರೌಢ ಶಾಲೆಯ ಶಿಕ್ಷಕರು ತಮ್ಮ ಹೆಸರು ಪದವೀಧರ ಮತ ಪಟ್ಟಿಯಲ್ಲಿ ನಾಪತ್ತೆಯಾಗಿದ್ದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ತಾವು ಚುನಾವಣಾ ಆಯೋಗ ನಿಗಧಿಪಡಿಸಿದ ದಿನಾಂಕದಲ್ಲೇ ೨೭ ಜನರು ನೋಂದಣಿ ಅರ್ಜಿ ಸಲ್ಲಿಸಿದ್ದೆವು. ನಂತರ ಮತದಾರರ ಕರಡು ಪ್ರತಿ ಪ್ರಕಟಿಸಿದಾಗ ಪದವೀಧರ ಪಟ್ಟಿಯಲ್ಲಿ ೨೦ ಮತದಾರರ ಹೆಸರು ನಾಪತ್ತೆಯಾಗಿತ್ತು.
ಈ ಕುರಿತು ತಕ್ಷಣ ಆಕ್ಷೇಪಣಾ ಅವಧಿಯಲ್ಲೇ ಹೆಸರು ನಾಪತ್ತೆಯಾಗಿದ್ದರ ಬಗ್ಗೆ ದೂರು ಸಲ್ಲಿಸಿ ಬಿಟ್ಟು ಹೋದ ಹೆಸರುಗಳನ್ನು ಪಟ್ಟಿಯಲ್ಲಿ ಸೇರಿಸಲು ವಿನಂತಿಸಿದ್ದೆವು.
ಆದರೆ ಇವತ್ತು ಮತ ಚಲಾಯಿಸಲು ಮತಗಟ್ಟೆಗೆ ಬಂದಾಗ ಶಿಕ್ಷಕರ ಮತ ಪಟ್ಟಿಯಲ್ಲಿ ಹೆಸರಿತ್ತು. ಪದವೀಧರ ಮತ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿ ಮತದಾನದಿಂದ ವಂಚಿತರಾದೆವು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.