ಶಿವಮೊಗ್ಗ : ಸಂಸದ ಬಿ.ವೈ. ರಾಘವೇಂದ್ರ ಅವರು ಶುಕ್ರವಾರ ಹುಟ್ಟು ಹಬ್ಬ ಆಚರಿಸಿಕೊಂಡರು. ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಬಿವೈಆರ್ ಅಭಿಮಾನಿ ಬಳಗವು ಸಂಸದರ ಹುಟ್ಟು ಹಬ್ಬಕ್ಕೆ ಶುಭ ಕೋರಿ ಶಿವಮೊಗ್ಗದ ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಭಗವಂತನು ಸಂಸದ ಬಿ.ವೈ. ಆರ್ ಅವರಿಗೆ ಹೆಚ್ಚಿನ ಆಯಸ್ಸು ಆರೋಗ್ಯ ದೊರಕಿಸಿ ಜನಸೇವೆ ಮಾಡಲು ಶಕ್ತಿ ನೀಡುವಂತೆ ಪ್ರಾರ್ಥಿಸಿದರು.
ಶಿವಮೊಗ್ಗ ನಗರದ ಶಾರದಾ ಅಂಧರ ವಿಕಾಸ ಶಾಲೆ, ತರಂಗ ಸೇರಿದಂತೆ ಇನ್ನು ಅನೇಕ ದೈಹಿಕ ಅಂಗವಿಕಲ ಚೇತನ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿರುವ ಮಕ್ಕಳೊಂದಿಗೆ ಕೆಲ ಸಮಯ ಬೆರೆತು ಸಿಹಿ ವಿತರಿಸಿ ವೈಯುಕ್ತಿಕ ದೇಣಿಗೆ ನೀಡಿದರು. ಆನಂತರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಮಧ್ಯಾಹ್ನದ ಉಪಾಹಾರ ವಿತರಿಸಿ ತಮ್ಮ ಪ್ರೀತಿಪೂರ್ವಕ ಅಭಿಮಾನ ವ್ಯಕ್ತಪಡಿಸಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಪ್ರಾಚಾರ್ಯರು ಹಾಗೂ ಸಿಬ್ಬಂಧಿ ವರ್ಗದವರು ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿನ ತಾಯಿ ಮತ್ತು ಮಗುವಿಗೆ ಹಣ್ಣು ಬ್ರೆಡ್ ಮತ್ತು ಮಗುವಿಗೆ ಹಾಸಿಗೆಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ವಿವಿದ ವಿಭಾಗದ ಮುಖ್ಯಸ್ಥರುಗಳಾದ ಡಾ. ಶಿವಕುಮಾರ್, ಕುಬೇರಪ್ಪ ಕೆ. ಡಾ. ವೀರೇಂದ್ರ, ರವೀಂದ್ರ, ಸಿದ್ದೇಶ್, ವಿಶ್ವನಾಥ ಹಾಗೂ ಮಕ್ಕಳ ತಜ್ಞ ಡಾ. ವಿನಯ್‌ಕುಮಾರ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥತರಿದ್ದರು.
ಅದೇ ರೀತಿ ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಅವರು ವಂಡ್ಸೆ ಎಸ್ ಎಲ್ ಆರ್ ಎಂ ಘಟಕದ ಕಾರ್ಮಿಕ ಬಂಧುಗಳೊಂದಿಗೆ ಸಂಸದ ಬಿ.ವೈ. ರಾಘವೇಂದ್ರ ಅವರ ಹುಟ್ಟು ಹಬ್ಬ ಆಚರಿಸುವ ಮೂಲಕ ಅವರಿಗೆ ಶುಭ ಕೋರಿದರು.
ಅಭಿಮಾನಿಗಳು ಹಾಗೂ ಹಿತೈಷಿಗಳ ಶುಭ ಕೋರಿಕೆಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ನೀವು ತೋರಿಸಿದ ಬೆಲೆ ಕಟ್ಟಲಾಗದ ನಿಸ್ವಾರ್ಥ ಪ್ರೀತಿ ಮತ್ತು ಆಶೀರ್ವಾದ ನನ್ನನ್ನು ಮತ್ತಷ್ಟು ಮಾನಸಿಕವಾಗಿ ಬಲಶಾಲಿಯನ್ನಾಗಿಸಿದೆ. ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ನೀಡುವ ಹೊಸ ಚೈತನ್ಯ ದೊರಕಿದೆ. ಈ ಮೂಲಕ ನಿಮ್ಮ ಅಶೋತ್ತರಗಳಿಗೆ ಸದಾ ಜೊತೆಯಾಗಿ ನಿಲ್ಲುವ ವಾಗ್ದಾನ ಮಾಡುತ್ತೇನೆ ಎಂದು ತಿಳಿಸಿದ್ದಾರೆ.