ನಿಮ್ಮ ಪ್ರೀತಿಯ ‘ನಮ್ಮನಾಡು’ಪತ್ರಿಕೆಗೆ 18ರ ಹರೆಯ…

ನೂತನ ಸಹಸ್ರಮಾನದೊಂದಿಗೆ ಪತ್ರಿಕಾಲೋಕಕ್ಕೆ ಕಾಲಿರಿಸಿದ ‘ನಮ್ಮನಾಡು’ ಪತ್ರಿಕೆಗೆ ಇದೀಗ ೧೮ರ ಹರೆಯ. ೧೮ ವರ್ಷಗಳ ಪಯಣ ಪತ್ರಿಕಾ ಕ್ಷೇತ್ರದಲ್ಲಿ ದೊಡ್ಡ ಸಂಗತಿಯೇನಲ್ಲ. ಜಾಗತೀಕರಣದ ಸವಾಲುಗಳ ನಡುವೆ ದೊಡ್ಡ ಪತ್ರಿಕೆಗಳು ಜಿಲ್ಲಾ ಆವೃತ್ತಿಗಳಾಗಿ ಪರಿವರ್ತನೆಯಾದ ಬಳಿಕ ಸಣ್ಣ ಪತ್ರಿಕೆಗಳು ದೊಡ್ಡ ಸವಾಲುಗಳನ್ನು ಎದುರಿಸಬೇಕಾಯಿತು.
ಜೊತೆಗೆ ವಿದ್ಯುನ್ಮಾನ ಮಾಧ್ಯಮಗಳ ಪೈಪೋಟಿ ಬೇರೆ. ಹೀಗಾಗಿ ಸಣ್ಣ ಪತ್ರಿಕೆಗಳನ್ನು ಓದುಗರು ಕೊಂಡು ಓದುವಂತೆ ಪ್ರೇರೇಪಿಸುವುದು ಸವಾಲಿನ ಸಂಗತಿಯಾಗಿತ್ತು.
‘ನಮ್ಮ ನಾಡು’ ಜಿಲ್ಲಾ ಮಟ್ಟದ ಪತ್ರಿಕೆಯಾದರೂ ದೊಡ್ಡ ಪತ್ರಿಕೆಗಳಂತೆಯೇ ದಿನಕ್ಕೊಂದು ವೈಶಿಷ್ಟ್ಯತೆಯ ಅಂಕಣಕ್ಕೆ ಪ್ರತ್ಯೇಕ ಪುಟ ಮೀಸಲಿರಿಸಿದೆ. ಲೋಕಲ್ ಸುದ್ದಿ ಜೊತೆಗೆ ಲೋಕದ ಸುದ್ದಿಯನ್ನೂ ನೀಡುವ ಮೂಲಕ ವೈವಿಧ್ಯತೆ, ನಿಖರತೆ, ನಿಷ್ಠುರತೆ, ಪ್ರಾಮಾಣಿಕತೆಯನ್ನು ಕಾಯ್ದುಕೊಂಡು ಬಂದಿದೆ.
ವೆಬ್‌ಸೈಟ್‌ನಲ್ಲಿ ಹಾಗೂ ಬ್ಲಾಗ್‌ನಲ್ಲೂ, ವಾಟ್ಸ್‌ಆಫ್ ಮೂಲಕ ಪತ್ರಿಕೆ ಹೊರ ಹೊಮ್ಮುತ್ತಿದ್ದು, ದೇಶ- ವಿದೇಶಗಳಲ್ಲೂ ಓದುಗ ಬಳಗವನ್ನು ಹೊಂದಿರುವುದು ಹೆಮ್ಮೆಯ ಸಂಗತಿ.
ಅಲ್ಲದೇ ಜಿಲ್ಲಾವಾರು ಪ್ರಾಂತ್ಯಗಳಲ್ಲಿ ಗ್ರಾಮೀಣರಿಂದ ಹಿಡಿದು ನಗರ ಪ್ರದೇಶಗಳಲ್ಲಿ ವೈವಿಧ್ಯತೆಯ ಕಾರಣಕ್ಕಾಗಿ ಓದುಗರ ಅಚ್ಚುಮೆಚ್ಚಿನ ಪತ್ರಿಕೆಯಾಗಿ ಬೆಳೆಯುತ್ತಿದೆ.
ರಾಜಕೀಯ, ಸಾಂಸ್ಕೃತಿಕ, ಇತಿಹಾಸ, ಕೃಷಿ,ಕಲೆ, ಸಾಹಿತ್ಯ ಕ್ರೀಡೆ ಹೀಗೆ ಎಲ್ಲಾ ಕ್ಷೇತ್ರಗಳಿಗೂ ಸುದ್ದಿಯಲ್ಲಿ ಪ್ರಾಧಾನ್ಯತೆ ಕಲ್ಪಿಸಿರುವುದು ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ.
