ಹರಿಹರ: ಪ್ರವಾದಿ ಮೊಹಮ್ಮದ್ ಪೈಗಂಬರ್‌ರವರ ಮೊಮ್ಮಗ ಹುಸೇನ್ ಇಬ್ನ್ ಅಲಿ ಅವರು ಹುತಾತ್ಮರಾದ ಸ್ಮರಣೆಯಲ್ಲಿ ಮುಹರಮ್ ಮಾಸದ 10ನೇ ದಿನವಾದ ಬುಧವಾರದಂದು ಹರಿಹರದಲ್ಲಿ ಮುಸ್ಲಿಂ ಸಮುದಾಯದ ಶಿಯಾ ಪಂಗಡದವರು ಶೋಕದ ಮೆರವಣಿಗೆ ನಡೆಸಿದರು.
ಎದೆಗೆ ಬಡಿದುಕೊಳ್ಳುತ್ತಾ ಧಾರ್ಮಿಕ ಶ್ಲೋಕಗಳನ್ನು ಹೇಳುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಯುವಕರು ಸಾಗಿದರು.
ಮೊಹರಂ ಹಬ್ಬ ಆಚರಣೆ ವಿಶೇಷತೆ ಏನು ? ;
ಕ್ರಿ. ಶ 680ರಲ್ಲಿ ಇರಾಕಿನ ಕರ್ಬಲಾ ಮರುಭೂಮಿಯಲ್ಲಿ ಅರಬ್ ದೊರೆ ಯಜೀದ್ ವಿರುದ್ಧ 10 ದಿನಗಳ ಕಾಲ ಯುದ್ಧದಲ್ಲಿ ಇಮಾಮ್ ಹುಸೇನ್ ಹೋರಾಡಿ ಹುತಾತ್ಮರಾಗುತ್ತಾರೆ. ಇಮಾಮ್ ಹುಸೇನರನ್ನು ಮೋಸದಿಂದ ಕೊಲ್ಲಲಾಗುತ್ತೆ. ಹೀಗಾಗಿ ಮೊಹರಂ ಮಾಸದಲ್ಲಿ ಯಾವುದೇ ಪ್ರಮುಖ ಸಂಭ್ರಮಾಚರಣೆ ಕೈಗೊಳ್ಳುವುದಿಲ್ಲ.
ಮೊಹರಂ ಹಬ್ಬದಲ್ಲಿ ನಡೆಯುವ ಮೆರವಣಿಗೆಯಲ್ಲಿ ಕರ್ಬಲಾದ ಯುದ್ಧವನ್ನು ನಾಟಕ ರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ಶಿಯಾ ಪಂಗಡದ ಮುಸ್ಲಿಮರು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ‘ಯಾ ಅಲಿ’ ಮತ್ತು ‘ಯಾ ಹುಸೇನ್’ ಎಂದು ಜಪಿಸುತ್ತ ತಮ್ಮ ದೇಹವನ್ನು ದಂಡಿಸುತ್ತಾರೆ.
ಈ ಆಚರಣೆಯು ಅಂದಿನಿಂದಲೂ ಶಿಯಾ ಪಂಗಡದ ಮುಸ್ಲಿಮರಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿದೆ.