ನನ್ನ ಸೋಲು ಖಚಿತಪಡಿಸಿಕೊಂಡು ಮೋದಿಗೆ ಮತ ನೀಡಿದ ಜನತೆ

ಪತ್ರಿಕಾಗೋಷ್ಟಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿಕೆ

ಶಿವಮೊಗ್ಗ: ನಾನು ಗೆಲ್ಲುವುದಿಲ್ಲವೆಂದು ಖಚಿತಪಡಿಸಿಕೊಂಡ ಜನತೆ ಮೋದಿಗೆ ಮತ ನೀಡಿದ್ದಾರೆ. ಈ ಕಾರಣದಿಂದ ರಾಘವೇಂದ್ರ ಅವರು ಜಯಗಳಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಾನು ಯಾವ ಉದ್ದೇಶಕ್ಕಾಗಿ ಸ್ಪರ್ಧೆ ಮಾಡಿದ್ದೇನೆಯೋ ಅದು ಸಾಕಾರಗೊಳ್ಳುತ್ತಿದೆ. ರಾಜ್ಯದ ಬಿಜೆಪಿಯಲ್ಲಿ ಈಗ ಬಿರುಸಿನ ಚರ್ಚೆ ನಡೆಯುತ್ತಿದೆ. ಸೋಲು-ಗೆಲುವಿನ ವಿಚಾರಕ್ಕಿಂತ ಪಕ್ಷ ಶುದ್ದಿಗಾಗಿನ ನನ್ನ ಸ್ಪರ್ಧೆ ಗೆದ್ದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ನೀತಿ ನಿಯಮಗಳನ್ನು ಮೀರಿರುವ ಯಡಿಯೂರಪ್ಪನವರ ಕುಟುಂಬ ರಾಜಕಾರಣಕ್ಕೆ ಉತ್ತರವೇನು? ಲಿಂಗಾಯತ ಸಮಾಜ ಯಡಿಯೂರಪ್ಪನವರ ಹಿಂದೆ ಇರುವುದು ನಿಜ. ಪಕ್ಷಕ್ಕೆ ಇಷ್ಟು ಸಾಕೇ? ಹಿಂದುಳಿದ ಸಮಾಜವನ್ನು ಬೆಳೆಸಲು ಯಾಕೆ ಅವರು ಪ್ರಯತ್ನಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿನ ನ್ಯೂನ್ಯತೆಯನ್ನು ಸರಿ ಮಾಡುವ ಒಂದು ಆಶಾಕಿರಣವನ್ನು ನಾನು ಹೊಂದಿದ್ದೇನೆ. ಯಾವುದೇ ಕಾರಣಕ್ಕೂ ನನಗೆ ಬಿಜೆಪಿ ಕುರಿತು ದ್ವೇಷವಿಲ್ಲ. ಲಿಂಗಾಯಿತ, ಒಕ್ಕಲಿಗರ ಜೊತೆ ಹಿಂದುಳಿದ ವರ್ಗದವರನ್ನು ಬೆಳೆಸಲು ಪಕ್ಷ ಗಮನ ಕೊಡಬೇಕಿದೆ. ಸೋಲು ಗೆಲುವಿಗಿಂತ ಪಕ್ಷ ಶುದ್ದಿಗೆ ನನ್ನ ಸ್ಪರ್ಧೆಯಾಗಿತ್ತು. ಈಗಲೂ ಸಾವಿರಾರು ಜನ ನಿಮ್ಮ ಹಿಂದೆ ಇದ್ದೇವೆ ಎಂದು ಹೇಳುತ್ತಿದ್ದಾರೆ. ಜೆಡಿಎಸ್ ಮೈತ್ರಿ ಇಲ್ಲದೇ ಇದ್ದಿದ್ದರೆ ಪಕ್ಷದ ಗೆಲುವು ಅದೋಗತಿಯಾಗುತ್ತಿತ್ತು. ನಾನು ಪಕ್ಷವನ್ನು ಬಿಡುವುದಿಲ್ಲ ಮತ್ತು ರಾಷ್ಟ್ರವಾದವನ್ನು ಬಿಡುವುದಿಲ್ಲ. ಇದು ನನ್ನ ಜೀವನದ ಕೊನೆಯವರೆಗೂ ಮುಂದುವರೆಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಹಿಂದುತ್ವವಾದಿಗಳ ಶಕ್ತಿ ಕುಂದಿಸಲಾಗುತ್ತಿದೆ. ನಮ್ಮ ಕಷ್ಟವನ್ನು ಎಲ್ಲಿ ಹೇಳಿಕೊಳ್ಳಬೇಕೆಂಬುದು ಗೊತ್ತಾಗುತ್ತಿಲ್ಲ. ಅಂತಹ ಪ್ರಾಮಾಣಿಕ ನಾಯಕರು ಈಗ ಇಲ್ಲ. ಈ ಹಿಂದೆ ಇದ್ದ ವಿ.ಎಸ್. ಆಚಾರ್ಯ, ಶಂಕರ ಮೂರ್ತಿಯಂತಹವರು ಈಗ ಇಲ್ಲವಾಗಿದೆ. ಯಾವುದೇ ತೀರ್ಮಾನಕ್ಕೂ ತಂದೆ ಮಕ್ಕಳು ಬದ್ಧರಾಗುತ್ತಿಲ್ಲ. ಇವರಿಂದ ಕುರುಬ, ಮಡಿವಾಳರಂತಹ ಹಿಂದುಳಿದ ಸಮಾಜವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಜೆಡಿಎಸ್ ಮೈತ್ರಿಯಿಂದಾಗಿ ಇಷ್ಟಾದರೂ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರು ಚುನಾವಣೆ ಪೂರ್ವ ಪರಿಸ್ಥಿತಿಯನ್ನು ಅವಲೋಕಿಸುವುದು ಸೂಕ್ತವಾಗಿತ್ತು. ರಾಜ್ಯದ ಜನತೆ ಮೋದಿಯನ್ನು ಕೈ ಬಿಡಲಿಲ್ಲ. ನೋವಿನ ಸಂಗತಿಯೆಂದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ೨೫ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿಯು ಈ ಬಾರಿ ೧೭ಕ್ಕೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದಿರುವುದು. ಈ ಸ್ಥಿತಿಗೆ ಯಾವೆಲ್ಲಾ ಅಂಶಗಳು ಕಾರಣವಾಗಿಯೇ ಎಂಬುದನ್ನು ಪಕ್ಷವು ಅವಲೋಕಿಸಬೇಕಿದೆ. ಸಮೂಹಿಕ ಚರ್ಚೆ ಇಲ್ಲದೆ ಕಾರ್ಯಕರ್ತರ ನೋವು ಕೇಳುವವರು ಇಲ್ಲವಾಗಿದೆ ಎಂಬು ಅಭಿಪ್ರಾಯಿಸಿದರು.

