ಶಿವಮೊಗ್ಗ: ಮೈಸೂರಿನ ಮೂಡಾದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ನಿವೇಶನಗಳನ್ನು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್ ಆರೋಪಿಸಿದರು.
ಗುರುವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರ ನಂತರ ನಿವೇಶನಗಳಿಗಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನುಗಳಿಗೆ ಮಾತ್ರ ಅದೇ ಬಡಾವಣೆಯಲ್ಲಿ 50-50 ಅನುಪಾತದಲ್ಲಿ ನಿವೇಶನವನ್ನು ನೀಡಬೇಕು ಎಂಬ ನಿಯಮವಿದೆ. ಈ ಪ್ರಕರಣದಲ್ಲಿ 2009ರ ಪೂರ್ವದಲ್ಲಿಯೇ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಹಾಗಾಗಿ ಇದು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದರು.
ಭೂಸ್ವಾಧೀನ ಮಾಡಿಕೊಂಡ ಬಡಾವಣೆಯಲ್ಲಿಯೇ ನಿವೇಶನಗಳು ಇಲ್ಲದಿದ್ದಲ್ಲಿ ಬೇರೆ ಕಡೆ ನಿವೇಶನಕ್ಕೆ ಅವಕಾಶವಿದೆ. ಈ ಪ್ರಕರಣದಲ್ಲೂ ಅಂದರೆ ವಿಜಯನಗರದ 3 ಮತ್ತು 4ನೇ ಹಂತದ ಬಡಾವಣೆಗಳಲ್ಲಿ 14 ನಿವೇಶನಗಳನ್ನು ಪಾರ್ವತಿಯವರಿಗೆ 2020ರಲ್ಲಿ ಅಂದಿನ ಮೂಡಾ ಅಧ್ಯಕ್ಷರು ನೀಡಿರುತ್ತಾರೆ ಎಂದು ಹೇಳಿದರು.
ಒಂದು ಬಡಾವಣೆಯಲ್ಲಿ 100 ನಿವೇಶನಗಳು ಇದ್ದರೆ 75 ನಿವೇಶನಗಳನ್ನು ಹರಾಜು ಪ್ರಕ್ರಿಯೆಯ ಮೂಲಕ ನೀಡಬೇಕೆಂಬ ನಿಯಮವಿದೆ. ಇನ್ನುಳಿದ 25% ನಿವೇಶನಗಳನ್ನು ವಿಶೇಷ ಸಾಧಕರಿಗೆ ನೀಡಲು ಅವಕಾಶವಿದೆ. ಇಲ್ಲಿ ಪಾರ್ವತಿಯವರು ಯಾವ ವಿಶೇಷ ಸಾಧಕರ ಸ್ಥಾನದಲ್ಲಿ ಬರುತ್ತಾರೆ ಎಂದು ಅವರು ಪ್ರಶ್ನಿಸಿದರು.
ಮೂಡಾಕ್ಕೆ ಅಕ್ರಮವಾಗಿ ಹೊಂದಿಕೊಂಡಿರುವ ಲೇಔಟ್ ಗೆ ಅಕ್ರಮ ರಸ್ತೆ ಸಂಪರ್ಕವಿದೆ. ಸುಮಾರು 3ರಿಂದ 4 ಸಾವಿರ ಕೋಟಿ ರೂ. ಮೌಲ್ಯದ ಜಾಗವನ್ನು ಈ ಲೇಔಟ್ ನಲ್ಲಿ ಪಾರ್ಕ್ ಅಭಿವೃದ್ಧಿಗೆ ನೀಡಲಾಗಿದೆ. ಇದಕ್ಕೆ ಸಿದ್ದರಾಮಯ್ಯನವರ ಪ್ರಭಾವವೇ ಕಾರಣ ಎಂದರು.
ಸಿದ್ದರಾಮಯ್ಯನವರು ಈ ಹಗರಣದ ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಿಬಿಐ ತನಿಖೆಗೆ ನೀಡಬೇಕೆಂದು ಆಗ್ರಹಿಸಿದ ಅವರು, 2020ರಲ್ಲಿದ್ದ ಬಿಜೆಪಿ ಸರ್ಕಾರದ ಗಮನಕ್ಕೆ ಬಾರದೆ ಈ ಅವ್ಯವಹಾರ ನಡೆದಿದೆ ಎಂದು ಸ್ಪಷ್ಟಪಡಿಸಿದರು.