Wednesday, September 18, 2024
Google search engine
Homeಇ-ಪತ್ರಿಕೆಬಿ.ವೈ.ರಾಘವೇಂದ್ರ ಗೆಲುವಿಗೆ ನಮ್ಮ ಮೈತ್ರಿ ಸಹಕಾರಿ: ಜೆಡಿಎಸ್

ಬಿ.ವೈ.ರಾಘವೇಂದ್ರ ಗೆಲುವಿಗೆ ನಮ್ಮ ಮೈತ್ರಿ ಸಹಕಾರಿ: ಜೆಡಿಎಸ್

ಪತ್ರಿಕಾಗೋಷ್ಠಿಯಲ್ಲಿ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಅಭಿಮತ

ಶಿವಮೊಗ್ಗ: ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರು ೨ ಲಕ್ಷಕ್ಕೂ ಅಧಿಕ ಮತದಿಂದ ಜಯಗಳಿಸಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ನಮ್ಮ ಜೊತೆಗಿನ ಬಿಜೆಪಿಯ ಮೈತ್ರಿಯು ಅವರ ಗೆಲುವಿಗೆ ಸಹಕಾರಿಯಾಗಿದೆ. ಇದಕ್ಕಾಗಿ ಶ್ರಮಿಸಿದ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರೆಲ್ಲರಿಗೂ ವಂದನೆ ಸಲ್ಲಿಸುತ್ತೇನೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ತಿಳಿಸಿದ್ದಾರೆ.

ಬುಧವಾರ ಜಿಲ್ಲಾ ಜನತಾದಳದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮೈತ್ರಿ ಪಕ್ಷ ಬಿಜೆಪಿಯು ೧೭ ಸ್ಥಾನ, ಜೆಡಿಎಸ್ ೨, ಕಾಂಗ್ರೆಸ್ ೯ ಸ್ಥಾನಗಳಲ್ಲಿ ಜಯಗಳಿಸಿವೆ. ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟ ಬಹುಮತ ಸಾಧಿಸಿದ್ದು, ನರೇಂದ್ರ ಮೋದಿಯು ಪ್ರಧಾನಿಯಾಗಲಿದ್ದಾರೆ ಎಂದು ಅವರು ಅಭಿಪ್ರಾಯಿಸಿದರು.

ಎರಡು ಪಕ್ಷಗಳ ಮೈತ್ರಿ ಜೊತೆಗೆ ಸಂಸದರ ಅಭಿವೃದ್ಧಿ ಕಾರ್ಯಗಳಾದ ರೈಲ್ವೆ ಅಭಿವೃದ್ಧಿ, ಏರ್‍ಪೋರ್ಟ್‌  ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಅಸ್ಪತ್ರೆಗಳ ನಿರ್ಮಾಣ, ಶಾಲೆ ಮುಂತಾದ ಎಲ್ಲಾ ಕ್ಷೇತ್ರಗಳಲ್ಲಿ ಅವರ ಅಭಿವೃದ್ಧಿ ಕಾರ್ಯಗಳು ಗೆಲುವಿಗೆ ಸಹಕಾರಿಯಾಗಿವೆ.  ಮತಗಟ್ಟೆ ಸಮೀಕ್ಷೆಯು ಉಲ್ಟಾ ಹೊಡೆದಿದೆ. ಗೆಲುವಿನ ನಂತರ ಬಿ.ವೈ. ರಾಘವೇಂದ್ರ ಅವರು ನಮ್ಮ ಜೆಡಿಎಸ್ ಕಚೇರಿಗೆ ಬಂದು ವಂದಿಸಿ, ಸಿಹಿ ಹಂಚಿ ೩:೫೦ರ ಸುಮಾರಿಗೆ ಸಹ್ಯಾದ್ರಿ ಕಾಲೇಜಿನತ್ತ ನಡೆದರು ಎಂದು ವಿಜೇತ ಅಭ್ಯರ್ಥಿಯ ನಡೆಯನ್ನು ಅವರು ಶ್ಲಾಘಿಸಿದರು.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯು ರಾಜ್ಯದಲ್ಲಿ ಹಲವು ಕಡೆ ಸುಲಭ ಜಯಕ್ಕೆ ಕಾರಣವಾಗಿದೆ. ಮೈತ್ರಿ ಕಾರಣ ಎರಡು ಪಕ್ಷಗಳಿಗೂ ಅನುಕೂಲವಾಗಿದೆ. ಎರಡು ಪಕ್ಷಗಳ ಮಧ್ಯೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಾವು ಶ್ರಮ ವಹಿಸಿದ್ದೇವೆ. ತಮ್ಮ ಪ್ರಗತಿ ಕಾರ್ಯಗಳ ಕಾರಣದಿಂದಲೂ ಅವರು ಗೆದ್ದಿದ್ದಾರೆ. ತಮ್ಮ ಅಭ್ಯರ್ಥಿ ಹಾಸನದಲ್ಲಿ ೪೦ ಸಾವಿರದ ಅಂತರದ ಸೋಲಿಗೆ ಅವರ ವೈಯಕ್ತಿಕ ಕಾರಣಗಳಿವೆ. ಈ ಚುನಾವಣೆಯಲ್ಲಿ ಬಿಜೆಪಿಯ ಸಾಧನೆಯನ್ನು ನೋಡಿದರೆ ದೇಶದಲ್ಲಿ ಮೋದಿ ಅಲೆ ಕಡಿಮೆ ಇದೆ ಎಂದು ಅವರು ಅಭಿಪ್ರಾಯಿಸಿದರು.