ಈಗಾಗಲೇ ಅಡಿಕೆ ಬೆಳೆಗೆ ಸಂಬಂಧಿಸಿದಂತೆ ‘ಅಡಕೆಯ ಮಾನ’ ಬೆಚ್ಚಿ ಬೀಳಿಸಿದ ಬೆಂಗಳೂರು ಅಮೇರಿಕ ಅಂತರಂಗ ಶಿವಮೊಗ್ಗ ನಗರದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸಂದರ್ಭ ಹಾಗೂ ೧೫ನೇ ವಾರ್ಷಿಕೋತ್ಸವ ಸಂದರ್ಭಗಳಲ್ಲಿ ವಿಶೇಷ ಸಂಚಿಕೆ ಸೇರಿದಂತೆ ಹತ್ತು-ಹಲವು ವಿಶೇಷ ಸಂಚಿಕೆಗಳನ್ನು ಹೊರ ತಂದು, ಸಾಮಾನ್ಯ ಓದುಗರಿಂದ ಹಿಡಿದು ಸಾಹಿತ್ಯ ದಿಗ್ಗಜರು, ವಿಶ್ಲೇಷಕರ ಪ್ರಶಂಸೆಗೆ ಪಾತ್ರವಾಗಿದೆ.
ಬಹುಮುಖ್ಯವಾಗಿ ಪತ್ರಿಕೆಯಲ್ಲಿ ಬರುವ ನಿತ್ಯದ ಸುದ್ದಿ, ರಾಜಕೀಯ ವಿಶ್ಲೇಷಣೆ, ಪ್ರಚಲಿತ ವಿದ್ಯಮಾನ, ಸಾಹಿತ್ಯ, ಕ್ರೀಡೆ ಸಾಂಸ್ಕೃತಿಕ ವರದಿ ಸೇರಿದಂತೆ ಸ್ಥಳೀಯ ಸಮಸ್ಯೆಗಳ ಕುರಿತು ಪ್ರತಿನಿತ್ಯ ಓದುಗರು ಉತ್ತಮ ಪ್ರತಿಕ್ರಿಯೆ ನೀಡುತ್ತಾ ಬಂದಿದ್ದಾರೆ.
ಓದುಗರ ಪ್ರತಿಕ್ರಿಯೆ, ಸಲಹೆ, ಸಹಕಾರದಿಂದಲೇ ಪತ್ರಿಕೆ ಇಷ್ಟು ಎತ್ತರಕ್ಕೆ
ಬೆಳೆಯಲು ಸಹಕಾರಿಯಾಗಿದೆ. ಅಲ್ಲದೇ, ರಾಜ್ಯದಲ್ಲೇ ಅತ್ಯುತ್ತಮ ಜಿಲ್ಲಾ ಪತ್ರಿಕೆಯೆಂದು
ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನವಾದುದು ಹೆಮ್ಮೆಯ ಸಂಗತಿ. ಇದಕ್ಕೆ
ಓದುಗರಾದ ನೀವುಗಳೇ ಕಾರಣ ಎಂಬುದನ್ನು ಮರೆಯುವುದಿಲ್ಲ.
ಯಾವುದೇ ರಾಗ, ದ್ವೇಷಗಳಿಲ್ಲದೆ, ಒತ್ತಡಗಳಿಗೆ ಮಣಿಯದೆ, ನಿರ್ಭಿಡೆ ಹಾಗೂ ಪ್ರಾಮಾಣಿಕತೆಯಿಂದ ತನ್ನತನ ಉಳಿಸಿಕೊಂಡು ಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವ ಹೆಗ್ಗಳಿಕೆ ನಮ್ಮದು.
ಈವರೆಗೆ ಎದುರಾದ ಮಾಧ್ಯಮ ಕ್ಷೇತ್ರದ ಎಲ್ಲ ತಲ್ಲಣ, ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿ, ಪತ್ರಿಕೆ ಬೆಳೆದು ಬಂದಿದೆ. ಇದಕ್ಕೆ ಮುಖ್ಯ ಕಾರಣ ನಿಮ್ಮ ಸಲಹೆ, ಸಹಕಾರ ಮತ್ತು ಆಶೀರ್ವಾದ. ಇದು ಹೀಗೆಯೇ ಮುಂದುವರಿಯಲಿ ಎಂದು ಆಶಿಸುತ್ತೇನೆ.
ಜಾಹೀರಾತುದಾರರು, ಚಂದಾದಾರರು ಹಾಗೂ ಏಜೆಂಟರ ಸಹಕಾರ ಸದಾ ಸ್ಮರಿಸುವೆ. ಪತ್ರಿಕೆ ಅಚ್ಚುಕಟ್ಟಾಗಿ ಮೂಡಿ ಬರಲು ಕಛೇರಿಯಲ್ಲಿ ದುಡಿಯುತ್ತಿರುವ ಎಲ್ಲಾ ಸಿಬ್ಬಂದಿ ವರ್ಗದವರ ಸಹಕಾರ, ಶ್ರಮ ಕಾರಣವಾಗಿದೆ.
ಯೋಗಿತಾ ಪ್ರಿಂಟರ‍್ಸ್‌ನ ಮುದ್ರಣಕಾರರು, ಸಿಬ್ಬಂದಿವರ್ಗಕ್ಕೆ ವಿಶೇಷ ಧನ್ಯವಾದಗಳು. ಮುಂಬರುವ ದಿನಗಳಲ್ಲೂ ನಿಮ್ಮಿಂದ ಸಹಕಾರ, ಸಲಹೆ, ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ…