ಶಿವಮೊಗ್ಗ : ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಇಂಜಿನಿಯರಿಂಗ್ ಕ್ಷೇತ್ರವು ತಂದೊಡ್ಡುವ ನವನವೀನ ಪ್ರಾಯೋಗಿಕ ಸವಾಲುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಪರಿಹರಿಸುವಲ್ಲಿ ಈ ಬಗೆಯ ಪ್ರಾತ್ಯಕ್ಷಿಕೆ ಪ್ರದರ್ಶನ ಶಿಬಿರಗಳು ಉತ್ತಮವಾದ ವೇದಿಕೆಯನ್ನು ನಿರ್ಮಿಸಲಿವೆ ಎಂದು ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಯುವರಾಜು ಬಿ ಎನ್ ಒಂದು ದಿನದ ಪ್ರಾಜೆಕ್ಟ್ ಎಕ್ಸಿಬಿಷನ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸಕ್ತ ಔದ್ಯೋಗಿಕ ಹಾಗೂ ಕಾರ್ಯಕ್ಷೇತ್ರದಲ್ಲಿ ಸೈದ್ಧಾಂತಿಕ ಜ್ಞಾನಾರ್ಜನೆಯ ಜೊತೆ ಜೊತೆಗೆ ಪ್ರಾಯೋಗಿಕವಾಗಿ ಪ್ರಯೋಗಗಳನ್ನು ಮಾಡುವ ಮೂಲಕ ಲಭಿಸುವ ಜ್ಞಾನವನ್ನು ಒರೆಗೆ ಹಚ್ಚಿ ಅದ್ವಿತೀಯವಾದದನ್ನು ಸಾಧಿಸಲು ಈ ಮೂಲಕ ಕಾರ್ಯತತ್ಪರರಾಗಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ನುಡಿದರು. ಪ್ರಚಲಿತದಲ್ಲಿರುವ ತಾಂತ್ರಿಕ, ಔದ್ಯೋಗಿಕ ಹಾಗೂ ತಂತ್ರಜ್ಞಾನ ಕ್ಷೇತ್ರದ ಅದ್ವಿತೀಯ ಸಂಶೋಧನಾತ್ಮಕ ಚಟುವಟಿಕೆಗಳ ಫಲಶ್ರುತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳುವುದರ ಮೂಲಕ ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಅವುಗಳ ಉಪಯುಕ್ತತೆಯನ್ನು ಅರಿತುಕೊಳ್ಳುವಲ್ಲಿ ಪ್ರಯತ್ನಿಸಬೇಕೆಂದು ಸೂಚ್ಯವಾಗಿ ತಿಳಿಸಿದರು. ಈ ಬಗೆಯ ಪ್ರಾತ್ಯಕ್ಷಿಕೆ ಪ್ರದರ್ಶನ ಮೇಳಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಪ್ರಾಯೋಗಿಕ ಚಾಕಚಕ್ಯತೆಗಳನ್ನು ವೃದ್ಧಿಸಿಕೊಳ್ಳುವಲ್ಲಿ ಒಂದು ಭದ್ರ ಅಡಿಪಾಯ
ವನ್ನು ಸೃಷ್ಟಿಸಲಿವೆ ಎಂಬುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ನೀಡಿದರು.
ಇಂಜಿನಿಯರಿಂಗ್ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಅತ್ಯವಶ್ಯಕವಿರುವ ಪ್ರಾಯೋಗಿಕ ಮಟ್ಟದ ಸವಾಲುಗಳನ್ನು ಅತ್ಯಂತ ಚಾಣಾಕ್ಷತನದಿಂದ ಹಿಮ್ಮೆಟ್ಟಿಸುವಲ್ಲಿ ಭೌತಶಾಸ್ತ್ರ ರಸಾಯನಶಾಸ್ತ್ರ ಹಾಗೂ ಗಣಿತಶಾಸ್ತ್ರದ ಜೊತೆ ಜೊತೆಗೆ ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಸೈನ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ಮೆಷಿನ್ ಲನಿಂಗ್, ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಾನಿಕ್ಸ್ ಮತ್ತು ಎಲೆಕ್ಟ್ರಿಕಲ್ ಕ್ಷೇತ್ರಗಳ ಹಲವಾರು ಮೂಲಭೂತ ಪರಿಕಲ್ಪನೆಗಳು ಸಹಾಯ ಹಸ್ತವನ್ನು ಚಾಚುವುದರಲ್ಲಿ ತಮ್ಮದೇ ಆದ ಪ್ರಸ್ತುತತೆಯನ್ನು ಪಡೆದುಕೊಂಡಿವೆ ಎಂದು ಪಿಇಎಸ್‌ಐಟಿಎಂನ ಇನ್ಫರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಹೆಚ್ ಆರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಅವೀಶ್ ಎಸ್ ಟಿ ಈ ರೀತಿಯ ಪ್ರಾತ್ಯಕ್ಷಿಕೆ ಪ್ರದರ್ಶನ ಮೇಳಗಳು ವಿದ್ಯಾರ್ಥಿಗಳಲ್ಲಿ ಹೊಸ ಹುರುಪಿನೊಂದಿಗೆ ಅತ್ಯುನ್ನತವಾದದ್ದನ್ನು ಸಾಧಿಸುವಲ್ಲಿ ಒಂದು ಭದ್ರ ಬುನಾದಿಯನ್ನು ರೂಪಿಸಲಿವೆ ಎಂದು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ್ ಕುಮಾರ್ ಸ್ವಾಗತಿಸಿ, ವಿಭಾಗದ ಅಧ್ಯಾಪಕ ಸಿಬ್ಬಂದಿ ರೋಹಿತ್ ಮನೋಹರ್ ವಂದಿಸಿದರು. ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಒಟ್ಟಾರೆಯಾಗಿ ಐವತ್ತಕ್ಕೂ ಹೆಚ್ಚು ಪ್ರಾತ್ಯಕ್ಷಿಕೆಗಳನ್ನು ಪ್ರಾಜೆಕ್ಟ್ ಎಕ್ಸಿಬಿಷನ್ ಸಮ್ಮೇಳನದಲ್ಲಿ ಪ್ರದರ್ಶಿಸಿದರು. ಪಿಇಎಸ್‌ಐಟಿಎಂನ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
…………………………………..
ಈ ಒಂದು ದಿನದ ಪ್ರಾತ್ಯಕ್ಷಿಕೆ ಪ್ರದರ್ಶನ ಮೇಳವನ್ನು ಪಿಇಎಟಿಎಂನ ರಸಾಯನಶಾಸ್ತ್ರ ವಿಭಾಗದ ಮುಂದಾಳತ್ವದಲ್ಲಿ ಆಯೋಜಿಸಲಾಗಿತ್ತು. ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ್ ಕುಮಾರ್ ಈ ಪ್ರದರ್ಶನ ಸಮ್ಮೇಳನವು ಅತ್ಯಂತ ಸುಲಲಿತವಾಗಿ ಜರುಗುವಲ್ಲಿ ತಮ್ಮದೇ ಆದ ಮಾರ್ಗದರ್ಶನ, ಕೊಡುಗೆಗಳನ್ನು ನೀಡಿದರು. ಒಂದು ದಿನದ ಪ್ರಾತ್ಯಕ್ಷಿಕೆ ಪ್ರದರ್ಶನ ಮೇಳವು ಯಶಸ್ವಿಯಾಗಿ ಜರುಗಲು ಮುಖ್ಯ ಸಂಚಾಲಕರಾದ ಶ್ರೀ ರೋಹಿತ್ ಮನೋಹರ್, ಪ್ರಾಧ್ಯಾಪಕರು, ರಸಾಯನಶಾಸ್ತ್ರ ವಿಭಾಗ ಇವರ ಪಾತ್ರವೂ ಪ್ರಮುಖವಾದದ್ದಾಗಿದೆ. ರಸಾಯನಶಾಸ್ತ್ರ ವಿಭಾಗದ ಅಧ್ಯಾಪಕ ಸಿಬ್ಬಂದಿ ಡಾ. ಶಶಿಕುಮಾರ್ ಜೆ ಕೆ ಮತ್ತು ಅಶ್ವಿನಿ ಹೇಳವಾರ್ ತಮ್ಮದೇ ರೀತಿಯಲ್ಲಿ ಉಪಯುಕ್ತ ಮಾಹಿತಿಗಳನ್ನು ನೀಡಿ ಪ್ರದರ್ಶನ ಮೇಳವು ಹೆಚ್ಚಿನ ಯಶಸ್ಸಿನೊಂದಿಗೆ ಸಂಪನ್ನಗೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು.