ಹಾವೇರಿ: ಜಿಲ್ಲೆಯಲ್ಲಿ ಕೆಲ ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿನಿಯ ಸಾವಿನ ಪ್ರಕರಣಕ್ಕೆ ಹೊಸ ಸುಳಿವು ದೊರೆತಿದೆ. ಆತ್ಮಹತ್ಯೆಗೂ ಮೊದಲು ವಿದ್ಯಾರ್ಥಿನಿ ಬರೆದಿರುವ ಡೆತ್ ನೋಟ್ ದೊರಕಿದ್ದು, ಅದರಲ್ಲಿ ಸಾವಿನ ರಹಸ್ಯ ಬಯಲಾಗಿದೆ.
ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಆಲದಕಟ್ಟಿ ಗ್ರಾಮದ ಅರ್ಚನಾ ಗೌಡಣ್ಣನವರ (16) ಎಂಬ ವಿದ್ಯಾರ್ಥಿನಿ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಮೃತ ಅರ್ಚನಾ ಹಿರೇಕೆರೂರು ತಾಲೂಕಿನ ದೂದಿಹಳ್ಲಿಯ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ಕಾರಣವೇನು ಎಂದು ತಿಳಿದಿಲ್ಲ ಎಂದು ವಿದ್ಯಾರ್ಥಿನಿ ಮನೆಯವರು ತಿಳಿಸಿದ್ದರು.
ಅರ್ಚನಾ ಸಾವಿಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಸಹಪಾಠಿ ವಿದ್ಯಾರ್ಥಿನಿ ಹಾಗೂ ಆಕೆಯ ತಾಯಿಯ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾಳೆ. ಅರ್ಚನಾ ತನ್ನ ಸಹಪಾಠಿಗಿಂತ ಚೆನ್ನಾಗಿ ಓದುತ್ತಿದ್ದ ಕಾರಣ ಆಕೆಯ ತಾಯಿ, ಅರ್ಚನಾಗೆ ಕಿರುಕುಳ ನೀಡಿದ್ದರು ಎಂದು ಈ ಪತ್ರದಲ್ಲಿ ಬರೆಯಲಾಗಿದೆ. ನನ್ನ ಮಗಳಿಗಿಂತ ನೀನೇಕೆ ಚೆನ್ನಾಗಿ ಓದುತ್ತಿಯಾ ಎಂದು ಕಿರುಕುಳ ನೀಡಿದ್ದ ಕಾರಣ ಮಾನಸಿಕವಾಗಿ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಳು ಎನ್ನಲಾಗಿದೆ.
ಸಹಪಾಠಿ ವಿದ್ಯಾರ್ಥಿನಿ ಜೋಯಾಳ ತಂದೆ ಆರಿಫುಲ್ಲಾ ವಸತಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಘಟನೆಯ ನಂತರ ಶಾಲೆಯ ಆಡಳಿತ ಮಂಡಳಿಯು ಅರ್ಚನಾ ಪೋಷಕರು ಆರಿಫುಲ್ಲಾ ಮತ್ತು ಗ್ರಾಮದ ಮುಖಂಡರು ಮಾತುಕತೆ ನಡೆದಿದೆ. ಮಾತುಕತೆಯ ಪ್ರಕಾರ ಅರ್ಚನಾ ಕುಟುಂಬವು 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿತ್ತು. ಕೊನೆಗೆ 1 ಲಕ್ಷ ರೂ ಹಣ ನೀಡಲಾಗಿದೆ.
ಅರ್ಚನಾ ಪ್ರತಿಭಾವಂತ ವಿದ್ಯಾರ್ಥಿನಿ. ಡೆತ್ ನೋಟ್‌ನಲ್ಲಿ ಬರೆದಿರುವ ವಿಷಯದ ವಿರುದ್ಧ ಕೋಪಗೊಂಡ ಗ್ರಾಮದ ಕೆಲವು ಯುವಕರು ಡೆತ್ ನೋಟ್ ಫೋಟೋ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಹಾವೇರಿಯ ಪೊಲೀಸ್ ತಂಡ ಅರ್ಚನಾ ವಾಸವಿದ್ದ ಗ್ರಾಮಕ್ಕೆ ಹಾಗೂ ವಸತಿ ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸುತ್ತಿದೆ.