6 ದಿನ ಪೊಲೀಸ್ ಕಸ್ಟಡಿಗೆ ನಟ ದರ್ಶನ್, ಪವಿತ್ರಗೌಡ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ಯುವಕನ ಹತ್ಯೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಕನ್ನಡದ ಹೆಸರಾಂತ ನಟ ದರ್ಶನ್‌ ಅವರನ್ನು ಮ್ಯಾಜಿಸ್ಟ್ರೇಟ್‌  ನ್ಯಾಯಾಯಲವೂ  6 ದಿನ ಪೋಲಿಸ್‌ ಕಸ್ಟಡಿಗೆ ಒಪ್ಪಿಸಿದೆ. ದರ್ಶನ್‌ ಅವರೊಂದಿಗೆ ನಟಿ ಪವಿತ್ರ ಗೌಡ ಸೇರಿ ೧೩ ಮಂದಿ ಆರೋಪಿಗಳನ್ನು ಕೂಡ ನ್ಯಾಯಾಲವೂ  6 ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಾಮಾಕ್ಷಿ ಪಾಳ್ಯ ಪೊಲೀಸರು ಬೆಳಗ್ಗೆ ನಟ ದರ್ಶನ್‌ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದರಲ್ಲದೆ,  ರೇಣುಕಾ ಸ್ವಾಮಿ ಕೊಲೆ ಯಾಗಿದ್ದ ಸ್ಥಳ ಮಹಜರು ನಡೆಸಿದರು. ಆನಂತರ ಸಂಜೆ ಮ್ಯಾಜಿಸ್ಟೇಟ್‌ ನ್ಯಾಯಾಧೀಶರ ನಿವಾಸದಲ್ಲಿ ದರ್ಶನ್‌, ಪವಿತ್ರ ಗೌಡ ಹಾಗೂ ಅವರ ಸಹಚರರು ಎನ್ನಲಾದ ೧೩ ಮಂದಿ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಅಲ್ಲಿ ನ್ಯಾಯಾಧೀಶರು, ಪ್ರಕರಣದ ವಿಚಾರಣೆ ನಡೆಸಿ, ದರ್ಶನ್‌ ಸೇರಿದಂತೆ ಆರೋಪಿಗಳನ್ನು ೬ ದಿನ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದರು.

ದಿನಾಂಕ 9 ರಂದು ಸುಮ್ಮನಹಳ್ಳಿಯಲ್ಲಿ ಗಸ್ತು ಮಾಡುವ ವೇಳೆ ಮೋರಿ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಬಿದ್ದಿರುವುದು ಕಂಡು ಬಂದಿತ್ತು. ಮೃತದೇಹದ ಮೇಲೆ ಗಾಯದ ಗುರುತುಗಳಿದ್ದವು. ಈ ಕುರಿತು ಮಾಹಿತಿ ನೀಡಿದೆನು ಎಂದು ಅಪಾರ್ಟ್ಮೆಂಟ್ವೊಂದರ ಸೆಕ್ಯೂರಿಟಿ ಗಾರ್ಡ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು.

ಪಟ್ಟಣಗೆರೆಯ ಶೆಡ್ಹೌಸ್ನಲ್ಲಿ ರೇಣುಕಾಸ್ವಾಮಿ ಕೊಲೆಯಾಗಿದ್ದು, ಬಳಿಕ ಶವವನ್ನು ಮೋರಿ ಪಕ್ಕದಲ್ಲಿ ಎಸೆಯಲಾಗಿತ್ತು . ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ  ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು,  ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಮೃತನ ವಿವರ ಹಾಗೂ ಆತ ಹತ್ಯೆಯಾಗಿರುವುದನ್ನು ಖಚಿತಪಡಿಸಿಕೊಂಡಿದ್ದರು. ಆತ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬುದು ಗೊತ್ತಾಗಿತ್ತು.  ಪ್ರಕರಣದ ಪ್ರಾರಂಭಿಕ ತನಿಖೆಯಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಣದ ವಿಚಾರವಾಗಿ ಹತ್ಯೆ ಮಾಡಿರುವುದಾಗಿ ಹೇಳಿದ್ದರು. ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಕೆಲವು ಮಾಹಿತಿಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ದರ್ಶನ್ ಸೇರಿ ಹಲವರನ್ನು ಬೆಳಗ್ಗೆ ವಶಕ್ಕೆ ಪಡೆದಿದ್ದರು.