ಹಿಂದುಳಿದವರು, ದಲಿತರು ಬಿಜೆಪಿಯ ಶಕ್ತಿ. ಇದನ್ನು ಗಮನಿಸಿ ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಪ್ರಾರಂಭಿಸಿದ್ದೆ. ಕೇಂದ್ರ ನಾಯಕರಿಗೆ ದೂರು ನೀಡಿ ಇದನ್ನು ನಿಲ್ಲಿಸಲಾಗಿದ್ದು ಯಾಕೆ? ಇದರಲ್ಲಿ ಲಿಂಗಾಯತರನ್ನೊಳಗೊಂಡು ಎಲ್ಲ ಸಮುದಾಯದವರು ಕೈಜೋಡಿಸಿದ್ದರು. ಈ ಸಂಘಟನೆ ಇದ್ದಿದ್ದರೆ ಎಲ್ಲ ಸಮುದಾಯ ನಮ್ಮ ಜೊತೆ ನಿಂತು ಪಕ್ಷದ ಬಲವರ್ಧನೆಗೆ ಸಹಕಾರಿಯಾಗಿರುತ್ತಿತ್ತು ಎಂದು ತಿಳಿಸಿದರು.

ಸಂತೋಷ್ ಅತ್ಮಹತ್ಯೆ ಪ್ರಕರಣದಲ್ಲಿ ಕೇಂದ್ರ ನಾಯಕರ ಸೂಚನೆಯಂತೆ ರಾಜೀನಾಮೆ ನೀಡಿದ್ದೆ. ನಿರ್ದೂಷಿಯಾದ ಮಾರನೆ ದಿನ ಇನ್ನೆರಡು ದಿನದಲ್ಲಿ ಕ್ಯಾಬಿನೆಟ್ ಗೆ ತೆಗೆದುಕೊಳ್ಳುತ್ತೇವೆ ಎಂಬ ಭರವಸೆ ನೀಡಿದ್ದರು. ಅದು ಆಗಲಿಲ್ಲ. ೬ ತಿಂಗಳಿನಿಂದ ರಾಜ್ಯದ ಅಧ್ಯಕ್ಷ ಸ್ಥಾನ ಖಾಲಿಯಿತ್ತು. ಅದಕ್ಕೂ ಯಡಿಯೂರಪ್ಪನವರು ತಮ್ಮ ಮಗನನ್ನು ಕೂರಿಸಿ ಕುಟುಂಬ ರಾಜಕಾರಣವನ್ನು ಮುಂದುವರಿಸಿದರು ಎಂದು ದೂರಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೂ ಮತ್ತು ಜಗದೀಶ್ ಶೆಟ್ಟರ್‍ ಅವರಿಗೆ ಸ್ಪರ್ಧೆಯನ್ನು ನಿರಾಕರಿಸಲಾಯಿತು. ಪ್ರಮುಖ ವಿಷಯವೆಂದರೆ ನನ್ನ ಮನೆಗೆ ಬಂದ ಬಿಜೆಪಿಯ ನಾಯಕರಿಗೆ ನನಗೆ ಯಾವುದೇ ಎಂ ಎಲ್ ಸಿ, ಎಂ ಎಲ್ ಎ, ಎಂಪಿ ಸ್ಥಾನಮಾನಗಳು ಬೇಡ, ಪಕ್ಷ ಸಂಘಟನೆಯ ಜವಾಬ್ದಾರಿ ಕೊಡಿ ಎಂದು ಹೇಳಿದೆ. ಮಗನಿಗೆ ಎಂ ಪಿ  ಸ್ಪರ್ಧೆಗೆ ಟಿಕೇಟ್ ನೀಡುತ್ತೇವೆ ಎಂಬ ಭರವಸೆ ನೀಡಿದ್ದರು. ಹಾವೇರಿ ಕ್ಷೇತ್ರದ ಟಿಕೇಟ್ ನೀಡಿ ಗೆಲ್ಲಿಸುತ್ತೇವೆ ಎಂದವರು ಅಲ್ಲಿ ನನ್ನ ಮಗನಿಗೆ ಟಿಕೇಟ್ ನೀಡಲಿಲ್ಲ. ಈ ಗೊಂದಲಗಳನ್ನು ನಾನು ಜನತೆಯ ಮುಂದೆ ತರಲು ಬಯಸುತ್ತೇನೆ. ಉತ್ತರ ನಿರೀಕ್ಷೆ ಮಾಡುವುದಿಲ್ಲ. ನರೇಂದ್ರ ಮೋದಿಯವರು ೩ನೆ ಬಾರಿಗೆ ಪ್ರಧಾನಿಯಾಗುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

 ಪತ್ರಿಕಾಗೋಷ್ಠಿಯಲ್ಲಿ ವಿಶ್ವಾಸ್, ಮಾಜಿ ಮಹಾನಗರ ಪಾಲಿಕೆ ಸದಸ್ಯರು, ಬಾಲು ಉಪಸ್ಥಿತರಿದ್ದರು.