Thursday, July 25, 2024
Google search engine
Homeಇ-ಪತ್ರಿಕೆಎಂಪಿಎಂ ಕಾರ್ಖಾನೆ ಲೀಸ್‌ ಅವಧಿ ಮುಂದುವರಿಸಲು ವಿರೋಧ

ಎಂಪಿಎಂ ಕಾರ್ಖಾನೆ ಲೀಸ್‌ ಅವಧಿ ಮುಂದುವರಿಸಲು ವಿರೋಧ

ಶಿವಮೊಗ್ಗ: ಭದ್ರಾವತಿಯ ಎಂಪಿಎಂ ಕಾರ್ಖಾನೆಯ ಲೀಸ್ ಅವಧಿಯನ್ನು ಮುಂದುವರೆಸಲು ಅನುಮತಿ ನೀಡುವಂತೆ  ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹಾಗೂ ಸಂಸದರಾಗಿರುವ ಅವರ ಮಗ ಕೇಂದ್ರ ಸಚಿವರಿಗೆ ಒತ್ತಾಯಿಸಿರುವುದನ್ನು ನಮ್ಮೂರಿಗೆ ಅಕೇಷಿಯ ಮರ ಬೇಡ ಹೋರಾಟ ಒಕ್ಕೂಟ ತೀವ್ರವಾಗಿ ಖಂಡಿಸಿದೆ.

ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು  ದಾವಣಗೆರೆ ಜಿಲ್ಲೆಗಳ ಒಟ್ಟು 33 ಸಾವಿರ ಹೆಕ್ಟೆರ್ ಸ್ವಾಭಾವಿಕ ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರ 1980ರಲ್ಲಿ ಎಂಪಿಎಂ ಕಾರ್ಖಾನೆಗೆ 40 ವರ್ಷಗಳ ಅವಧಿಗೆ ಸೀಮಿತವಾಗಿ ಲೀಸ್‌ಗೆ ನೀಡಿದ್ದು, ನಂತರ ಕೆಲವೇ ವರ್ಷಗಳಲ್ಲಿ ವನ್ಯಜೀವಿ ವಿಭಾಗದ ಅರಣ್ಯವಾಗಿದೆ ಎಂದು ಕೇವಲ ಕೆಲವು ಹೆಕ್ಟೆರ್ ಪ್ರದೇಶವನ್ನು ಕೈಬಿಟ್ಟು ೨೦೦೦೫.೪೨ ಹೆಕ್ಟೆರ್ ಪ್ರದೇಶದ ಲೀಸ್‌ನ್ನು ಮುಂದುವರೆಸಲಾಗಿತ್ತು. ಸದರಿ ಲೀಸ್ ದಿನಾಂಕ 12-08-2020ಕ್ಕೆ ಅಂತ್ಯವಾಗಿದೆ. ಮುಂದುವರೆದ ಲೀಸ್‌ನ್ನು ರದ್ದುಮಾಡಿ ಅರಣ್ಯ ಭೂಮಿಯನ್ನು ಎಂಪಿಎಂ ಯಿಂದ ಹಿಂಪಡೆದು ಕೂಡಲೇ ಅರಣ್ಯ ಇಲಾಖೆ ಸುಪ್ರದಿಗೆ ನೀಡಬೇಕು ಎಂದು ಒಕ್ಕೂಟದ ಸಂಚಾಲಕ ಕೆ.ಪಿ. ಶ್ರೀಪಾಲ್ ಇಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

2020ರ ನವಂಬರ್‌ನಲ್ಲಿ ಅಂತ್ಯಗೊಂಡಿದ್ದ ಲೀಸ್ ಅವಧಿಯನ್ನು 2060ರವರೆಗೆ ಮುಂದುವರೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಆದರೆ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಲಿಲ್ಲ. ಅಂದಿನಿಂದ ಅಕೇಷಿಯ ಗಿಡಗಳನ್ನು ನೆಡಲು ನೀಡಿರಲಿಲ್ಲ. ಹಿಂದಿನ ಜಿಲ್ಲಾಧಿಕಾರಿ ಗಳು ಹಾಗೂ ಎಂಪಿಎಂನ ಎಂ.ಡಿ.ಯಾಗಿದ್ದ ಡಾ.ಸೆಲ್ವಮಣಿ ಅವರು ಸಹ ಗಿಡನೆಡಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದ್ದರು ಎಂದರು.