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಕೆಲಸ ಮಾಡಿಲ್ಲ. ಜನತೆ ಇದನ್ನೆಲ್ಲಾ ಬಯಸಿಲ್ಲ. ಅಭಿವೃದ್ಧಿಯನ್ನು ಬಯಸುತ್ತಾರೆ. ರಾಘವೇಂದ್ರ ಅವರು ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಮಾಡಿದ್ದಾರೆ. ಬಿಜೆಪಿಯೊಂದಿಗಿನ ಹಿಂದಿನೆಲ್ಲಾ ಕಹಿ ಮರೆತು  ಪ್ರಚಾರ ಕಾರ್ಯವನ್ನು ಮಾಡಿದ್ದೇವೆ. ನಮ್ಮ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿಯವರ ತೀರ್ಮಾನಕ್ಕೆ ಒಗೊಟ್ಟು ಚುನಾವಣೆಯನ್ನು ಎದುರಿಸಿದ್ದೇವೆ. ನಮ್ಮ ಪಕ್ಷವು ಎನ್‌ಡಿಎಯ ಭಾಗವಾಗಿದೆ. ಈ ಚುನಾವಣೆಯು ದೇಶದಲ್ಲಿ ಮೋದಿ ಅಲೆ ಕಡಿಮೆ ಇದೆ ಎಂಬುದನ್ನು ತೋರಿಸುತ್ತದೆ ಎಂದು ಶರದಾ ಪೂರ್‍ಯ ನಾಯ್ಕ್ ಅಭಿಪ್ರಾಯಿಸಿದರು.

 ರಾಘವೇಂದ್ರ ಅವರನ್ನು ಅಭಿನಂದಿಸುತ್ತೇನೆ.  ಅವರು ನಮ್ಮ ಮೈತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ಯಾವ ಪಕ್ಷಕ್ಕೂ ಬೇಜಾರು ಮಾಡಿಲ್ಲ. ಸಮಾಧಾನಕರವಾದ ಸ್ಥಾನಗಳು ಎನ್ ಡಿಎಗೆ ಲಭಿಸಿವೆ. ಸರಕಾರ ರಚನೆ ಕುರಿತು ಕುಮಾರಸ್ವಾಮಿಯವರು ದೆಹಲಿಗೆ ಹೋಗಿದ್ದಾರೆ. ಮೋದಿಯವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಕುಮಾರಸ್ವಾಮಿಯವರಿಗೂ ಒಂದು ಸಚಿವ ಸ್ಥಾನ ನೀಡಲಿದ್ದಾರೆ ಎಂಬ ಭರವಸೆಯಿದೆ. ಉತ್ತರ ಪ್ರದೇಶದ ಸ್ತಿತಿಯನ್ನು ನೋಡಿದರೆ ಮೋದಿ ಅಲೆ ಕಡಿಮೆಯಾಗಿರುವುದು ತಿಳಿದು ಬರುತ್ತದೆ. ತುಮಕೂರು, ಮೈಸೂರು ಮುಂತಾದ ಕಡೆ ನಮ್ಮ ಮೈತ್ರಿಯಿಂದಾಗಿ ಬಿಜೆಪಿಯವರಿಗೆ ಸಹಾಯವಾಗಿದೆ. ನಮ್ಮ ಪಕ್ಷದ ಹಾಸನ ಅಭ್ಯರ್ಥಿಯ ಸೋಲಿಗೆ ಸಮರ್ಥನೆ ಮಾಡಿಕೊಳ್ಳಲು ಹೋಗುವುದಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಬಿಜೆಪಿಗೆ ನಮ್ಮ ಮೈತ್ರಿಯು ಬಲ ತುಂಬಿದೆ ಎಂದು ಅವರು ತಿಳಿಸಿದರು.