ದರ್ಶನ ಬಂಧನ ಪ್ರಕರಣಕ್ಕೆ ಬಂಧಿಸಿದಂತೆ   ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸ್ಪಷ್ಟನೆ ನೀಡಿ, ಜೂನ್ 9ರಂದು ಅಪರಿಚಿತ ಶವ ಪತ್ತೆಯಾಗಿತ್ತು. ಮೃತದೇಹದ ಮೇಲಿದ್ದ ಗಾಯಗಳನ್ನ ಗಮನಿಸಿ ಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆನಂತರ ತಾಂತ್ರಿಕ ಅಂಶಗಳ ಆಧಾರದಲ್ಲಿ ಮೃತನ ವಿವರ ಕಲೆಹಾಕಲಾಗಿತ್ತು. ಮೃತ ವ್ಯಕ್ತಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (33) ಎಂಬುದು ತಿಳಿದು ಬಂದಿತ್ತು. ಆತ ಮೆಡಿಕಲ್ ಶಾಪ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ತನಿಖೆಯ ವೇಳೆ ನಟ ಹಾಗೂ ಆತನ ಸಹಚರರ ಸಹಿತ 10 ಜನರನ್ನ ವಶಕ್ಕೆ ಪಡೆಯಲಾಗಿದೆ. ಹತ್ಯೆಯಾದ ವ್ಯಕ್ತಿ ನಟಿಯೊಬ್ಬರಿಗೆ ಅಶ್ಲೀಲ ಕಮೆಂಟ್ಗಳನ್ನು ಮಾಡುತ್ತಿದ್ದ ಎಂಬ ಪ್ರಾಥಮಿಕ‌ ಮಾಹಿತಿ ದೊರೆತಿದೆ. ಹೆಚ್ಚಿನ ವಿಚಾರಣೆ ಮುಂದುವರೆದಿದೆ ಎಂದು ದಯಾನಂದ್ ಸ್ಪಷ್ಟನೆ ನೀಡಿದರು.

ನಟ ದರ್ಶನ್‌ ಅವರೊಂದಿಗೆ  ಕಿರಣ್, ಮಧು, ಲಕ್ಷ್ಮಣ್, ಆನಂದ್, ರಾಘವೇಂದ್ರ ಸೇರಿದಂತೆ 10 ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಇದೀಗ ವಿಚಾರಣೆ ನಡೆಸಿದರು.  ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್, ಎಸಿಪಿ ಚಂದನ್ ನೇತೃತ್ವದಲ್ಲಿ ವಿಚಾರಣೆ ನಡೆಯಿತು.  ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡರನ್ನು ಸಹ ಪೊಲೀಸರು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆತಂದಿದ್ದರು.  ಆನಂತರ ಸ್ಥಳ ಮಹಜರು ನಡೆಸಿ, ಸಂಜೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.

……………………………………………………

ಕೊಲೆಗೀಡಾದ ರೇಣುಕಾಸ್ವಾಮಿಯ ಚಿತ್ರದುರ್ಗ ನಿವಾಸದಲ್ಲಿ ಸ್ಮಶಾನ ಮೌನ?

ಚಿತ್ರದುರ್ಗ:  ಚಿತ್ರನಟ ದರ್ಶನ್ ಮತ್ತು ಆತನ ಗ್ಯಾಂಗ್‌ನಿಂದ ಕೊಲೆಗೀಡಾದರೆನ್ನಲಾದ  ರೇಣುಕಾಸ್ವಾಮಿಯ ಚಿತ್ರದುರ್ಗ ನಿವಾಸದಲ್ಲಿ ಸ್ಮಶಾನ ಮೌನ ಆವರಿಸಿದೆ.

ನಟ ದರ್ಶನ್ ಮತ್ತು ಆತನ ಗ್ಯಾಂಗ್ ನಡೆಸಿದ ಹಲ್ಲೆಯಿಂದಾಗಿ ಕೊಲೆಗೀಡಾಗಿರುವ ರೇಣುಕಾಸ್ವಾಮಿ ಚಿತ್ರದುರ್ಗ ಮೂಲದವರಾಗಿದ್ದು, ಸ್ಥಳೀಯ ಮೆಡಿಕಲ್ ಸ್ಟೋರ್‌ವೊಂದರಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.

ಕೆಇಬಿ ನಿವೃತ್ತ ನೌಕರನ ಮಗನಾಗಿರುವ ರೇಣುಕಾಸ್ವಾಮಿ, ತಂದೆ-ತಾಯಿ, ಪತ್ನಿ ಮತ್ತು ಸಹೋದರಿ ಹಾಗೂ ಅಪಾರ ಬಂಧು-ಬಳಗವನ್ನು ಹೊಂದಿದ್ದಾರೆ.   ರೇಣುಕಾಸ್ವಾಮಿ, ಚಿತ್ರನಟ ದರ್ಶನ್ ಅಭಿಮಾನಿಯೂ ಕೂಡ ಆಗಿದ್ದರು. ದರ್ಶನ್ ಕುಟುಂಬದ ಬಿರುಕು ಸರಿಪಡಿಸಲು ಹೋಗಿ, ಪವಿತ್ರ ಗೌಡ ಎಂಬುವವರಿಗೆ ವಾಟ್ಸಾಪ್ ಮೂಲಕ ಮೆಸೇಜ್ ಹಾಕಿದ್ದರು ಎಂಬ ಕಾರಣಕ್ಕೆ ದರ್ಶನ್ ಮತ್ತು ಆತನ ಬೆಂಬಲಿಗರು ಬೆಂಗಳೂರಿಗೆ ಕರೆಸಿಕೊಂಡು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಕೊಲೆಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