ಒಕ್ಕೂಟವು ಸಹ ಕಟಾವಿಗೆ ಬಂದಿರುವ ಅಕೇಷಿಯ ಗಿಡಗಳನ್ನು ಹಂತ ಹಂತವಾಗಿ ಕಟಾವು ಮಾಡಿ ಎಂಪಿಎಂಗೆ ಕೊಡಿ. ನಂತರ ಆ ಜಾಗದಲ್ಲಿ ಕಾಡು ಬೆಳೆಸುವಂತೆ ಎಂಬ ಒಕ್ಕೂಟದ ಹೋರಾಟದಿಂದಾಗಿ ಯಶಸ್ವಿ ದೊರೆತಿತ್ತು. ಕಾರ್ಖಾನೆ 2015ರಲ್ಲಿ ಸ್ಥಗಿತಗೊಂಡಿದ್ದು, 2000ಕ್ಕೂ ಹೆಚ್ಚು ಇದ್ದ ನೌಕರರು ಈಗ 6ರಿಂದ 7 ನೌಕರರು ಇದ್ದಾರೆ. ಯಂತ್ರಗಳು ಹಾಳಾಗಿವೆ. ಈ ಕಾರ್ಖಾನೆ ಪುನರಾಂಭಿಸುವುದು ಕನಸ್ಸಿನ ಮಾತಾಗಿದೆ ಎಂದರು.

ಹಿಂದಿನ ಬಿಜೆಪಿ ಸರ್ಕಾರ ಅರಣ್ಯ ವಿರೋಧಿ ನೀತಿಯನ್ನು ವಿರೋಧಿಸಿ  ಹೋರಾಟ ಮಾಡುವುದರೊಂದಿಗೆ ಮುಖ್ಯಮಂತ್ರಿಗಳಿಗೆ 3 ಬಾರಿ ಮನವಿಯನ್ನು ನೀಡುವುದರೊಂದಿಗೆ ಮಲೆನಾಡು ಭಾಗದ ಎಲ್ಲಾ ತಾಲ್ಲೂಕು ಕೇಂದ್ರ ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಧರಣಿಗಳನ್ನು ಮಾಡುವ ಮೂಲಕ ಮನವಿಯನ್ನು ನೀಡಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಆದರೆ ಸರ್ಕಾರ ಮಲೆನಾಡಿನ ಜನರ ಜನಾಭಿಪ್ರಾಯದ ವಿರುದ್ಧವಾಗಿ ಪರಿಸರ ವಿರೋಧಿಯಾಗಿ ನಡೆದುಕೊಂಡ ಸಂದರ್ಭದಲ್ಲಿ ಆಗಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಅವರ ಶಿವಮೊಗ್ಗ ಭೇಟಿ ಸಮಯದಲ್ಲಿ ಮನವಿ ನೀಡಿದ್ದೆವು. ಸದರಿ ಮನವಿಗೆ ಸ್ಪಂದಿಸಿ ಸರ್ಕಾರಕ್ಕೆ ಪತ್ರ ಬರೆದು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ಇದೆಲ್ಲದರ ನಡುವೆಯೂ ಹಿಂದಿನ ಸರ್ಕಾರ 2020ರ ನವೆಂಬರ್‌ನಲ್ಲಿ ಅರಣ್ಯ ಭೂಮಿಯನ್ನು ಸ್ಥಗಿತಗೊಂಡ ಎಂಪಿಎಂ ಕಾರ್ಖಾನೆಯ ಹೆಸರಿಗೆ  ಮತ್ತೆ ಲೀಸ್ ಮಾಡಿರುತ್ತದೆ. ಈ ರೀತಿ ಮರುಲೀಸ್ ಮಾಡಿರುವ ಹಿಂದಿನ ಉದ್ದೇಶ ಸರ್ಕಾರ ಅರಣ್ಯ ಭೂಮಿಯನ್ನು ಖಾಸಗೀಕರಣ ಮಾಡುವ ದುರುದ್ದೇಶ ವಾಗಿದೆ ಎಂದು ಆರೋಪಿಸಿದರು.

ಎಂಪಿಎಂಗೆ ಲೀಸ್ ನೀಡಿದ್ದ ೨೦೦೦೫.೪೨ ಹೆಕ್ಟೇರ್ ಅರಣ್ಯ ಭೂಮಿಯನ್ನು ಸರ್ಕಾರ ಕೂಡಲೇ ವಾಪಾಸ್ಸು ಪಡೆದು ಕೂಡಲೇ ಅರಣ್ಯ ಇಲಾಖೆಗೆ ನೀಡುವಂತೆ ಒತ್ತಾಯಿಸಿ ಹಾಗೂ ಪರಿಸರಕ್ಕೆ ಮಾರಕವಾಗಿರುವ ಅಕೇಷಿಯ ಮತ್ತು ನೀಲಗಿರಿಯನ್ನು ನಿಷೇಧಿಸುವಂತೆ ಮನವಿ ಮಾಡಿಕೊಳ್ಳಲು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಗಮನಕ್ಕೆ ತರಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪ್ರೊ. ರಾಜೇಂದ್ರ ಚೆನ್ನಿ, ಎಂ. ಗುರುಮೂರ್ತಿ, ಸುರೇಶ್ ಹರತಾಳು, ಮಾಲತೇಶ್ ಬೊಮ್ಮನಕಟ್ಟೆ,  ಪ್ರಸನ್ನ, ಹರಿಗೆ ರವಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments