ಶಿವಮೊಗ್ಗ : ಇಂದು ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗೆ ತಮ್ಮ ಭಾಷಣವನ್ನು ಬಹುಪಾಲು ಸೀಮಿತಗೊಳಿಸಿದರು.
ನಗರದ ಗೋಪಿವೃತ್ತದಲ್ಲಿ ನಡೆದ ಬಹಿರಂಗಸಭೆಯಲ್ಲಿ ಮಾತ ನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಈ ಹಿಂದೆ ರಾಜ್ಯದ ವಿವಿಧ ಭಾಗದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯ ಸಂದರ್ಭದಲ್ಲಿ ಮಾಡಿದ ಭಾಷಣವೇ ಇಲ್ಲಿಯೂ ಸಹ ಪುನರಾವರ್ತಿತವಾಯಿತು.
ಕಳೆದ ನಾಲ್ಕು ವರ್ಷದ ಹಿಂದೆ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿದ್ದ ಭರವಸೆ ಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲ ರಾಗಿದ್ದಾರೆ ಎಂದು ಹರಿಹಾಯ್ದರು.
ಪ್ರತೀ ವರ್ಷ ೨ ಕೋಟಿ ಉದ್ಯೋಗ ವನ್ನು ಸೃಷ್ಠಿ ಮಾಡುತ್ತೇವೆ. ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ೧೫ ಲಕ್ಷ ರೂ.ಗಳನ್ನು ಹಾಕುತ್ತೇವೆ ಎಂದು ಹೇಳಿದ್ದರು. ಆದರೆ ಇದುವರೆಗೂ ಆ ಕಾರ್ಯವನ್ನು ಮಾಡುವಲ್ಲಿ ಸಫಲರಾಗಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿಯವರು ರಾಜ್ಯಕ್ಕೆ ಬಂದ ಸಂದರ್ಭದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಠ ಸರ್ಕಾರ ಎಂದು ಹೇಳುತ್ತಾರೆ. ಆದರೆ ತಮ್ಮ ಎಡಭಾಗದಲ್ಲಿ ಭ್ರಷ್ಠಾ ಚಾರ ಹಗರಣದಲ್ಲಿ ಜೈಲಿಗೆ ಹೋಗಿ ಬಂದ ಬಿಜೆಪಿಯ ನಾಲ್ವರು ಮಾಜಿ ಸಚಿವರಿರುತ್ತಾರೆ. ಬಲಭಾಗದಲ್ಲಿ ಭ್ರಷ್ಠಾಚಾರದ ಆರೋಪದ ಅಡಿಯಲ್ಲಿ ಜೈಲಿಗೆ ಹೋಗಿಬಂದ ಮಾಜಿ ಮುಖ್ಯಮಂತ್ರಿ ಇರುತ್ತಾರೆ. ಇವರುಗಳನ್ನು ಕೂರಿಸಿಕೊಂಡು ಮೋದಿ ಭ್ರಷ್ಠಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು.
ಭ್ರಷ್ಠಾಚಾರದ ಬಗ್ಗೆ ಮಾತನಾ ಡುವ ಮೊದಲು ವೇದಿಕೆಯ ಮೇಲೆ ಇರುವ ಭ್ರಷ್ಠಾಚಾರದ ಆರೋಪ ಹೊತ್ತಿರುವವನ್ನು ಕೆಳಗಿಳಿಸಿ ಮಾತನಾ ಡಬೇಕು. ಅದನ್ನು ಮಾಡದೇ ತಮ್ಮ ಎಡ-ಬಲಗಳಲ್ಲಿ ಕೂರಿಸಿಕೊಂಡು ಭ್ರಷ್ಠಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇವರಿಗಿಲ್ಲ ಎಂದು ತಮ್ಮ ಹಳೇಯ ಭಾಷಣವನ್ನು ಇಲ್ಲಿಯೂ ಸಹ ಪುನರುಚ್ಛರಿಸಿದರು.
ತಮ್ಮ ಭಾಷಣದ ಬಹುಪಾಲು ಭಾಗವನ್ನು ಮೋದಿ ಟೀಕೆಗೆ ಸೀಮಿತ ಗೊಳಿಸಿದ ರಾಹುಲ್, ಸಿಬಿಎಸ್‌ಸಿ ಪ್ರಶ್ನೆಪತ್ರಿಕೆ ಸೋರಿಕೆ, ಚುನಾವಣಾ ಆಯೋಗದ ಮಾಹಿತಿ ಸೋರಿಕೆ ಬಗ್ಗೆ ಪ್ರಸ್ತಾಪಿಸಿ, ಅಲ್ಲಿಯೂ ಸಹ ಮೋದಿಯನ್ನು ಹಿಗ್ಗಾ ಮುಗ್ಗಾ ಟೀಕೆ ಮಾಡಿದರು.
ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅನ್ನಭಾಗ್ಯ ಯೋಜನೆ, ಕ್ಯಾಂಟೀನ್ ಭಾಗ್ಯ, ಹಾಗೂ ರೈತರ ಸಾಲ ಮನ್ನಾ ಮಾಡು ವಂತಹ ಕಾರ್ಯವನ್ನು ಮಾಡಿದೆ ಎಂದು ತಮ್ಮ ಭಾಷಣದ ಕೊನೆಯಲ್ಲಿ ಪ್ರಸ್ತಾಪಿಸಿದ ಅವರು, ಈಗಿರುವ ರಾಜ್ಯ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಡಿ.ಕೆ.ಶಿವ ಕುಮಾರ್, ತೀ.ನಾ.ಶ್ರೀನಿವಾಸ್, ಮಂಜುನಾಥ್ ಭಂಡಾರಿ ಸೇರಿದಂತೆ ಮೊದಲಾದವರಿದ್ದರು.