ಶಿವಮೊಗ್ಗ : ಸರ್ಕಾರಿ ಖಜಾನೆ ಖಾಲಿಯಾಗಿದ್ದು, ಎಲ್ಲಾ ಕಡೆಯಿಂದಲೂ ದುಡ್ಡು ಹೊಡೆಯಲು ಸರ್ಕಾರ ಆದೇಶ ನೀಡಿದೆ. ಟ್ರಾಫಿಕ್ ಪೊಲೀಸರನ್ನು ವಸೂಲಿ ಮಾಡಲು ಸರ್ಕಾರ ಬೀದಿಗಿಳಿಸಿದೆ. ಬಡವರು ಸಂತೆಗೆ ಹೋಗಲು ಆಗುತ್ತಿಲ್ಲ. ಒಂದು ಕಡೆ ಫ್ರೀ ಎನ್ನುವುದು ಮತ್ತೊಂದು ಕಡೆ ದುಪ್ಪಟ್ಟು ವಸೂಲಿ ಮಾಡುವುದು ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಕಾಂಗ್ರೆಸ್ ಸರ್ಕಾರ ವಿರುದ್ಧ ದೂರಿದರು.
ರಾಜ್ಯ ಸರ್ಕಾರದ ಬೆಲೆ ಏರಿಕೆಯನ್ನು ವಿರೋಧಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರೈತರಿಗೆ ಹಾಲಿನ ಸಬ್ಸಿಡಿ ಇನ್ನೂ ನೀಡಿಲ್ಲ. ಎಲ್ಲಾ ವಸ್ತುಗಳ ಬೆಲೆಯನ್ನು ಈ ಸರ್ಕಾರ ಏರಿಸಿದೆ. ಪಹಣಿಯಿಂದ ಹಿಡಿದು ಸರ್ಕಾರದ ಎಲ್ಲಾ ಸೇವೆಗಳಿಗೂ 10 ಪಟ್ಟು ದರ ಏರಿಸಿದ್ದು, ಭ್ರಷ್ಟಾತಿಭ್ರಷ್ಟ ಸರ್ಕಾರ ಇದಾಗಿದೆ ಎಂದರು.
ಪ್ರತಿಭಟನೆಯಲ್ಲಿ ಶಾಸಕ ಡಿ.ಎಸ್.ಅರುಣ್ ಬೆಲೆ ಏರಿಕೆ ಖಂಡಿಸಿ ಶಿವಪ್ಪ ನಾಯಕ ವೃತ್ತದಿಂದ ಕುದುರೆಯ ಮೇಲೆ ಬಂದು ಪ್ರತಿಭಟನೆ ವ್ಯಕ್ತಪಡಿಸಿದರು. ಯುವಮೋರ್ಚಾದವರು ಜೈಲುವೃತ್ತದಿಂದ ಸೀನಪ್ಪ ಶೆಟ್ಟಿ ವೃತ್ತದವರೆಗೆ ಕಾರನ್ನು ಎಳೆಯುವುದರ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಾರಿನ ಮೇಲೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವರಾಜ್‍ಕುಮಾರ್ ಅವರ ಅಣುಕು ವೇಷ ಧರಿಸಿ ಪ್ರತಿಭಟನೆ ಮಾಡಿದರು. ರೈತ ಮೋರ್ಚಾದವರು ಮಹಾವೀರವೃತ್ತದಿಂದ ಎತ್ತಿನಗಾಡಿಯ ಮೂಲಕ ಪ್ರತಿಭಟಿಸಿದರೆ, ಶಿವಪ್ಪನಾಯಕ ವೃತ್ತದಿಂದ ದ್ವಿಚಕ್ರ ವಾಹನದ ಅಣಕುಶವಯಾತ್ರೆ ನಡೆಯಿತು. ಎಸ್ಸಿ ಮೋರ್ಚಾದವರು ಬೈಕ್‍ನ್ನು ದಾರದ ಮೂಲಕ ಎಳೆದು ತಂದು ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿದರೆ, ಮಹಿಳಾ ಮೋರ್ಚಾದವರು ತರಕಾರಿ ಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ಪ್ರದರ್ಶಿಸಿ ಸಂತೆಯನ್ನು ನಿರ್ಮಿಸಿ ಸರ್ಕಾರಕ್ಕೆ ಅಣಕಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭಾರತಿಶೆಟ್ಟಿ, ಮುಖಂಡರಾದ ಎಂ.ಬಿ.ಹರಿಕೃಷ್ಣ, ಶಿವರಾಜ್, ಎಸ್.ದತ್ತಾತ್ರಿ. ಪ್ರಶಾಂತ್ ಕುಕ್ಕೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯತ್ರಿ ಮಲ್ಲಪ್ಪ, ರೈತಮೋರ್ಚಾ ಅಧ್ಯಕ್ಷ ಸಿದ್ದಲಿಂಗಪ್ಪ, ನಗರಾಧ್ಯಕ್ಷ ಮೋಹನ ರೆಡ್ಡಿ, ಸಂತೋಷ್ ಬಳ್ಳಕೆರೆ, ವಿನ್ಸಂಟ್ ರೋಡ್ರಿಗಸ್, ಮಾಲಂತೇಶ್, ಜಗದೀಶ್ ಮೊದಲಾದವರು ಇದ್ದರು.