ನನಗೂ ಲವ್ವಾಗಿದೆ – ಪುಸ್ತಕ ವಿಮರ್ಶೆ

ವಿಮರ್ಶಕರು : ಟಿ.ಜಿ.ನಂದೀಶ್

ಮನಸ್ಸು ಹಗುರಾಗಿಸುವ‘ನನಗೂ ಲವ್ವಾಗಿದೆ’

ಪ್ರೀತಿ ವ್ಯಾಖ್ಯಾನಕ್ಕೆ, ವಿಮರ್ಶೆಗೆ ನಿಲುಕದ ಸಂಗತಿ. ಆದರೂ ಪ್ರೀತಿಯನ್ನು ವ್ಯಾಖ್ಯಾನಿ ಸುವ, ಪದಗಳಲ್ಲಿ ಹಿಡಿದಿಡುವ ಮತ್ತು ಹಾಗೆ ಹಿಡಿದಿಟ್ಟ ಬಗೆಯನ್ನು ವಿಶ್ಲೇಷಿಸುವ ಕ್ರಿಯೆ ನಡೆಯುತ್ತಲೇ ಬಂದಿದೆ. ಈಗ ಅಂಥದ್ದೊಂದು ಸಂದರ್ಭ ನನ್ನೆದುರಿಗಿದೆ. ನನ್ನ ಬದುಕಿನಲ್ಲಿ ಎದುರಾದ ಸ್ನೇಹಮಯಿ ವ್ಯಕ್ತಿತ್ವದ ಸೃಜನಶೀಲ ಬರಹಗಾರ ಶ್ರೀಗಣೇಶ್ ಕೋಡೂರ್ ಅವರು ಬರೆದಿರುವ ‘ನನಗೂ ಲವ್ವಾಗಿದೆ’ ಎಂಬ ಪುಸ್ತಕವನ್ನು ಓದಿ ವಿಮರ್ಶಿಸುವಂತಹ ಸನ್ನಿವೇಶ ಸೃಷ್ಟಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಜನಪ್ರಿಯ ಪತ್ರಿಕೆ ನಮ್ಮ ನಾಡುವಿಗಾಗಿ ಈ ವಿಮರ್ಶೆ ಬರೆದಿರುವೆ. ಪ್ರೇಮಿಗಳ ದಿನದಂದು ಪ್ರಕಟಗೊಳ್ಳುತ್ತಿರುವ ಈ ವಿಮರ್ಶೆ ಸಂಪೂರ್ಣವಾಗಿ ಪ್ರೇಮಮಯವಾಗಿರುವ ‘ನನಗೂ ಲವ್ವಾಗಿದೆ’ ಪುಸ್ತಕದ ಕುರಿತಾಗಿ ನನ್ನ ಅನುಭವಕ್ಕೆ ದಕ್ಕಿದ  ಮುಕ್ತ  ಭಾವನೆಗಳನ್ನ ಅಕ್ಷರಗಳಲ್ಲಿ ಬಿಚ್ಚಿಡುವ ಪ್ರಯತ್ನ.

ಮಾನಸ ಪತ್ರಿಕೆಯ ಸಂಪಾದಕರಾಗಿ ದೊಡ್ಡ ಓದುಗ ವರ್ಗವನ್ನು ಸೃಷ್ಟಿಸಿಕೊಂಡಿರುವ ಅಪರೂಪದ ಪತ್ರಕರ್ತ ಶ್ರೀ ಗಣೇಶ್ ಕೋಡೂರ್. ಅಕ್ಷರಗಳ ಮೂಲಕವೇ ಪ್ರೀತಿ ಹಂಚುವ, ಸ್ನೇಹ ಬೆಸೆದುಕೊಳ್ಳುವ, ಓದುಗರ ದುಃಖ ದುಮ್ಮಾನಗಳಿಗೆ ಸ್ಪಂದಿಸುವ ಮುಖೇನ ಎಲ್ಲರಿಗೂ ಆಪ್ತರಾದವರು. ಮಾನಸ ಪತ್ರಿಕೆ ಯಾಚೆಗೂ ಅನೇಕ ಪುಸ್ತಕಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಬರಹಗಾರರಾಗಿ ಗುರುತಿಸಿಕೊಂಡ ಶ್ರೀಯುತರು ಪ್ರೀತ್ಸೋ ಹೃದಯಗಳಿಗಾಗಿ ಪ್ರೀತಿಯ ಆಳ ಅಗಲವನ್ನು ಪರಿಚಯಿಸುವ ಸಲುವಾಗಿ ‘ನನಗೂ ಲವ್ವಾಗಿದೆ’ಎಂಬ ಹೊಸ ಪುಸ್ತಕವೊಂದನ್ನು ಬರೆದಿದ್ದಾರೆ. ಈ ಬಾರಿಯ ಪ್ರೇಮಿಗಳ ದಿನದ ಉಡುಗೊರೆಯಾಗಿ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಈ ಪುಸ್ತಕ ಅನೇಕ ಕಾರಣಗಳಿಗಾಗಿ ನಮಗೆ ಆಪ್ತವಾ ಗುತ್ತಾ ಹೋಗುತ್ತದೆ.

