ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ

 ನಾನು ನಿರಪರಾಧಿ, ಸ್ವಯಂಪ್ರೇರಿತನಾಗಿ ರಾಜೀನಾಮೆ ನೀಡುತ್ತಿದ್ದೇನೆ: ನಾಗೇಂದ್ರ ಸ್ಪಷ್ಟನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್‌  ಸರ್ಕಾರದ ಮೊದಲ ವಿಕೆಟ್‌ ಪತನವಾಗಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಧಿಸಿದಂತೆ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ನಾಗೇಂದ್ರ ಅವರು ಕೊನೆಗೂ  ರಾಜೀನಾಮೆ ನೀಡುವ ಮೂಲಕ , ತಲೆ ದಂಡ ಆಗಿದೆ.

ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಅಧೀಕ್ಷಕರಾಗಿದ್ದ ಶಿವಮೊಗ್ಗ ಮೂಲದ ಚಂದ್ರಶೇಖರನ್‌ ಅವರ ಆತ್ಮಹತ್ಯೆ ಪ್ರಕರಣದ ಮೂಲಕ ಬೆಳಕಿಗೆ ಬಂದ ವಾಲ್ಮೀಕಿ ನಿಗದಮ ಹಗರಣ ವಿಪಕ್ಷಗಳಿಗೆ ಅಸ್ತ್ರವಾಗಿತ್ತಲ್ಲದೆ, ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟ ಹಿಡಿಸಿದ್ದವು. ಅಷ್ಟು ಮಾತ್ರವಲ್ಲದೆ ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ವಾರದ ಗುಡುವು ನೀಡಿತ್ತು. ಈ ನಡುವೆಯೇ ನಾಳೆ( ಜೂ.೭ ) ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿತ್ತು.

ಈ ನಡುವೆಯೇ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾಗಿರುವ ನಾಗೇಂದ್ರ ಅವರಿಗೆ ತನಿಖೆ ಮುಗಿಯುವರೆಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸರ್ಕಾರ ಸೂಚಿಸಿತ್ತಲ್ಲದೆ,  ಈ ಸಂಬಂಧ ಹೈಕಮಾಂಡ್ ಜೊತೆ ಸಿಎಂ, ಡಿಸಿಎಂ ಮಾತುಕತೆ ನಡೆಸಿದ ಬಳಿಕ ನಾಗೇಂದ್ರ  ಅವರು ಗುರುವಾರ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.ಈಗಾಗಲೇ ಪ್ರಕರಣ ಸಂಬಂಧ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. ಈ ಪ್ರಕರಣದ ತನಿಖೆ ಸಿಬಿಐಗೆ ಹೋದಲ್ಲಿ ಸಚಿವ ಸ್ಥಾನದಲ್ಲಿ ಮುಂದುವರೆಯುವುದು ಕಷ್ಟ. ಬಳಿಕ ರಾಜೀನಾಮೆ ನೀಡಿದರೆ ಸರ್ಕಾರ, ಪಕ್ಷಕ್ಕೆ ಮುಜುಗರವಾಗಲಿದೆ. ಅದರ ಬದಲು ಈಗಲೇ ರಾಜೀನಾಮೆ ಕೊಡುವಂತೆ ಸೂಚನೆ ನೀಡಲಾಗಿತ್ತು.

 ಅಲ್ಲದೆ, ಬುಧವಾರವೇ ಸಚಿವ ನಾಗೇಂದ್ರ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿದರೆ ಬೇರೆ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ರಾಜೀನಾಮೆ ನೀಡುವುದು ಸೂಕ್ತ ಎಂದು ಸಲಹೆ ನೀಡಿದ್ದರೆನ್ನಲಾಗಿದೆ. ಇದೇ ಕಾರಣಕ್ಕೆ ಗುರುವಾರ  ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದರು.

ಸಚಿವ ನಾಗೇಂದ್ರ ತಾವು ರಾಜೀನಾಮೆ ನೀಡುವ ಮುನ್ನ ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದರಲ್ಲದೆ,  ನಾನು ನಿರಪರಾಧಿಯಾಗಿದ್ದು, ಯಾವುದೇ ಒತ್ತಡಗಳಿಗೆ ಒಳಗಾಗದೇ ಸ್ವಯಂ ಪ್ರೇರಿತನಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.

