ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸನ್ನದ್ಧ : ಮಧುಸೂದನ್

ಶಿವಮೊಗ್ಗ : ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದ್ದು, ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಜಂಟಿ ಕೃಷಿನಿರ್ದೇಶಕ ಮಧುಸೂದನ್ ತಿಳಿಸಿದರು.
ಇಂದು ನಗರದ ಜಿ.ಪಂ. ಸಭಾಂಗಣದಲ್ಲಿ ಜಿ.ಪಂ.ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಸಭೆಗೆ ನೀಡಿದ ಅವರು, ಪ್ರಸಕ್ತ ಹಂಗಾಮಿನಲ್ಲಿ ೧,೬೯,೦೨೭ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಲಾಗಿದ್ದು, ಇದರಲ್ಲಿ ೧,೦೭,೭೬೦ ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ೫೪,೮೯೪ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, ೧೨೧೬ ಹೆಕ್ಟೇರ್ ಪ್ರದೇಶದಲ್ಲಿ ಇತರೇ ಏಕದಳ, ೧೧೨೭ ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ಧಾನ್ಯ, ೨೧೨ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳು, ೩೮೧೮ ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಬಗ್ಗೆ ಗುರಿ ಹೊಂದಲಾಗಿದೆ ಎಂದರು.
ಜಿಲ್ಲೆಯ ೮೦ ಕೇಂದ್ರಗಳಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದ ಅವರು, ೨೪,೫೬೧ ಕ್ವಿ. ಬಿತ್ತನೆ ಬೀಜಕ್ಕೆ ಬೇಡಿಯಿದ್ದು, ಇದರಲ್ಲಿ ೨೯೯೫ ಕ್ವಿ. ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ. ೭೭, ೧೦೦ ಕ್ವಿಂ. ರಸಗೊಬ್ಬರಕ್ಕೆ ಬೇಡಿಕೆಯಿದ್ದು, ಮೇ ಅಂತ್ಯದವರೆಗೆ ೭೯೭೦ ರಸಗೊಬ್ಬರವನ್ನು ವಿತರಣೆ ಮಾಡಲಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ತಿಳಿಸುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಸಿಇಓ ಸೂಚನೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಇಲಾಖಾ ಅಧಿಕಾರಿಗಳು, ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸಭೆಗೆ ತಿಳಿಸಿದರು.
ಇವರ ಉತ್ತರದಿಂದ ತೀವ್ರ ಆಕ್ರೋಶಗೊಂಡ ಸಿಇಓ ರಾಕೇಶ್‌ಕುಮಾರ್, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನನಗೆ ನೇರವಾಗಿ ದೂರುಗಳು ಬರುತ್ತಿವೆ. ನೀವು ಸಮಸ್ಯೆ ಇಲ್ಲ ಎಂದು ಹೇಳುತಿದ್ದೀರಿ. ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುತ್ತಿಲ್ಲ. ೧೯೩ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ನೀವು ಕಛೇರಿಯಲ್ಲಿ ಕುಳಿತರೆ ನಿಮಗೆ ಗ್ರಾಮೀಣ ಪ್ರದೇಶದ ವಸ್ತು ಸ್ಥಿತಿ ಅರಿವಾಗುವುದಿಲ್ಲ ಎಂದು ಇಂಜಿನಿಯರ್‌ನ್ನು ತರಾಟೆಗೆ ತೆಗೆದುಕೊಂಡರು.
ಶಿಕ್ಷಕರ ಕೊರತೆಯನ್ನು ನೀಗಿಸಿದರೆ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಲು ಸಾಧ್ಯವಿಲ್ಲ. ಆದ್ದರಿಂದ ಇಲಾಖಾಧಿಕಾರಿಗಳು ಈ ತಿಂಗಳ ಒಳಗಾಗಿಯೇ ಶಿಕ್ಷಕರ ಕೊರತೆಯನ್ನು ನೀಗಿಸಿಕೊಳ್ಳಬೇಕೆಂದು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷೆ ವೇದಾ ವಿಜಯ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ವೀರೇಶ್, ಕಲ್ಪನಾ ಪದ್ಮನಾಭ್ ವದಲಾದವರಿದ್ದರು.