೧೧ ಸಾವಿರ ಎಕರೆ ಅರಣ್ಯ ಭೂಮಿ ಬಲಾಢ್ಯರಿಗೆ ಕಾಗೋಡು ಜೈಲಿಗೆ ಹೋದರೂ ಆಶ್ಚರ್ಯ ಪಡಬೇಕಿಲ್ಲ

ಶಿವಮೊಗ್ಗ: ಜಿಲ್ಲೆಯ ಹನ್ನೊಂದು ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿಯನ್ನು ಬಲಾಡ್ಯರಿಗೆ ಹಂಚಿಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಜೈಲಿಗೆ ಹೋಗುವ ಪರಿಸ್ಥಿತಿ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಜನಸಂಗ್ರಾಮ ಪರಿಷತ್ ಸಂಸ್ಥಾಪಕ ಎಸ್.ಆರ್.ಹಿರೇ ಮಠ ಹಾಗೂ ರಾಘವೇಂದ್ರ ಕುಷ್ಟಗಿ ಅಭಿಪ್ರಾಯಪಟ್ಟರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಅರಣ್ಯ ನಾಶ ಎಗ್ಗಿಲ್ಲದೆ ನಡೆದಿದೆ. ಇದರ ವಿರುದ್ಧ ಹೋರಾಟ ಮಾಡಿದವರಿಗೆ ಕಿರುಕುಳ ನೀಡಿ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹನ್ನೊಂದು ಸಾವಿರಕ್ಕೂ ಹೆಚ್ಚು ಎಕರೆ ಮೀಸಲು ಅರಣ್ಯವನ್ನು ಭೂಮಾಲೀಕ ಬಲಾಡ್ಯರಿಗೆ ಹಂಚಿಕೆಯಾಗಿರುವ ದುರಂತ ಪ್ರಕರಣವನ್ನು ತಾತ್ವಿಕ ಅಂತ್ಯ ಕಾಣಿಸದೆ ಬಿಡುವುದಿಲ್ಲ ಎಂದರು.
ಅಕ್ರಮ ಗಣಿಗಾರಿಕೆ ಹಾಗೂ ಅರಣ್ಯ ಭೂಮಿ ನಾಶ ತಡೆಯದಿದ್ದಲ್ಲಿ ಮುಂದೊಂದು ದಿನ ಕೊಡುಗಿನ ಸ್ಥಿತಿ ಶಿವಮೊಗ್ಗಕ್ಕೂ ಬರಬಹುದು. ಅದರಲ್ಲೂ ಪಶ್ಚಿಮಘಟ್ಟ ಪ್ರದೇಶವನ್ನು ರಕ್ಷಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ.
ಜನಸಂಗ್ರಾಮ ಪರಿಷತ್‌ನ ಕಾರ್ಯಕರ್ತರು ಈ ಅರಣ್ಯ ನಾಶದ ವಿರುದ್ಧ ಹೋರಾಟ ನಡೆಸಿ ಸಮಾಜದ ಗಮನ ಸೆಳೆದಿದ್ದಾರೆ. ಇದರಿಂದ ಆಕ್ರೋಶಗೊಂಡ ಅಕ್ರಮ ಗಣಿಗಾರಿಕೆ ಮತ್ತು ಅರಣ್ಯನಾಶ ಮಾಡುವ ವ್ಯಕ್ತಿಗಳು, ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯಕ್ಕೆ ಮುಂದಾಗಿದ್ದಾರೆ. ಈ ದುಷ್ಟರೊಂದಿಗೆ ಪೊಲೀಸ್ ಇಲಾಖೆಯು ಕೈಜೋಡಿಸಿ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.
ಹೊಸನಗರ ತಾಲೂಕಿನ ಗೇರುಪುರ, ಟೆಂಕಬೈಲು, ಮಸಗಲ್ಲಿ ಗ್ರಾಮಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ಜನಸಂಗ್ರಾಮ ರಾಜ್ಯ ಸಮಿತಿ ಸದಸ್ಯ ಗಿರೀಶ್ ಆಚಾರಿ ನಿರಂತರ ಹೋರಾಟ ಮಾಡುತ್ತ ಜನಜಾಗೃತಿ ಮಾಡುತ್ತಿದ್ದಾರೆ. ಆದರೆ ಗಣಿಗಾರಿಕೆ ನಡೆಸುತ್ತಿರುವವರು ಗಿರೀಶ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದು, ಇದನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿದರು.
ದಶಕಗಳಿಂದ ನಡೆಯುತ್ತಿರುವ ಅಕ್ರಮ ಕಲ್ಲು ಮತ್ತು ಮರಳು ಗಣಿಗಾರಿಕೆಯನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಜನಸಂಗ್ರಾಮದ ಗಿರೀಶ್ ಆಚಾರ್ಯ, ಜಯಲಕ್ಷ್ಮಿ, ಧನ್ಯಕುಮಾರ್, ಉಮಾ, ಆನಂದ, ವೀರೇಂದ್ರ ಮುಂದಾದವರಿಗೆ ಕಾನೂನಿನ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಈ ಮನವಿಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದಲ್ಲಿ ಜನಸಂಗ್ರಾಮ ಸಂಘಟನೆಯಿಂದ ರಾಜ್ಯಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜನಸಂಗ್ರಾಮ ಪರಿಷತ್‌ನ ರಾಜ್ಯಾಧ್ಯಕ್ಷ ಜಾನ್ ವೆಸ್ಲಿ, ಪ್ರಮುಖರಾದ ಮೀರಾ ಕುಷ್ಟಗಿ, ಪ್ರತಿಮಾ, ಓಂಕಾರ ಮೂರ್ತಿ, ಸುನೀತಾ, ಗಿರೀಶ್ ಆಚಾರ್ಯ, ಜಯಲಕ್ಷ್ಮಿ ಗಂಗಾಧರ ಮತ್ತಿತರರಿದ್ದರು.

SHARE
Previous article04 SEPT 2018
Next article05 SEPT 2018

LEAVE A REPLY

Please enter your comment!
Please enter your name here