ನಟ ದರ್ಶನ ಮತ್ತು ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿ ಕೆಇಬಿ ನಿವೃತ್ತ ನೌಕರರೊಬ್ಬರ ಮಗನಾಗಿದ್ದು, ಉತ್ತಮವಾಗಿ ಜೀವನ ನಡೆಸುತ್ತಿದ್ದರು. ಸ್ಥಳೀಯ ಮೆಡಿಕಲ್ ಸ್ಟೋರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಸಹಜವಾಗಿ ಚಿತ್ರನಟ ದರ್ಶನ್ ಅವರ ಅಭಿಮಾನಿಯೂ ಆಗಿದ್ದರು. ಕಳೆದ ವರ್ಷ ಜೂನ್ ೨೮ಕ್ಕೆ ವಿವಾಹವಾಗಿದ್ದ ರೇಣುಕಾಸ್ವಾಮಿ ಆರು ತಿಂಗಳ ಗರ್ಭಿಣಿ ಪತ್ನಿಯನ್ನು ಬಿಟ್ಟು ಹೋಗಿರುವುದು ಇಡೀ ಸಂಬಂಧಿಕರಲ್ಲಿ ತೀವ್ರ ಆತಂಕಕ್ಕೆ ಈಡುಮಾಡಿದ್ದು, ಸಂಬಂಧಿಕರು ಮತ್ತು ಕುಟುಂಬದಲ್ಲಿ ಸ್ಮಶಾನ ಮೌನವೇ ಆವರಿಸಿದೆ.

ಕೊಲೆಗೀಡಾದ ರೇಣುಕಾಸ್ವಾಮಿಯ ನಿವಾಸದ ಬಳಿ ವೀರಶೈವ ಲಿಂಗಾಯಿತ ಸಮಾಜದ ಮುಖಂಡರಾದ ಕೆ.ಎಂ.ವಿರೇಶ್, ಷಡಾಕ್ಷರಯ್ಯ ಸ್ವಾಮಿ ಸೇರಿದಂತೆ ಹಲವು ಜನ ವೀರಶೈವ ಲಿಂಗಾಯಿತರು ಜಮಾವಣೆಗೊಂಡಿದ್ದು, ನಟ ದರ್ಶನ ಮತ್ತು ಗ್ಯಾಂಗ್ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಾನೂನು ಕೈಗೆತ್ತಿಕೊಂಡಿರುವ ದರ್ಶನ್ ಅವರನ್ನು ಆರೋಪಿ ನಂ:೧ ಎಂದು ಗುರುತಿಸಿ, ಮತ್ತು ಆತನ ಗ್ಯಾಂಗ್‌ನ್ನು ಕೊಲೆಗಡುಕರ ಗ್ಯಾಂಗ್ ಎಂದು ಪರಿಗಣಿಸಿ, ಕಠಿಣ ಕಾನೂನು ಕ್ರಮದ ಮೂಲಕ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀರಶೈವ ಪದ್ಧತಿಯಂತೆ ಶವ ಸಂಸ್ಕಾರ: ನಟ ದರ್ಶನ್ ಮತ್ತು ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾಸ್ವಾಮಿಯ ಮೃತ ದೇಹವನ್ನು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ತರಲಾಗಿದ್ದು, ವೀರಶೈವ ಜನಾಂಗದ ಪದ್ಧತಿಯಂತೆ ಶವ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದ್ದು, ಶವ ಸಂಸ್ಕಾರದ ಸಂದರ್ಭದಲ್ಲಿ ಸಮಾಜದ ಮುಖಂಡರು ಮತ್ತು ಬಂಧು-ಬಳಗದವರು ಭಾಗಿಯಾಗುವ ನಿರೀಕ್ಷೆಗಳಿವೆ.

ಚಿತ್ರನಟ ದರ್ಶನ್ ಮತ್ತು ಗ್ಯಾಂಗ್ ನವರು ಕೊಲೆಮಾಡಿರುವ ರೇಣುಕಾಸ್ವಾಮಿ ಕುಟುಂಬದವರು ಸೌಮ್ಯ ಸ್ವಭಾವದವರಾಗಿದ್ದು, ಯಾರೊಂದಿಗೂ ಕೂಡ ಇದೂವರೆಗೂ ವಿವಾದಗಳನ್ನು ಮಾಡಿಕೊಂಡವರಲ್ಲ. ಸುತ್ತಮುತ್ತಲ ಜನರೊಂದಿಗೆ ಸ್ನೇಹಪರರಾಗಿ ಬಾಳಿ ಬದುಕಿದವರು. ಅಂತಹ ರೇಣುಕಾಸ್ವಾಮಿಯನ್ನು ಕರೆದೊಯ್ದು ದರ್ಶನ್ ಮತ್ತು ಗ್ಯಾಂಗ್‌ನ್ನು ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ವೀರಶೈವ ಮುಖಂಡರು ಒತ್ತಾಯಿಸಿದ್ದಾರೆ.