ದೆಹಲಿ ಗದ್ದುಗೆ ಯಾರಿಗೆ?

ನವದೆಹಲಿ : ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶ ನಾಳೆ( ಜೂ. ೪) ಪ್ರಕಟವಾಗಲಿದ್ದು, ದೇಶದ ಅಧಿಕಾರದ ಗದ್ದುಗೆ ಯಾವ ಪಕ್ಷದ ಪಾಲಾಗಲಿದೆ, ಪ್ರಧಾನಿ ಮೋದಿಯವರು ಹ್ಯಾಟ್ರಿಕ್ ಸಾಧಿಸುವರೇ ಎಂಬೆಲ್ಲಾ ಪ್ರಶ್ನೆಗಳಿಗೆ  ಉತ್ತರ ಸಿಗಲಿದೆ.

ಕಳೆದ ೮೨ ದಿನಗಳಿಂದ ೭ ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತದಾರ ಯಾರ ಪರವಾಗಿ ತೀರ್ಪು ನೀಡಿದ್ದಾನೆ, ಯಾರಿಗೆ ಮತದಾರನ ಕೃಪಕಟಾಕ್ಷ ಸಿಕ್ಕಿದೆ ಎಂಬುದು ನಾಳೆ ಬಹಿರಂಗವಾಗಲಿದೆ.

ದೇಶದ ೫೪೩ ಲೋಕಸಭಾ ಕ್ಷೇತ್ರಗಳ ಚುನಾವಣೆ ೭ ಹಂತಗಳಲ್ಲಿ ನಡೆದು ಜೂ. ೧ ರಂದು ಅಂತಿಮ ಹಂತದ ಚುನಾವಣೆ ನಡೆದು ಲೋಕಸಭಾ ಚುನಾವಣೆಗಳು ಸಂಪನ್ನಗೊಂಡಿದ್ದವು.ಈ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದ್ದು, ಫಲಿತಾಂಶವೂ ನಾಳೆಯೇ ಪ್ರಕಟವಾಗಲಿದೆ.ಫಲಿತಾಂಶ ಏನಾಗಲಿದೆ, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದೆಲ್ಲಾ ನಾಳೆ ಬಹಿರಂಗವಾಗಲಿದೆ.  ಚುನಾವಣಾ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದ್ದು, ಗೆಲುವು ತಮ್ಮದಾಗಲಿ ಎಂದು ಕೆಲ ಅಭ್ಯರ್ಥಿಗಳು ಈಗಾಗಲೇ ದೇವರ ಮೊರೆ ಹೋಗಿದ್ದಾರೆ.

ಮತಗಟ್ಟೆ ಸಮೀಕ್ಷೆಗಳು ಪ್ರಧಾನಿ ಮೋದಿಯವರು ಹ್ಯಾಟ್ರಿಕ್ ಸಾಧಿಸಲಿದ್ದು, ಮತ್ತೆ ದೇಶದ ಅಧಿಕಾರ ಚುಕ್ಕಾಣಿಯನ್ನು ಎನ್‌ಡಿಎ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದ್ದು, ಈ ಭವಿಷ್ಯ ನಿಜವೇ, ಸುಳ್ಳೇ ಎಂಬುದು ಸಹ ನಾಳೆ ಜಗಜ್ಜಾಹೀರಾಗಲಿದೆ.ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿರೋಧ ಪಕ್ಷಗಳೆಲ್ಲಾ ಒಟ್ಟಾಗಿ ಇಂಡಿಯಾ ಮೈತ್ರಿಕೂಟವನ್ನು ರಚಿಸಿಕೊಂಡು ಸ್ಪರ್ಧೆಗೆ ಇಳಿದಿದ್ದು, ಇಂಡಿಯಾ ಮೈತ್ರಿಕೂಟ ಎನ್‌ಡಿಎಯನ್ನು ಸೋಲಿಸಿ ಅಧಿಕಾರ ಹಿಡಿಯಲಿದೆಯೇ ಎಂಬುದು ಗೊತ್ತಾಗಲಿದೆ.

ಮತಗಟ್ಟೆ ಸಮೀಕ್ಷೆಗಳು ತಮ್ಮ ಪರವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಪಕ್ಷಗಳು ಸಂತಸದಿಂದ ಬೀಗುತ್ತಿದ್ದರೆ, ಈ ಮತಗಟ್ಟೆ ಸಮೀಕ್ಷೆಗಳನ್ನು ತಿರಸ್ಕರಿಸಿರುವ ಇಂಡಿಯಾ ಒಕ್ಕೂಟ ಫಲಿತಾಂಶ ತಮ್ಮ ಪರವಾಗಿ ಇರಲಿದೆ, ಮತದಾರರು ತಮ್ಮ ಪರವಾಗಿ ತೀರ್ಪು ಕೊಟ್ಟಿದ್ದಾರೆ ಎಂಬ ವಿಶ್ವಾಸದಲ್ಲಿದೆ.ಲೋಕಸಭಾ ಚುನಾವಣೆಯ ಜತೆಗೆ ಆಂಧ್ರ ಪ್ರದೇಶ, ತೆಲಂಗಾಣ, ಸಿಕ್ಕಿಂ, ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೂ ಮತದಾನ ನಡೆದಿತ್ತು. ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಿನ್ನೆಯೇ ನಡೆದು ಈಗಾಗಲೇ ಫಲಿತಾಂಶ ಹೊರ ಬಿದ್ದಿದೆ.ಆಂಧ್ರಪ್ರದೇಶ ಮತ್ತು ಓರಿಸ್ಸಾ ವಿಧಾನಸಭೆಯ ಮತ ಎಣಿಕೆಯೂ ನಾಳೆ ನಡೆಯಲಿದ್ದು, ಈ ಎರಡೂ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದು ನಾಳೆ ಬಹಿರಂಗವಾಗಲಿದೆ.