ಆರ್ಎಂಎಂ, ಎಸ್.ಕುಮಾರ್, ಕೆ.ಎಲ್.ಜಗದೀಶ್ರಿಂದ ನಾಮಪತ್ರ
– ಜು. 30 ರಿಂದಲೇ ನಾಮಪತ್ರ ಸಲ್ಲಿಕೆ ಆರಂಭ
– ಆ.6 ನಾಮಪತ್ರ ಸಲ್ಲಿಸಲು ಕಡೆಯ ದಿನ
– ಆ.7ರಂದು ನಾಮಪತ್ರ ಪರಿಶೀಲನೆ
– ನಾಮಪತ್ರ ವಾಪಸ್ ಪಡೆಯಲು ಆ.8 ಕಡೆಯ ದಿನ
– ಆ. 14ರಂದು ಚುನಾವಣೆ, ಅಂದೇ ಸಂಜೆ ಫಲಿತಾಂಶ ಪ್ರಕಟ
ಶಿವಮೊಗ್ಗ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ (ಶಿದಾಚಿಮುಲ್) ಆಡಳಿತ ಮಂಡಳಿ ಚುನಾವಣೆ ರಂಗೇರುತ್ತಿದೆ. ನಿರ್ದೇಶಕರ ಸ್ಥಾನದ ಚುನಾವಣೆಗೆ ಸ್ಪರ್ಧೆ ಬಯಸಿ ಬುಧವಾರ ಘಟಾನುಘಟಿಗಳು ನಾಮಪತ್ರ ಸಲ್ಲಿಸಿದರು.
ಎಂಎಡಿಬಿ ಹಾಗೂ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆಂಚನಹಳ್ಳಿ ಕುಮಾರ್ ಮತ್ತು ಕುಂಚೇನಹಳ್ಳಿ ಕೆ.ಎಲ್.ಜಗದೀಶ್ ಅವರು ಬುಧವಾರ ನಾಮಪತ್ರ ಸಲ್ಲಿಸಿದರು. ಹಾಗೆಯೇ ದಾವಣಗೆರೆಯಿಂದ ಶಿಮೂಲ್ ಉಪಾಧ್ಯಕ್ಷರಾದ ಹೆಚ್.ಕೆ.ಬಸಪ್ಪ ಕೂಡ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಹೆಚ್.ಕೆ.ಬಸಪ್ಪ, ರೈತರ ಹಿತಾಸಕ್ತಿ ಕಾಪಾಡಲು ಹಾಗೂ ರೈತರ ಶ್ರೇಯೋಭಿವೃದ್ಧಿಗಾಗಿ ಹಗಲು ರಾತ್ರಿ ದುಡಿಯುತ್ತೇನೆ. ಮತ್ತು ಅವರ ಕಷ್ಟ ಸುಖದಲ್ಲಿ ಭಾಗಿಯಾಗುತ್ತೇನೆ. ಮತದಾರರು ನನ್ನನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ನಾಮಪತ್ರ ಸಲ್ಲಿಕೆ ಜು.೩೦ ರಿಂದ ಪ್ರಾರಂಭವಾಗಿದ್ದು, ಆ.೬ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಆ.೭ ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಆ.೮ ಕಡೆಯ ದಿನವಾಗಿದೆ.ಶಿವಮೊಗ್ಗ, ಸಾಗರ, ದಾವಣಗೆರೆ ಮತ್ತು ಚಿತ್ರದುರ್ಗ ಸೇರಿದಂತೆ ಒಟ್ಟು ೪ ವಿಭಾಗಗಳ ೧೪ ನಿರ್ದೇಶಕ ಸ್ಥಾನಕ್ಕೆ ಆಗಸ್ಟ್ ೧೪ರಂದು ಚುನಾವಣೆ ನಡೆಯಲಿದ್ದು, ಅಂದು ಸಂಜೆ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಿಸಲಾಗುತ್ತದೆ.
ಒಕ್ಕೂಟದ ೧೪೦೬ ಸಂಘಗಳಲ್ಲಿ ೧೧೭೧ ಸಂಘಗಳು ಮತದಾನದ ಹಕ್ಕು ಪಡೆದಿವೆ. ವಿವಿಧ ಕಾರಣಗಳಿಂದಾಗಿ ೨೩೫ ಸಂಘಗಳಿಗೆ ಮತದಾನದ ಹಕ್ಕು ಲಭಿಸಿಲ್ಲ. ಸಂಘಗಳ ಸಂಖ್ಯೆಗೆ ಅನುಗುಣವಾಗಿ ಒಕ್ಕೂಟವನ್ನು ೪ ವಿಭಾಗಗಳಾಗಿ ವಿಂಗಡಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ವಿಭಾಗಕ್ಕೆ ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ತಾಲೂಕು ಸೇರಿವೆ. ಸಾಗರ ವಿಭಾಗಕ್ಕೆ ಸಾಗರ, ಸೊರಬ, ಶಿಕಾರಿಪುರ, ಹೊಸನಗರ ತಾಲೂಕು ಸೇರ್ಪಡೆಗೊಂಡಿವೆ.
ದಾವಣಗೆರೆ ವಿಭಾಗಕ್ಕೆ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಜಗಳೂರು ತಾಲೂಕುಗಳು ಮತ್ತು ಚಿತ್ರದುರ್ಗ ವಿಭಾಗಕ್ಕೆ ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ತಾಲೂಕುಗಳು ಸೇರ್ಪಡೆಗೊಂಡಿವೆ.
ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರುಗಳಾದ ಕೆ.ಪಿ.ದುಗ್ಗಪ್ಪ ಗೌಡ, ಮಹಾಲಿಂಗಯ್ಯ ಶಾಸ್ತಿç, ಮಾಜಿ ಉಪಾಧ್ಯಕ್ಷ ಹೆಚ್.ಎಲ್.ಷಡಾಕ್ಷರಿ, ಅಖಿಲ ಕರ್ನಾಟಕ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್.ಮೋಹನ್, ಕುರುವಳ್ಳಿ ನಾಗರಾಜ್, ಹೊನ್ನವಿಲೆ ಶಶಿಕುಮಾರ್, ಕಾಟಿಕೆರೆ ನೀಲವತಮ್ಮ, ಮಾಳೂರು ಪೂರ್ಣೇಶ್ ಗೌಡ, ಸಾಲೂರು ರಾಜು, ಲೋಕೇಶ್ ಕರಕುಚ್ಚಿ, ಆರ್.ಸಿ.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.