Wednesday, November 13, 2024
Google search engine
Homeಅಂಕಣಗಳುಲೇಖನಗಳು'ಅಮ್ಮ... ಪ್ಲೀಸ್ ಅರ್ಥಮಾಡ್ಕೊ'

‘ಅಮ್ಮ… ಪ್ಲೀಸ್ ಅರ್ಥಮಾಡ್ಕೊ’

ಲೇಖನ : ಸೌಮ್ಯ ಗಿರೀಶ್

‘ಅಮ್ಮ… ಪ್ಲೀಸ್ ಅರ್ಥಮಾಡ್ಕೊ’

PC: Internet

“ಅದ್ಯಾಕೋ ಗೊತ್ತಿಲ್ಲ ಇತ್ತೀಚೆಗೆ ನಾನು ಮಾಡಿ ದ್ದೆಲ್ಲಾ ತಪ್ಪು ಅಂತೀಯಾ, ನಾ ಕೂತರೂ ತಪ್ಪು, ನಿಂತರೂ ತಪ್ಪು, ಯಾಕಮ್ಮ ಹೀಗ್ ಮಾಡ್ತೀಯಾ, ಅಮ್ಮ, ಪ್ಲೀಸ್ ಅರ್ಥಮಾಡ್ಕೊ” ಇದು ಹೆಚ್ಚಿನ ಟೀನೇಜ್ ಹುಡುಗಿಯರ ಬಾಯಲ್ಲಿ ಬರೋ ಪ್ರತಿನಿತ್ಯದ ಮಾತು. ಹಾಗಾದ್ರೆ ಅಮ್ಮಂದಿರು ಅರ್ಥ ಮಾಡಿಕೊಳ್ಳೋ ದರಲ್ಲಿ ಎಡವಿದ್ದಾರಾ ಅಥವಾ ಹೆಣ್ಣು ಮಕ್ಕಳ ದೃಷ್ಟಿಕೋನ ಬದಲಾಗಿ ದೆಯಾ, ಯಾಕೆ ಇಂಥದ್ದೊಂದು ಪ್ರಶ್ನೆ ನಿತ್ಯ ಮೂಡುತ್ತಿದೆ.

ಹರೆಯದ ವಯಸ್ಸೇ ಹಾಗೆ. ಅಷ್ಟಿಲ್ಲದೆ ಅದನ್ನು ಹುಚ್ಚು ಕೋಡಿಗೆ ಹೋಲಿಸು ತ್ತಾರೆಯೇ. ಚಿತ್ತ ಎತ್ತ ಸಾಗುವುದು ಎನ್ನುವುದು ಸ್ವತಃ ಮಕ್ಕಳಿಗೇ ತಿಳಿದಿರುವುದಿಲ್ಲ. ವಯೋ ಸಹಜ ಬದಲಾವಣೆ ಗಳು ಇತ್ತೀಚಿನ ದಿನಗಳಲ್ಲಿ ಬಹು ಬೇಗನೆ ಆಗುತ್ತಿದೆ. ಹೀಗಾಗಿ ಅರಿಯದ ವಯಸ್ಸಿಗೆ ಮಕ್ಕಳ ದೇಹದಲ್ಲಾಗುವ ಬದಲಾವಣೆಗಳು, ಹಾರ್ಮೋನ್‌ಗಳ ಏರಿಳಿತಗಳಿಂದಾಗಿ ಅವರ ಭಾವನೆಗಳಲ್ಲಿ ಮತ್ತು ನಡವಳಿಕೆಗಳಲ್ಲಿ ವ್ಯತ್ಯಾಸಗಳು ಕಂಡು ಬರುವುದು ಸಹಜ. ಅದು ಪ್ರಾಕೃತಿಕ ಆದರೆ ಅದನ್ನು ಎಷ್ಟೋ ಬಾರಿ ಅಮ್ಮಂದಿರು ಅರ್ಥೈಸಿ ಕೊಳ್ಳುವುದರಲ್ಲಿ ಎಡವುತ್ತಾರೆ ಎನ್ನುವುದೂ ಸತ್ಯ.