ನಿತೀಶ್ ಕುಮಾರ್‍ ಅವರು ಪ್ರಧಾನಿಯಾಗಲಿದ್ದಾರೆಯೇ ಎಂಬ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕ್ಷಮಿಸಿ ಅ ಕುರಿತು ಹೇಳಿಕೆ ನೀಡಲು ನಾನು ಅಷ್ಟು ದೊಡ್ಡವಳಲ್ಲ ಎಂದು ನಿರಾಕರಿಸಿದರು.

ಮೈತ್ರಿಯ ಪಕ್ಷದ ಕಾರ್ಯಕರ್ತರಿಗೆ ದನ್ಯವಾದ ಹೇಳಲು ಬಯಸುತ್ತೇನೆ. ಬಿಜೆಪಿ ಜೆಡಿಎಸ್ ಮೈತ್ರಿಯು ರಾಜ್ಯದಲ್ಲಿ ಯಶಸ್ವಿಯಾಗಿದೆ. ರಾಜ್ಯ ಸರಕಾರದ ಕಾರ್ಯವೈಖರಿ ಜನರನ್ನು ಭ್ರಮನಿರಶನಗೊಳಿಸಿದೆ. ಕಾಂಗ್ರೆಸ್ ೨೦ರಿಂದ ೨೨ ಸ್ಥಾನ ಗೆಲ್ಲುತ್ತೇವೆ ಎಂಬ ಹೇಳಿಕೆ ಸಾಧ್ಯವಾಗಿಲ್ಲ. ಇದು ಮುಗಿದ ಅಧ್ಯಾಯ. ಸರಕಾರವು ಗ್ಯಾರಂಟಿ ಜೊತೆ ಅಭಿವೃದ್ಧಿಯತ್ತ ಗಮನಹರಿಸಲಿ. ಜನರು ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಬೇಸತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್‍ ಅಭಿಪ್ರಾಯಿಸಿದರು.

 ಇದರ ಫಲ ಸಿಕ್ಕಿದೆ. ಸರಕಾರವು ತಡ ಮಾಡದೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌, ಕಾಪೋðರೇಶನ್ ಚುನಾವಣೆಗಳನ್ನು ತುರ್ತಾಗಿ ಘೋಷಣೆ ಮಾಡಲಿ. ಚುನಾಯಿತ ಅಭ್ಯರ್ಥಿಗಳು ಇಲ್ಲದೆ ಅಧಿಕಾರಿಗಳು ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಕೆಲಸ ನಿರ್ವಹಿಸಲು ಸಾರ್ವಜನಿಕರು ಆಯ್ಕೆ ಮಾಡಿದ ವ್ಯಕ್ತಿಗಳ ಅವಶ್ಯಕತೆಯಿದೆ. ಸರಕಾರವು ಈಗ ನೀಡುತ್ತಿರುವ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬಾರದು. ಇದು ಜನತೆ ಮೋಸ ಮಾಡಿದಂತಾಗುತ್ತದೆ. ಗ್ಯಾರಂಟಿ ಯೋಜನೆಗಳ ಜೊತೆ ಅಭಿವೃದ್ಧಿ ಕಾರ್ಯಗಳ ಕಡೆ ಗಮನ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ನರಸಿಂಹ, ಕೃಷ್ಣ, ವಿನಯ್‌, ಸಂಗಯ್ಯ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments