ಶಿವಮೊಗ್ಗ: ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಜೆಡಿಎಸ್‌ನ ನಾಗರಾಜ್ ಕಂಕಾರಿ ಹಾಗೂ ಉಪ ಮೇಯರ್ ಆಗಿ ಕಾಂಗ್ರೆಸ್‌ನ ವಿಜಯಲಕ್ಷ್ಮಿ ಸಿ. ಪಾಟೀಲ್ ಆಯ್ಕೆಯಾಗಿದ್ದಾರೆ.
ಪಾಲಿಕೆಯಲ್ಲಿ ಈ ಬಾರಿ ಜೆಡಿಎಸ್- ಕಾಂಗ್ರೆಸ್ ಪಕ್ಷಗಳ ನಡುವೆ ಮೈತ್ರಿ ಏರ್ಪಟ್ಟ ಹಿನ್ನೆಲೆಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಮೇಯರ್ ಸ್ಥಾನ ಪಡೆಯುವ ಬಿಜೆಪಿಯ ಪ್ರಯತ್ನಕ್ಕೆ ಸೋಲಾಯಿತು.
ಮತ್ತೊಂದೆಡೆ ಕಾಂಗ್ರೆಸ್‌ನಲ್ಲೇ ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದ ೧೪ನೇ ವಾರ್ಡ್ ನ ಪಾಲಿಕೆ ಸದಸ್ಯ ಎಸ್. ರಾಜಶೇಖರ್ ಪಕ್ಷದ ತೀರ್ಮಾನದ ವಿರುದ್ಧ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿ ಸ್ಪರ್ಧಿಸಿ ಸೋತರೂ ಎಲ್ಲರ ಗಮನ ಸೆಳೆದರು.
ಇಂದಿನ ಚುನಾವಣೆಯಲ್ಲಿ ೩೫ ಪಾಲಿಕೆ ಸದಸ್ಯರು, ವಿಧಾನಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್, ಎಂ.ಬಿ. ಭಾನು ಪ್ರಕಾಶ್, ಶಾಸಕಿ ಶಾರದಾ ಪೂರ‍್ಯಾನಾಯ್ಕ, ಕೆ. ಬಿ. ಪ್ರಸನ್ನಕುಮಾರ್ ( ಶಾಸಕ – ಪಾಲಿಕೆ ಸದಸ್ಯ ಎರಡೂ) ಪಾಲ್ಗೊಂಡಿದ್ದು, ಒಟ್ಟು ೩೮ ಸದಸ್ಯರು ಉಪಸ್ಥಿತರಿದ್ದರು.
ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ನಾಗರಾಜ್ ಕಂಕಾರಿ ಪರ ೨೫, ವಿರುದ್ಧ ೧೩ ಮತಗಳು. ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಎಸ್. ರಾಜಶೇಖರ್ ಪರ ೧ ಮತ್ತು ವಿರುದ್ಧವಾಗಿ ಯಾವುದೇ ಮತ ಬರಲಿಲ್ಲ.
ಬಿಜೆಪಿ ಅಭ್ಯರ್ಥಿಯಾಗಿದ್ದ ಸುನೀತಾ ಅಣ್ಣಪ್ಪ ಪರವಾಗಿ ೧೨, ವಿರುದ್ದವಾಗಿ ೨೫ ಮತಗಳು ಬಂದವು.
ಅತಿ ಹೆಚ್ಚು ಮತ ಪಡೆದ ಜೆಡಿಎಸ್‌ನ ನಾಗರಾಜ್ ಕಂಕಾರಿ ಅವರನ್ನು ವಿಜೇತರಾಗಿದ್ದಾರೆಂದು ಘೋಷಿಸಲಾಯಿತು.
ಉಪಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ವಿಜಯಲಕ್ಷ್ಮಿ ಪಾಟೀಲ್ ಪರ ೨೬, ವಿರುದ್ಧ ೧೨ ಮತಗಳು. ಬಿಜೆಪಿ ಅಭ್ಯರ್ಥಿ ರೇಣುಕಾ ನಾಗರಾಜ್ ಪರ ೧೨, ವಿರುದ್ಧ ೨೩ ಮತಗಳು ಬಂದವು.
ಕೈ ಎತ್ತುವ ಮೂಲಕ ಪಾಲಿಕೆ ಸದಸ್ಯರು ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿದರು.
ನೂತನ ಮೇಯರ್ ಮತ್ತು ಉಪಮೇಯರ್ ಅಧಿಕಾರವಧಿ ಇಂದಿನಿಂದ ೨೦೧೮ರ ಸೆ. ೧೧ರವರೆಗೆ ಇರಲಿದೆ.
ಪೌರಾಡಳಿತ ಇಲಾಖೆಯ ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಿಲ್ಲಾಧಿಕಾರಿ ಡಾ. ಲೋಕೇಶ್, ಪಾಲಿಕೆ ಆಯುಕ್ತ ಮುಲೈ ಮುಹಿಲಾನ್ ಉಪಸ್ಥಿತರಿದ್ದರು.
ಮೇಯರ್ ಆಗಿ ನಾಗರಾಜ್ ಕಂಕಾರಿ- ಉಪಮೇಯರ್ ಆಗಿ ವಿಜಯಲಕ್ಷ್ಮೀ ಸಿ. ಪಾಟೀಲ್
RELATED ARTICLES