 

ಪ್ರೀತಿ, ಜೀವನ ಮತ್ತು ಜೀವನ ಪ್ರೀತಿ

ಈ ಪುಸ್ತಕವನ್ನು ಓದಿ ಬದಿಗಿರಿಸುವ ಹೊತ್ತಿಗೆ ಮನಸು ಒಂದರ್ಥದಲ್ಲಿ ಭಾರವಾಗಿದೆ ಎನಿಸಿದರೆ, ಇನ್ನೊಂದರ್ಥದಲ್ಲಿ ಹಗುರಾಯಿತು ಎಂದೆನಿಸಿದ್ದು ಇದೆ. ಹೀಗೊಂದು ಭಾವ ಮೂಡುವುದಕ್ಕೆ ಕಾರಣ ಈ ಪುಸ್ತಕದಲ್ಲಿ ಹೇಳಲಾಗಿರುವ ವಿಷಯ ಮತ್ತು ಅದರ ವಿಸ್ತೀರ್ಣ.

‘ನನಗೂ ಲವ್ವಾಗಿದೆ’ ಎಂಬ ಶೀರ್ಷಿಕೆ ಕೇಳಿ ದೊಡನೆಯೇ ಓದುಗನಿಗೆ ಈ ಪುಸ್ತಕದ ಮೇಲೊಂದು ಪ್ರೀತಿ ಹುಟ್ಟಿ ಬಿಡುತ್ತದೆ. ಓದುತ್ತಾ ಹೋದಂತೆ ಆ ಪ್ರೀತಿ ಗಟ್ಟಿಯಾ ಗುತ್ತಾ ಹೋಗುತ್ತದೆ. ‘ನನಗೂ ಲವ್ವಾಗಿದೆ’ ಪುಸ್ತಕವನ್ನು ಪ್ರೇಮಗ್ರಂಥ ಎಂದೆನ್ನಬಹುದು. ಪ್ರೀತಿಯ ಕುರಿತಾಗಿ ಏನೆಲ್ಲಾ ಹೇಳಲು ಸಾಧ್ಯವೋ ಅದೆಲ್ಲವನ್ನು ಈ ಪುಸ್ತಕ ಹೇಳಿ ಬಿಡುತ್ತದೆ.

