ಶಿವಮೊಗ್ಗ: ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್ ಮತ್ತು ಕೆ.ಕೆ. ಮಂಜುನಾಥ್ ಅವರ ಗೆಲುವು ನಿಶ್ಚಿತ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಯನೂರು ಮಂಜುನಾಥ್ ಮತ್ತು ಕೆ.ಕೆ. ಮಂಜುನಾಥ್ ಅವರ ಪರವಾಗಿ ಶಿವಮೊಗ್ಗದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದೇವೆ. ಇದಕ್ಕಾಗಿ ವಾರ್ಡ್ ಮಟ್ಟದಲ್ಲಿ ಸಮಿತಿ ರಚಿಸಲಾಗಿದೆ. ಪ್ರತಿ ವಾರ್ಡ್‌ನಲ್ಲಿರುವ ಮತದಾರರನ್ನು ಗುರುತಿಸಲಾಗಿದೆ. ಮತದಾರರ ಮನೆಗಳಿಗೆ ಹೋಗಿ ಪ್ರಚಾರ ಮಾಡಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದೇವೆ. ಎಲ್ಲಾ ಕಡೆಗೂ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಟಿ.ಎಸ್. ಚಂದ್ರಶೇಖರ್, ಗ್ಯಾರಂಟಿ ಅನುಷ್ಠಾನದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಪ್ರಮುಖರಾದ ಸೌಗಂಧಿಕಾ, ಹೆಚ್.ಎಂ. ಮಧು, ಜಿ.ಡಿ. ಮಂಜುನಾಥ್, ಚಿನ್ನಪ್ಪ ಮತ್ತಿತರರು ಇದ್ದರು.