ಹಾಗಾದರೆ ಏನು ಮಾಡಬೇಕು ಅನ್ನೋ ಪ್ರಶ್ನೆ ಮೂಡುವುದು ಸಹಜ, ಕೆಲವು ಸರಳ ಸೂತ್ರಗಳನ್ನು ಅನುಸರಿಸಿ.
ಕೋಪಕ್ಕೆ ಕೋಪ ಉತ್ತರವಲ್ಲ

ಅವರಲ್ಲಾಗುವ ಹಾರ್ಮೋನ್‌ಗಳ ವ್ಯತ್ಯಾಸ ದಿಂದ ಸಣ್ಣ ಪುಟ್ಟ ಕಿರಿಕಿರಿ ಮೂಡುವುದು ಸಹಜ. ಅವರು ಕೋಪದಿಂದ ಒಂದು ಮಾತು ಹೇಳಿದಾಗ, ಅಮ್ಮ ಕೂಡ ಕೋಪದಿಂದ ಮಾತನಾಡಿದಾಗ ಅಮ್ಮನನ್ನುವೈರಿಯಂತೆ ಕಾಣಲು ಪ್ರಾರಂಭಿಸುತ್ತಾರೆ. ಅಮ್ಮ ಇರುವುದೇ ನನ್ನಲ್ಲಿನ ತಪ್ಪು ಹುಡುಕಲು ಎನ್ನುವ ಭಾವ ಚಿಗುರೊಡೆದು ಹೆಮ್ಮರವಾಗುವ ಸ್ಥಿತಿಯೂ ಬರಬಹುದು. ಹಾಗಾಗಿ ಇಂತಹ ಸಂದರ್ಭದಲ್ಲಿ ಅವರ ಕೋಪ ವನ್ನು ತಿಳಿ ಹಾಸ್ಯದಿಂದ ದೂರ ಮಾಡಿ. ಇಲ್ಲವೇ ಅವರ ಕೋಪದ ಮಾತುಗಳಿಂದ ನಿಮ್ಮ ಮನಸ್ಸಿಗೆ ಬೇಸರವಾಯಿತು ಎನ್ನುವುದನ್ನು ಅರ್ಥಮಾಡಿಸಿ. ಕೋಪವನ್ನು ಆಪ್ತತೆಯಿಂದ ಪರಿಹರಿಸಿ.

ಹಾವಭಾವಗಳ ಮೇಲೆ ತೀವ್ರ ನಿಗ ಬೇಡ
ಮಕ್ಕಳ ಚಲನವಲನಗಳ ಮೇಲೆ ಗಮನವಿರಿ ಸಬೇಕಾದ್ದು ಪೋಷಕರ ಕೆಲಸ ಮಾತ್ರವಲ್ಲ ಜವಾ ಬ್ದಾರಿ ಕೂಡ. ಆದರೆ ನೀವು ಅವರ ಪಾಲಿಗೆ ಗೂಢಾಚಾರಿಗಳಂತೆ ಕಾಣದಂತೆ ಎಚ್ಚರವಹಿಸಿ. ಎಲ್ಲವನ್ನೂ ಅನುಮಾನಿಸುತ್ತಿದ್ದೀರಾ ಎಂಬ ಭಾವನೆ ಅವರನ್ನು ಕದ್ದು ಮುಚ್ಚಿ ತಪ್ಪು ಮಾಡುವತ್ತ ಕರೆದೊಯ್ಯುತ್ತದೆ. ನಿಮ್ಮ ಕಣ್ಣೆದುರಿಗೆ ಮಾಡಿದರೆ ಪ್ರಶ್ನಿಸುತ್ತೀರಿ ಎಂದು ಕಾಣದಂತೆ ಮಾಡಲು ಪ್ರಾರಂಭಿಸುತ್ತಾರೆ. ನಡವಳಿಕೆಯಲ್ಲಿ ತಪ್ಪುಕಂಡು ಬಂದರೆ, ಜೊತೆಯಲ್ಲಿ ಕೂತು ಚರ್ಚಿಸಿ. ಇಂತಹ ನಡವಳಿಕೆಯಿಂದ ಕಷ್ಟ ಅನುಭವಿಸಿರುವವರ ಉದಾಹರಣೆ ನೀಡಿ ನಿಮ್ಮ ಅನಿಸಿಕೆಯನ್ನು ಅರ್ಥ ಮಾಡಿಸಿ ಅವರ ತಪ್ಪನ್ನು ಅವರೇ ತಿದ್ದಿಕೊಳ್ಳುವಂತೆ ಮಾಡಿ.

ಆಕರ್ಷಣೆಗಳು ಸಹಜ
ವಯೋಸಹಜ ಗುಣವೆಂದರೆ ಗಂಡು ಹೆಣ್ಣು ಪರಸ್ಪರ ಸೆಳೆತಕ್ಕೆ ಒಳಗಾಗುವುದು. ಇದಕ್ಕೆ ನಿಮ್ಮ ಮಗಳೂ ಹೊರತಲ್ಲ ಎನ್ನುವುದು ನೆನಪಿರಲಿ. ಹಾಗೆಂದು ಅವಳು ಮಾತನಾಡಿಸುವ ಎಲ್ಲಾ ಗಂಡು ಮಕ್ಕಳನ್ನು ಅನುಮಾನದ ದೃಷ್ಟಿಯಿಂದ ನೋಡು ವುದು ಅಥವಾ ಗಂಡು ಮಕ್ಕಳಿಂದಲೇ ದೂರವಿ ಡುವುದು ಬೇಡ. ಸ್ನೇಹದ ಮೌಲ್ಯ ಮತ್ತು ಅದರ ಮಿತಿಗಳಲ್ಲಿ ಅವಳೊಂದಿಗೆ ಒಬ್ಬ ಗೆಳತಿಯಾಗಿ ಕುಳಿತು ಚರ್ಚಿಸಿ. ಅರ್ಥ ಮಾಡಿಕೊಳ್ಳುವ ಮನಃ ಸ್ಥಿತಿ ಅವಳಿಗಿರುತ್ತದೆ. ಅರ್ಥ ಮಾಡಿಸುವ ರೀತಿ ಮತ್ತು ತಾಳ್ಮೆ ಅಮ್ಮಂದಿರಿಗೆ ಮುಖ್ಯ. ಎಲ್ಲವೂ ಬೈಗುಳದಿಂದ ತಿದ್ದಲು ಸಾಧ್ಯ ವಿಲ್ಲ. ಈ ವಯಸ್ಸಿ ನಲ್ಲಿ ಆಕರ್ಷಣೆಗಳಿಂದ ವಿದ್ಯೆ ದಾರಿತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಅವಳಿಗೆ ವಿದ್ಯೆ ಮತ್ತು ಸುಭದ್ರ ಭವಿಷ್ಯದ ಅವಶ್ಯಕತೆಯ ಬಗ್ಗೆ ತಿಳಿಸಿ. ಒಮ್ಮೆ ಭವಿಷ್ಯದತ್ತ ಅವಳ ಚಿತ್ತ ಹರಿದರೆ ಮತ್ತೆ ಅವಳು ಬೇರೆಡೆಗೆ ಹೋಗುವ ಭಯವಿರುವುದಿಲ್ಲ.

ಸ್ನೇಹಮಯ ವಾತಾವರಣ ಅತಿಮುಖ್ಯ
ಅಮ್ಮ-ಮಗಳ ಬಾಂಧವ್ಯ ಕೇವಲ ಮಮಕಾರ ಬಿಟ್ಟು ಗೆಳತಿಯ ಮಟ್ಟ ಮುಟ್ಟುವುದು ಅವಳ ವಯೋಸಹಜ ಬದಲಾವಣೆಗಳ ಹಂತದಲ್ಲಿ. ಈ ಹಂತದಲ್ಲಿ ನೀವು ಮಗಳ ಸ್ನೇಹಿತೆಯಾಗುವುದು ಬಹಳ ಮುಖ್ಯ. ಅವಳು ನಿಮ್ಮೊಡನೆ ಎಲ್ಲಾ ಭಾವನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಬಹುದು ಎನ್ನುವ ವಾತಾ ವರಣವನ್ನು ಸೃಷ್ಟಿಸಿ. ಅವಳ ವಯಸ್ಸಿಗೆ ನೀವು ಹೋಗಬೇಕು, ಅವಳು ನಿಮ್ಮ ವಯಸ್ಸಿಗೆ ಬರಲು ಸಾಧ್ಯವಿಲ್ಲ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಅವಳೊಡನೆ ಬೆರೆಯಿರಿ. ಮಗಳು ದೊಡ್ಡವಳಾ ದಂತೆ ಸ್ನೇಹ ಗಾಢವಾಗುತ್ತಾ ಹೋಗಬೇಕು. ಅವಳಿಗೆ ಅವಳ ಸ್ವಾತಂತ್ರ್ಯ ಕೊಡಿ ಆದರೆ ಆ ಸ್ವಾತಂತ್ರ್ಯವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎನ್ನುವುದನ್ನು ಒಬ್ಬ ಸ್ನೇಹಿತೆಯಾಗಿ ವಿವರಿಸಿ.

ಅವಳಿಗೆ ನೀವು ಹೇಳುವುದೆಲ್ಲಾ ತಪ್ಪು ಎನ್ನುವ ಭಾವನೆ ಮೂಡದೇ ಇರಬೇಕಾದರೆ ಮೊದಲು ನೀವು ಅವಳ ಭಾವನೆಗಳನ್ನು, ನಡವಳಿಕೆಗಳನ್ನು ಅರ್ಥ ಮಾಡಿಕೊಳ್ಳಿ. ಮಾತು ಮಾತಿಗೆ ಅವಳಲ್ಲಿ ತಪ್ಪು ಹುಡುಕುವುದನ್ನು ನಿಲ್ಲಿಸಿ, ಸಹನೆಯಿಂದ ಅವ ಳೇಕೆ ಹಾಗೆ ಮಾಡುತ್ತಿದ್ದಾಳೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಅವಳ ಕೋಪಕ್ಕೆ ಶಾಲೆಯಲ್ಲಿ ನಡೆದ ಘಟನೆ, ಮನೆಯಲ್ಲಿ ಯಾರೋ ಆಡಿದ ಮಾತು, ಸ್ನೇಹಿತರಿಂದ ಆದ ಕಿರಿಕಿರಿ, ಸಾವಿರ ಕಾರಣವಿರಬ ಹುದು ಆದರೆ ಅವಳ ಎಲ್ಲಾ ಭಾವನೆಗಳನ್ನು ಹೊರ ಹಾಕಲು ಇರುವ ಒಂದೇ ಸ್ಥಳ ಅದು ನಿಮ್ಮ ಮನೆ. ಹಾಗಾಗಿ ಅವಳಲ್ಲಾಗುವ ಕೋಪ-ತಾಪ, ನಗು- ಅಳು, ಎಲ್ಲದರ ಹಿಂದಿರುವ ಕಾರಣವನ್ನು ಅರ್ಥ ಮಾಡಿಕೊಳ್ಳುವತ್ತ ನಿಮ್ಮ ಗಮನ ಹರಿದರೆ ಖಂಡಿತ ವಾಗಿ ಅವಳು “ಅಮ್ಮ… ಪ್ಲೀಸ್ ಅರ್ಥಮಾಡ್ಕೊ” ಅಂತ ಕೇಳೋ ಪರಿಸ್ಥಿತಿ ಬರುವುದಿಲ್ಲ.

RELATED ARTICLES
- Advertisment -
Google search engine

Most Popular

Recent Comments