ಕಳೆದ 10 ದಿನದಿಂದ ಮಾಧ್ಯಮಗಳಲ್ಲಿ ವರದಿ ಬರುತ್ತಿತ್ತು. ಜನರು ಆತಂಕಗೊಂಡಿದ್ದರು. ವಿಪಕ್ಷಗಳು 10 ದಿನದಿಂದ ಆರೋಪಿಸುತ್ತಿದ್ದರು. ನಾನು ನನ್ನ ಸ್ವ-ನಿರ್ಧಾರದಿಂದ ರಾಜೀನಾಮೆ ಕೊಡುತ್ತಿದ್ದೇನೆ. ಸ್ವ-ಇಚ್ಚೆಯಿಂದ ರಾಜೀನಾಮೆ ಕೊಡುತ್ತಿದ್ದೇನೆ. ರಾಜೀನಾಮೆ ಪತ್ರವನ್ನ ಸಿಎಂಗೆ ಕೊಟ್ಟು ಬರುತ್ತೇನೆ. ಸಿಎಂ, ಡಿಸಿಎಂ ಇಬ್ಬರಿಗೂ ಕೊಡುತ್ತೇನೆ. ಯಾರಿಗೂ ಮುಜುಗರ ಆಗಬಾರದೆಂದು ರಾಜೀನಾಮೆ ನೀಡುತ್ತಿದ್ದೇನೆ. ಪ್ರಕರಣದಲ್ಲಿ ಎಲ್ಲಿಯೂ ಕೂಡ ನನ್ನ ಹೆಸರು ಪ್ರಸ್ತಾಪ ಆಗಿಲ್ಲ. ನನ್ನ ಆತ್ಮಸಾಕ್ಷಿಯಾಗಿ ನಾನು ರಾಜೀನಾಮೆ ಕೊಡುತ್ತಿದ್ದೇವೆ ಎಂದು ಹೇಳಿದರು.

………………………
ಇಡೀ ಪ್ರಕರಣ ಯಾವುದು ನನ್ನ ಗಮನಕ್ಕೆ ಬಂದಿಲ್ಲ. ತನಿಖೆ ನಿಷ್ಪಕ್ಷಪಾತವಾಗಿ ಆಗಲಿದೆ ಎಷ್ಟೇ ಪ್ರಭಾವಿಗಳು ಇದ್ದರೂ ಶಿಕ್ಷೆ ಆಗಲಿದೆ. ನಾನು ಮಂತ್ರಿ ಸ್ಥಾನದಲ್ಲಿ ಇದ್ದರೆ ತೊಂದರೆ ಆಗಬಾರದು ಅಂತಾ ರಾಜೀನಾಮೆ ಕೊಡುತ್ತಿದ್ದೇನೆ. ಆರೋಪ ನಿರಾಧಾರವಾಗಿ ನಾನು ನಿrರ್ದೋಶಿ ಎಂದು ಸಾಬೀತಾದ ಬಳಿಕ ಮುಖ್ಯಮಂತ್ರಿಗಳು ಅವಕಾಶ ಮಾಡಿ ಕೊಡುತ್ತಾರೆನ್ನುವ ವಿಶ್ವಾಸವಿದೆ.

-ನಾಗೇಂದ್ರ,  ಶಾಸಕ

………………………………..

ಏನೇ ಆಗಲಿ ನಮಗೆ ನ್ಯಾಯ ಸಿಗಬೇಕು: ಚಂದ್ರಶೇಖರನ್‌ ಪತ್ನಿ  ಕವಿತಾ ಪ್ರತಿಕ್ರಿಯೆ

ಶಿವಮೊಗ್ಗ :  ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ  ಸಚಿವರು ರಾಜೀನಾಮೆ ನೀಡಿದ್ದಾರೆನ್ನುವ ಸುದ್ದಿಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ.  ಅದು ಸರಿಯೋ ತಪ್ಪೋ ನಾನು ಆ ಬಗ್ಗೆ ಹೇಳಲಾರೆ, ಆದರೆ ನಮ್ಮ ಮನೆಯವರ ಸಾವಿಗೆ ನ್ಯಾಯ ಸಿಗಬೇಕು, ತನಿಖೆ ಒಳ್ಳೆ ರೀತಿಯಲ್ಲಿ ಆಗಬೇಕೆನ್ನುವುದೇ ನಮ್ಮ ಬೇಡಿಕೆ ಎಂದು ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಪತ್ನಿ ಕವಿತಾ ಅವರು ಪ್ರತಿಕ್ರಿಯಿಸಿದ್ದಾರೆ.
 