ಪ್ರೀತಿ ಮತ್ತು ಜೀವನದ ಮಹತ್ವ ವನ್ನು ಹೇಳುತ್ತಲೇ ಪ್ರೀತಿಯ ವೈಶಿಷ್ಟ್ಯ ಗಳ ಅನಾವರಣವಾಗುತ್ತದೆ. ಕೊನೆಗೆ ಪ್ರೀತಿಯಲ್ಲಿ ಸೋ ತರೂ, ಜೀವನದ ಹಲವು ಘಟ್ಟಗಳಲ್ಲಿ ನಿರಾಸೆ ಗಳು ಬೆಂಬಿಡದೆ ಕಾಡಿದರೂ ಜೀವನ ಪ್ರೀತಿ ಎಂಬುದು ಎಲ್ಲಾ ನೋವನ್ನು ಮರೆಸುತ್ತದೆ ಎಂಬುದನ್ನು ಗಣೇಶ್ ಹಲವು ಸ್ಪಷ್ಟನೆಗಳೊಂದಿಗೆ ಹೇಳುತ್ತಾರೆ. ಪ್ರೀತಿಗೆ ಜಾತಿ, ಮತ, ಪಂಥದ ಹಂಗಿಲ್ಲ.. ಪ್ರೀತಿಗ ಭಾಷೆ, ಗಡಿ ವಯಸ್ಸಿನ ಹಂಗಿಲ್ಲ.. ಅದು ಮನಸೊಳಗಣ ರಂಗು… ಪ್ರೀತಿ ಹುಟ್ಟುವ ಮುನ್ನ ಸಮಯ ಸಂದರ್ಭ…ರಾಹುಕಾಲ….  ಗುಳಿಕ ಕಾಲ….  ನೋಡಿ ಬರುವುದಿಲ್ಲ. ಅದು ಯಾವಾಗ ಬೇಕಾದರೂ ಆಗಬಹುದು… ಯಾರ ಮೇಲಾದರೂ ಆಗಬಹುದು… ಪ್ರೀತಿ ಯೆಂದರೆ ಅರ್ಥೈಸಿಕೊಳ್ಳುವಿಕೆ, ಪ್ರೀತಿ ಎಂದರೆ ಚೈತನ್ಯದ ಚಿಲುಮೆ, ಪ್ರೀತಿ ಎಂದರೆ ಕಾಳಜಿ .. ಸ್ಪಂದನೆ … ಅದು ಉಸಿರಾಟ ನಿರಂತರ ಪ್ರಕ್ರಿಯೆ ಎಂಬುದನ್ನು ಲೇಖಕರು ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ೧೮ ನೇ ವಯಸ್ಸಿನಲ್ಲಿ ಹುಟ್ಟುವ ಪ್ರೀತಿಯು ಪ್ರೀತಿಯೇ, ೮೦ ನೇ ವಯಸ್ಸಿನಲ್ಲಿ ಹುಟ್ಟುವ ಪ್ರೀತಿಯು ಪ್ರೀತಿಯೇ ಎನ್ನುವ ಮೂಲಕ ಪ್ರೀತಿಸುವವರಿಗೆ ವಯಸ್ಸಾಗುತ್ತದೆ… ಹೊರತು ಪ್ರೀತಿಗಲ್ಲ ಎಂಬುದನ್ನು ಸೂಕ್ಷ್ಮವಾಗಿ ಹೇಳುತ್ತಾರೆ.

ಕೆಲವರಿಗೆ ಪ್ರೀತಿ ಮೀಸೆ ಮೂಡುವ ಮುನ್ನ ಹುಟ್ಟಿದರೆ … ಇನ್ನು ಕೆಲವರಿಗೆ ಬದುಕಿನ ಮುಸ್ಸಂಜೆಯಲ್ಲಿ ಹುಟ್ಟುತ್ತದೆ….

ಪ್ರೀತಿ ಎಲ್ಲರ ಬದುಕಿನಲ್ಲೂ ಪ್ರವೇಶಿಸುತ್ತದೆ.. ಕೆಲವರಿಗೆ ಬೇಗ ದಕ್ಕುತ್ತದೆ .. ಕೆಲವರಿಗೆ ಕಾಡಿ ಒಲಿಯುತ್ತದೆ… ಪ್ರೀತಿ ಧನಿಕ, ಬಡವ, ಅಕ್ಷರಸ್ಥ, ಅನಕ್ಷರಸ್ಥ, ಮೇಲು ಜಾತಿಯವ, ಕೀಳು ಜಾತಿಯವ ಎಂದೆಲ್ಲ ವರ್ಗೀಕರಿಸಿ ಆಗುವ ಭಾವವಲ್ಲ… ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ಬಾರಿ ಪ್ರೀತಿಯಾಗುತ್ತೆ .. ಆ ಕ್ಷಣ ನಮ್ಮ ಮನಸ್ಸು ಕೂಗಿ ಹೇಳುವ ಮಾತೇ ನನಗೂ ಲವ್ವಾಗಿದೆ… ಪ್ರೀತಿ ಸಿಕ್ಕಿದೆ ಎಂಬುದು ಅರಿವಾದ ಕ್ಷಣವಿದೆಯೆಲ್ಲಾ ಅದು ವರ್ಣಿಸಲಸದಳ… ಎನ್ನುತ್ತಾರೆ ಗಣೇಶ್.

ಇಲ್ಲಿ ಅವರು ಪ್ರೀತಿಸುವ ಪ್ರತಿ ಹೃದಯವನ್ನು ಒಂದಷ್ಟು ಹೊತ್ತು ಹೊಕ್ಕು ವಿಮರ್ಶಿಸಿ, ವಿಶ್ಲೇಷಿಸಿ ಅವರೊಳಗಣ ಭಾವವನ್ನು ನೇರವಾಗಿ ಹಾಳೆ ಗಿಳಿಸಿದ್ದಾರಾ … ಎಂಬ ಅನುಮಾನವು ಕಾಡುವುದುಂಟು. ಆ ಮಟ್ಟಿಗೆ ಎದೆಗೆ ನಾಟುವಂತೆ… ದಾಟುವಂತೆ ಪದಗಳನ್ನು ಪೋಣಿಸಿದ್ದಾರೆ. ಪ್ರೀತಿ ಎಂಬುದು ಅಂದ ಚೆಂದವನ್ನು ಮೀರಿದ ಭಾವ.. ಒಮ್ಮೆ ಪ್ರೀತಿ ಹುಟ್ಟಿದರೆ ಸಾಕು … ಅದು ನಮ್ಮ ಪ್ರೇಮಿಯನ್ನು ಅವನ ಬಲಹೀನತೆಗಳ ಸಹಿತವಾಗಿ  ಪ್ರೀತಿಸುತ್ತದೆ.. ಎಂದು ಗಣೇಶ್ ಅವರು ಬರೆದಿರುವ ಮಾತುಗಳನ್ನು ಕೇಳಿದಾಗ ಅದು ಹಂಸಲೇಖ ಅವರು ‘ನೆನಪಿರಲಿ’ ಚಿತ್ರ ಕ್ಕಾಗಿ ಬರೆದ ಹಾಡೊಂದರ ಸಾಲು ನೆನಪಾಗುತ್ತದೆ

ಓರೆಗಳನ್ನು ಕೋರೆಗಳನ್ನು ಮನ್ನಿಸಿ ಮುದ್ದಿಸಿ

ಎಲ್ಲಾ ಸುಂದರ ಅಂತಾ ನೋಡೋ ಒಳಗಣ್ಣೇ ಪ್ರೀತಿ

ಕೋಟಿ ಜೀವಗಳು ಈ ಭುವಿಯಲ್ಲಿದ್ದರೂ ನಾವು ನೊಂದಾಗ ಜೊತೆಯಾಗಲು, ನಮ್ಮ ನೋವು ನಲಿವಿಗೆ ಸ್ಪಂದಿಸಲು, ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಲು ನಮಗೆ ಬೇಕಿರುವುದು ಒಂದೇ ಒಂದು ಜೀವ… ಯಾವುದೇ ಇತಿ ಮಿತಿಗಳಿಗೆ ಒಳಪಡದೆ ನಮ್ಮನ್ನು ವಿಪರೀತವಾಗಿ ಪ್ರೀತಿಸುವ ಒಂದೇ ಒಂದು ಜೀವವನ್ನು ಎಲ್ಲರೂ ಎದುರು ನೋಡುತ್ತಾರೆ. ಅದೇ ಬದುಕಿನ ವಾಸ್ತವ.. ಅದೇ ಪ್ರತಿ ಜೀವದ ನಿರೀಕ್ಷೆ…

ನಾವು ಇರುವುದೇ ನಿಜವಾದಾಗ ನಮ್ಮನ್ನು ಪ್ರೀತಿಸೋ ಜೀವವು ಎಲ್ಲೋ ಒಂದೆಡೆ ಇದೆ ಎಂಬುದು ಅಷ್ಟೇ ನಿಜ. ನಮಗಾಗುವ ಮೊದಲ ಪ್ರೀತಿಯಲ್ಲೇ ಅದು ದಕ್ಕದೆ ಹೋಗಬಹುದು.. ಆದರೆ ಪ್ರೀತಿಗೆ ಮೊದಲು ಕೊನೆ ಎಂಬುದಿಲ್ಲ… ಅದು ಯಾವ ಹೊತ್ತಿನಲ್ಲೂ ಆಗಬಹುದು… ನಿಜ ಪ್ರೇಮ ಮಾತ್ರ ಬದುಕಿನುದ್ದಕ್ಕೂ ರೋಮದಂತೆ ಮೈಗಂಟಿಕೊಂಡಿರುತ್ತದೆ.

ಲಂಬಾರ್ಗಿನಿ ಕಾರಿನಲ್ಲೇ ಓಡಾಡುವವನ ಪಕ್ಕದಲ್ಲಿ ಅವನನ್ನು ನೆಚ್ಚಿಕೊಂಡ ಪ್ರೀತಿ ಹೇಗೆ ಕುಳಿತಿರುತ್ತದೋ .. ಎತ್ತಿನಗಾಡಿ ಓಡಿಸುವವನ ಎದೆಯ ಮೇಲೂ ಅವನದ್ದೇ ಪ್ರೀತಿಯೊಂದು ಒರಗಿ ಕೂರುತ್ತದೆ… ಪ್ರತಿಯೊಬ್ಬರಿಗೂ ಪ್ರೀತಿಯಾಗುತ್ತದೆ .. ಮತ್ತು ಆ ಪ್ರೇಮ ಜೀವನ್ಮುಖಿಯಾಗಿ ನಮ್ಮೊಂದಿಗೆ ಹೆಜ್ಜೆ ಹಾಕುತ್ತದೆ ಎಂಬುದನ್ನು ಗಣೇಶ್ ಕೋಡೂರ್ ಅತ್ಯಾಕರ್ಷಕವಾಗಿ ಹೇಳಿದ್ದಾರೆ.

ಈ ಪುಸ್ತಕ ಒಂದೇ ಗುಟುಕಿಗೆ ಓದಿ ಮುಗಿಸುವಂಥದ್ದಲ್ಲ… ಕುಳಿತು .. ಎದ್ದು… ವಿರಮಿಸಿ.. ಮತ್ತೆ ಮತ್ತೆ ತನ್ನತ್ತ ತಿರುಗಿ ನೋಡುವಂತೆ  ಮಾಡುವ… ಬಿಟ್ಟು ಬಿಡದೇ ಓದಿಸಿಕೊಳ್ಳುವ ಪುಸ್ತಕ. ಇಲ್ಲಿ ಬರುವ ವಿಷಯಗಳನ್ನು ಕಥೆ ಮತ್ತು ಉಪಕಥೆಯ ಮೂಲಕ ಹೇಳಿದ್ದರೆ ಇನ್ನೂ ಚೆಂದಿರುತ್ತಿತ್ತು ಎನಿಸಿದ್ದು ಸುಳ್ಳಲ್ಲ… ಪಾತ್ರಗಳ ಮೂಲಕ ವಿಷಯವೊಂದನ್ನು ಕಟ್ಟಿಕೊಟ್ಟಾಗ ಅದು ಸ್ಮೃತಿಪಟಲದಲ್ಲಿ ಮತ್ತಷ್ಟು ಢಾಳಾಗಿ ಉಳಿಯುತ್ತದೆ ಎಂಬ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಿದ್ದೇನೆ.  ಮಿಕ್ಕಂತೆ ಹೇಳುವುದೇನು ಇಲ್ಲ..

ಈ ಪುಸ್ತಕವೇ ಎಲ್ಲವನ್ನು ಹೇಳುತ್ತದೆ…

ನನಗೂ ಲವ್ವಾಗಿದೆ .. ಪುಸ್ತಕವನ್ನು ಕೊಂಡು ಓದಿ… ಇದು ನಿಮ್ಮದೇ ಬದುಕಿನ ಪ್ರೀತಿ ಪುಟಗಳನ್ನು ಮತ್ತೊಮ್ಮೆ ನೆನಪಿಸುತ್ತದೆ…

ಮೊದಲೇ ಹೇಳಿದಂತೆ ಮನಸ್ಸನ್ನು ಭಾರ ಮಾಡಿ ಹಗುರಾಗಿಸುತ್ತದೆ…