ಶಿವಮೊಗ್ಗ: ಈ ಬಾರಿಯ ಡಿಸಿಸಿ ಬ್ಯಾಂಕ್ ಚುನಾವಣೆಯು ಭಾರೀ ಪೈಪೋಟಿ, ವಾಮಮಾರ್ಗಗಳ ಅನುಸರಣೆ, ಎಂಎಲ್ ಎ ಮತ್ತು ಎಂಪಿಗಳ ಪಾಲ್ಗೊಳ್ಳುವಿಕೆಯಿಂದ ಇದರ ಚುನಾವಣೆಯ ಇತಿಹಾಸದಲ್ಲಿಯೇ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಬ್ಯಾಂಕಿಗೆ ಸಂಬಂಧ ಪಟ್ಟ ನೇಮಕಾತಿಯಲ್ಲಿನ ಅವ್ಯವಹಾರಗಳನ್ನು ಗಮನದಲ್ಲಿಟ್ಟುಕೊಂಡು ಮತದಾರರು ತಮ್ಮ ಮತವನ್ನು ಚಲಾಯಿಸಬೇಕೆಂದು ಮಾಜಿ ಸಂಸದ ಅಯನೂರು ಮಂಜುನಾಥ್ ಕರೆ ನೀಡಿದರು.
ಗುರುವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದರ ಚುನಾವಣೆಯ ಇತಿಹಾಸದಲ್ಲಿಯೇ ಮತದಾರರಿಗೆ ಇಷ್ಟೊಂದು ಅಮಿಷವನ್ನು ಯಾರು ಒಡ್ಡಿರಲಿಲ್ಲ. ಲೋಕಸಭೆ ಮತ್ತು ವಿಧಾ ಪರಿಷತ್ ಚುನಾವಣೆಯಷ್ಟೇ ಇದು ರಂಗೇರುತ್ತಿರುವುದು ನನಗೆ ಅಶ್ಚರ್ಯವನ್ನುಂಟು ಮಾಡಿದೆ. ಮತದಾರರಿಗೆ ಇಬ್ಬರು ಮಾಜಿ ಮುಖ್ಯಮಂತ್ರಿಗಳು ಪೋನ್ ಕರೆ ಮೂಲಕ ಮತಯಾಚಿಸುತ್ತಿರುವುದು ಕಂಡುಬರುತ್ತಿದೆ. ಸೋಲು ತಮ್ಮ ಪ್ರತಿಷ್ಠೆಯಾಗಿದೆ ಎಂದು ಮತದಾರರಲ್ಲಿ ನಿರಂತರ ಒಡನಾಟವಿರುವುದು ಮಹಾಶ್ಚರ್ಯವಾಗಿದೆ. ಎಲ್ಲ ನಾಯಕರು ಈ ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ. ಮತದಾರರಿಗೆ ಮನವೋಲಿಸುವ ರೀತಿ ಅದ್ಭುತ ಎಂದು ಅವರು ವ್ಯಂಗ್ಯವಾಡಿದರು.
ಈ ಬ್ಯಾಂಕಿಗೆ ಸಂಬಂಧ ಪಟ್ಟ ನೇಮಕಾತಿ ಸಂಬಂಧ ಈ ಹಿಂದಿನ ಅವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ೯೮ ನೇಮಿಕಾತಿಗಳ ವಿಷಯದಲ್ಲಿ ಒಬ್ಬೊಬ್ಬ ಅಭ್ಯರ್ಥಿಯಿಂದ ಸುಮಾರು ೪೫ರಿಂದ ೫೦ ಲಕ್ಷದಷ್ಟು ಲಂಚವನ್ನು ಸ್ವೀಕರಿಸಲಾಗಿದೆ. ಈ ಸಂಬಂಧ ಪ್ರಕರಣ ಹೈಕೋರ್ಟ್ ನಲ್ಲಿ ವಿಚಾರಣೆಯಲ್ಲಿದೆ. ನಾಳೆ ತೀರ್ಪು ವ್ಯತಿರಿಕ್ತವಾಗಿ ಬಂದರೆ ಈ ೯೮ ಅಭ್ಯರ್ಥಿಗಳು ಬೀದಿಪಾಲು ಆಗಬೇಕಾಗುತ್ತದೆ. ಇವರೆಲ್ಲಾ ಸಾಲ ಸೋಲ ಮಾಡಿ ತಮ್ಮ ಆಸ್ತಿಯನ್ನು ಮಾಡಿದವರು ಇದ್ದಾರೆ. ಈಗ ಲಂಚವಾಗಿ ತಗೆದುಕೊಂಡಿರುವ ಈ ಲಕ್ಷ ರೂ.ಗಳನ್ನು ಯಾರು ವಾಪಾಸ್ಸು ಕೊಡುತ್ತಾರೆ ಎಂದು ಪ್ರಶ್ನಿಸಿದರು.
ನಿಯಮ ಬಾಹಿರವಾಗಿ ನೇಮಕಾತಿ ಮಾಡಿಕೊಂಡಿರುವ ಬಗ್ಗೆ ಆಗಿರುವ ಲೋಪಗಳ ಕುರಿತು ಸರಕಾರದಿಂದ ವಿಚಾರಣೆಗೆ ಆದೇಶವಾಗಿ ಸಹಕಾರ ಸಂಘಗಳ ಉಪ ನಿಬಂಧಕರಾದ ಶಶಿಧರ್ ಪಿ ಅವರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸಿದ್ದು, ವಿಚಾರಣಾಧಿಕಾರಿಗಳು ವಿಚಾರಣೆಯನ್ನು ನಡೆಸಿ ಸರಕಾರಕ್ಕೆ ವರದಿ ನೀಡಿದ್ದರೂ ಇದುವರೆಗೆ ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಆಗಿರುವುದಿಲ್ಲ. ಸಾಮಾನ್ಯರ ಮತ್ತು ರೈತರ ಹಿತಾಕಾಪಡಲು ಸ್ಥಾಪಿತವಾಗಿರುವ ಈ ಸಹಕಾರಿ ಕ್ಷೇತ್ರವು ಮೀಟರ್ ಬಡ್ಡಿಗೆ ಬಲಿಯಾಗಬಾರದು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಡಿಸಿಸಿ ಬ್ಯಾಂಕಿಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂದು ಅವರು ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ್ ಡಿ.ಅರಗೊಳ್ಳ, ಸಿ.ಜು.ಪಾಶ, ಜಿ.ಡಿ.ಮಂಜುನಾಥ್, ಚಂದ್ರ ಭೂಪಾಲ್ ಉಪಸ್ಥಿತರಿದ್ದರು.