ಪರಿಶಿಷ್ಟ ಕಲ್ಯಾಣ ಇಲಾಖೆ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಭೇಟಿ ಮಾಡಿದ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿರುವ ಕವಿತಾ ಅವರು,  ಏನೇ ಆಗಲಿ ನಮಗೆ ನ್ಯಾಯ ಸಿಗಬೇಕು. ತನಿಖೆ ಒಳ್ಳೆ ರೀತಿಯಲ್ಲಿ ಆಗಬೇಕು. ಎಂದು ಆಗ್ರಹಿಸಿದರು. ಈ ಬೆಳವಣಿಗಳನ್ನು ನೋಡಿದರೆ ತನಿಖೆ ಒಳ್ಳೆ ರೀತಿಯ ರೀತಿಯಲ್ಲಿ ಹೋಗುತ್ತದೆ ಅನಿಸುತ್ತಿದೆ.‌ ಇನ್ನೂ ಹೆಚ್ಚಿನ ತನಿಖೆಗಾಗಿ ಗ ಯಾರೇ ಇದ್ದರೂ ಅವರಿಗೆ ಶಿಕ್ಷೆ ಆಗಲೇಬೇಕು ಎಂದು  ಆಗ್ರಹಿಸಿದರು.

ನಮ್ಮನೆಯವರ ಸಾವಿಗೆ ನ್ಯಾಯ ಸಿಗಲೇಬೇಕು ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇನೆ ಎಂದ ಅವರು, ಈ ಬೆಳವಣಿಗೆಯಿಂದ ಒಂದು ರೀತಿಯಲ್ಲಿ ಖುಷಿಯಾದರೂ ನಮಗೆ ನಮ್ಮ ಮನೆಯ ಸಾವಿನ ನೋವು ಇನ್ನೂ ಇದೆ .ಅವರು ತುಂಬಾ ದಿನಗಳಿಂದ ನೋವನ್ನು ತಿಂದಿದ್ದಾರೆ.  ಅವರು ಹೊರಗಡೆ ಹೇಳಿಕೊಂಡಿರಲಿಲ್ಲ.ನಮಗೆ ಜೀವನಕ್ಕೆ ಯಾವುದೇ ರೀತಿ ಆಧಾರವಿಲ್ಲದೆ ಕುಳಿತುಕೊಂಡಿದ್ದೇವೆ. ಸರ್ಕಾರಾನೂ ಕೂಡ ಯಾವುದೇ ರೀತಿಯ ಪರಿಹಾರದ ಬಗ್ಗೆ ನನ್ನ ಬಳಿ ಮಾತನಾಡಿಲ್ಲ ಎಂಬ ಗಂಭೀರ ಆರೋಪ ಮಾಡಿದರು.

ನನಗೆ ಮುಂದಿನ ಜೀವನದ ಬಗ್ಗೆ ಪ್ರಶ್ನೆಯಾಗಿ ಉಳಿದಿದೆ. ಇನ್ನು ಕೂಡ ಸತ್ಯ ಪೂರ್ತಿಯಾಗಿ ಹೊರಗೆ ಬಂದಿಲ್ಲ. ಇನ್ನಷ್ಟು ತನಿಖೆ ನಡೆದು ಸತ್ಯ ಹೊರಗಡೆ ಬರಬೇಕು ಎನ್ನುವುದನ್ನು ನಾವು ಕಾಯುತ್ತಿದ್ದೇವೆ. ಅವರು ಅಧಿಕಾರಿಯಾಗಿ ಇತರ ಆತ್ಮಹತ್ಯೆ ಮಾಡಿಕೊಂಡಿರುವುದು ನನಗೆ ತುಂಬಾ ನೋವಿದೆ ಎಂದು ಹೇಳಿಕೊಂಡರು.