Wednesday, September 18, 2024
Google search engine
Homeಇ-ಪತ್ರಿಕೆಮೋದಿ ಎನ್‌ಡಿಎ ನಾಯಕ: ಸರ್ಕಾರ ರಚನೆಗೆ ಹಕ್ಕು ಮಂಡನೆ

ಮೋದಿ ಎನ್‌ಡಿಎ ನಾಯಕ: ಸರ್ಕಾರ ರಚನೆಗೆ ಹಕ್ಕು ಮಂಡನೆ

ನವದೆಹಲಿ :  ಎನ್‌ ಡಿಎ ಮೈತ್ರಿಕೂಟವು ತನ್ನ ಸಂಸದೀಯ ಪಕ್ಷದ ನಾಯಕರಾಗಿ ನರೇಂದ್ರಮೋದಿ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಿದ್ದು,  ಜೂ. ೯ ರಂದು ನರೇಂದ್ರಮೋದಿ ಅವರು ೩ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನವದೆಹಲಿಯಲ್ಲಿ ಶುಕ್ರವಾರ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಸರ್ವಾನುಮತದಿಂದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು.

ಕಳೆದ ಎರಡು ದಿನಗಳ ಹಿಂದೆ ನವದೆಹಲಿಯಲ್ಲಿ ನಡೆದಿದ್ದ ಎನ್‌ಡಿಎ ನಾಯಕರ ಸಭೆಯಲ್ಲಿ ಮೋದಿ ಅವರನ್ನು ಎನ್‌ಡಿಎ ನಾಯಕರನ್ನಾಗಿ ಔಪಚಾರಿಕವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಶುಕ್ರವಾರ ಅಧಿಕೃತವಾಗಿ ಮೋದಿ ಅವರನ್ನು ಎನ್‌ಡಿಎ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.
ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಅವರು ಬಿಜೆಪಿಯ ಸಂಸದೀಯ ಪಕ್ಷದ ನಾಯಕ ನರೇಂದ್ರ ಮೋದಿ ಅವರನ್ನು ಎನ್‌ಡಿಎ ನಾಯಕನ್ನಾಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ಮಂಡಿಸಿದರು. ಬಿಜೆಪಿಯ ಹಿರಿಯ ನಾಯಕರಾದ ಅಮಿತ್ ಶಾ, ನಿತಿನ್ ಗಡ್ಕರಿ, ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ,ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್, ಎಲ್ ಜೆಪಿ ನಾಯಕ ಚಿರಾಗ್ ಪಾಸ್ವಾನ್ ಹಿಂದೂಸ್ತಾನ್ ಆವಾಮಿ ಮೋರ್ಚಾ ಅಧ್ಯಕ್ಣ ನಿತಿನ್ ರಾಮ್ ಮಾಂಜಿ, ಸೇರಿದಂತೆ ಎನ್ ಡಿಎ ಮಿತ್ರ ಪಕ್ಷದ ನಾಯಕರು ಅನುಮೋದಿಸಿದರು.
ಎನ್‌ಡಿಎ ಮಿತ್ರ ಪಕ್ಷಗಳ ಈ ಸಂಸದೀಯ ಪಕ್ಷದ ಸಭೆಯಲ್ಲಿ ಸರ್ವಾನುಮತದಿಂದ ನಾಯಕರಾಗಿ ಆಯ್ಕೆಯಾಗಿರುವ ಮೋದಿ ಅವರು ಇದೇ ತಿಂಗಳ ೯ ರಂದು ದೇಶದ ಪ್ರಧಾನಿಯಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸುವರು. ಎನ್‌ಡಿಎ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದ ನರೇಂದ್ರ ಮೋದಿ ಅವರನ್ನು ಎನ್ ಡಿಎ ನಾಯಕರು ಸೇರಿದಂತೆ ಹಲವು ಹಿರಿಯ ನಾಯಕರು ಎದ್ದು ನಿಂತು ಅಭಿನಂಧನೆ ಸಲ್ಲಿಸಿದರು.
ಎನ್ ಡಿ ಎ ನಾಯಕರಾಗಿ ಆಯ್ಕೆಯಾದ ಬಳಿಕ ಮಾತನಾಡಿದ. ಪ್ರಧಾನಿ ನರೇಂದ್ರ ಮೋದಿ ಅವರು , ದೇಶದ ಸಮಗ್ರ ಅಭಿವೃದ್ಧಿ ಜೊತೆಯಾಗಿ ಕೆಲಸ ಮಾಡೋಣ, ತಮ್ಮ ಮೇಲೆ ನಂಬಿಕೆ ಇಟ್ಟ ಎನ್ ಡಿಎ ಎಲ್ಲಾ ನಾಯಕರಿಗೆ ಧನ್ಯವಾದಗಳು ಎಂದರು. ದೇಶದ ಕೋಟ್ಯಂತರ ಕಾರ್ಯಕರ್ತರ ನಿರಂತರ ಪರಿಶ್ರಮದ ಫಲವಾಗಿ ದೇಶದಲ್ಲಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಎನ್ ಡಿ ಎ ನಾಯಕರಾಗಿ ಆಯ್ಕೆ ಮಾಡಿದ ಎಲ್ಲರಿಗೂ ಮತ್ತೊಮ್ಮೆ ಅಬಾರಿ ಎಂದರು.

ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿ, ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಆಯ್ಕೆಯಾಗಿದ್ದು ದೇಶದ ಸರ್ವಾಂಗೀಣ ಅಭಿವೃದ್ಧಿ ಎನ್ ಡಿಎ ಉದ್ದೇಶವಾಗಿದೆ. ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ದೇಶವನ್ನು ಮುನ್ನೆಡೆಸಲಿದ್ದಾರೆ ಎಂದರು.ಈ ವೇಳೆ ಅಮಿತ್ ಶಾ ಮಾತನಾಡಿ, ರಾಜನಾಥ್ ಸಿಂಗ್ ಅವರು ಮಾಡಿದ್ದ ಪ್ರಸ್ತಾಪಕ್ಕೆ ಅನುಮೋದನೆ ನೀಡಿ ೧೪೦ ಕೋಟಿ ದೇಶದ ಜನರ ಆಶಯ ಈಡೇರಲಿದೆ .ಕಾಶ್ಮೀರದಿಂದ ಕನ್ಯಾಕುಮಾರಿ ಈಶಾನ್ಯ ಭಾಗದಿಂದ ಪಶ್ಚಿಮ ಭಾಗದವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷದಲ್ಲಿ ಹಿಂದೆಂದೂ ಕಂಡು ಕೇಳರಿಯದ ಅಭಿವೃದ್ದಿಕಾರ್ಯ ಕೈಗೊಂಡಿದ್ಧಾರೆ ಎನ್ನುತ್ತಲೇ ಹಳೆಯ ಸೆಂಟ್ರಲ್ ಹಾಲ್ ನಲ್ಲಿ ನೆರದಿದ್ದ ಎಲ್ಲಾ ಎನ್‌ಡಿಎ ಮಿತ್ರ ಪಕ್ಷಗಳ ಸಂಸದರು ಮೇಜುಕುಟ್ಟಿ ಸ್ವಾಗತಿಸಿದರು.
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡ ಮಾತನಾಡಿ,  ೩ ತಿಂಗಳ ಪ್ರಚಾರದಲ್ಲಿ ನರೇಂದ್ರ ಮೋದಿ ಅವರು ಒಂದು ದಿನವೂ ವಿಶ್ರಾಂತಿ ಪಡೆಯದೆ ಪ್ರಚಾರ ನಡೆಸಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಭಾರತದ ಆರ್ಥಿಕತೆ ೫ನೇ ಸ್ಥಾನಕ್ಕೆ ಏರಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಮೂರನೇ ಅವಧಿಯಲ್ಲಿ ೩ನೇ ಸ್ಥಾನಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಸದೀಯ ಸಭೆಯಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್‌ಕುಮಾರ್, ಶಿವಸೇನೆಯ ಮುಖ್ಯಸ್ಥ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ಶಿಂಧೆ, ಎನ್‌ಸಿಪಿಯ ಅಜಿತ್‌ಪವಾರ್, ಪ್ರಫುಲ್ ಪಟೇಲ್,ಎಲ್‌ಜೆಪಿಯ ಚಿರಾಗ್‌ಪಾಸ್ವಾನ್, ಜೆಡಿಎಸ್‌ನ ಹೆಚ್.ಡಿ ಕುಮಾರಸ್ವಾಮಿ, ಜನಸೇನಾಪಕ್ಷದ ಪವನ್‌ಕಲ್ಯಾಣ್ ಸೇರಿದಂತೆ ಎಲ್ಲ ಎನ್‌ಡಿಎ ಅಂಗಪಕ್ಷಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

………………………….

ಜೂ. ೯ ರಂದು ಪ್ರಮಾಣ, ಅಧಿಕೃತ ಘೋಷಣೆ
ದೇಶದ ಪ್ರಧಾನಿಯಾಗಿ ನರೇಂದ್ರಮೋದಿ ಅವರು ಜೂ. ೯ ರಂದು ಪ್ರಮಾಣವಚನ ಸ್ವೀಕರಿಸುವರು ಎಂದು ಬಿಜೆಪಿ ಮುಖಂಡ ಪ್ರಲ್ಹಾದ್‌ಜೋಷಿ ಅಧಿಕೃತವಾಗಿ ಪ್ರಕಟಿಸಿದರು.ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಲ್ಹಾದ್‌ಜೋಷಿ ಅವರು ಜೂ. ೯ ರಂದು ಸಂಜೆ ೬ ಗಂಟೆಗೆ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments