ಶಿವಮೊಗ್ಗ: ಹೆಣ್ಣು ಮಕ್ಕಳು ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರುತ್ತಿದ್ದು ಇವರುಗಳನ್ನು ಪ್ರೋತ್ಸಾಹಿಸ ಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಆರ್.ಅಶೋಕ್ ತಿಳಿಸಿದರು.
ಇಂದು ನಗರದ ಆದಿಚುಂಚನಗರಿ ಸಮು ದಾಯ ಭವನದಲ್ಲಿ ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಏರ್ಪಡಿಸಿದ್ದ ನೂತನ ವಿದ್ಯಾರ್ಥಿ ನಿಯರ ವಸತಿನಿಲಯ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಕ್ಕಳು ಶಿಕ್ಷಣ,ಉದ್ಯೋಗ, ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರುತ್ತಿದ್ದಾಳೆ, ಆದರೆ ಅವಳಿಗೆ ಪ್ರೋತ್ಸಾಹದ ಅವಶ್ಯಕತೆ ಇದೆ ಎಂದರು.
ಕಳೆದ ಹಲವು ವರ್ಷಗಳ ಹಿಂದೆ ಕೇವಲ ಗಂಡು ಮಕ್ಕಳು ಮಾತ್ರ ಓದಬೇಕೆಂಬ ಮನಸ್ಥಿತಿ ಕುಟುಂಬದಲ್ಲಿ ಇರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಬದಲಾಗಿದೆ. ಹೆಣ್ಣು ಮಕ್ಕಳಿಗೂ ಸಹ ಉನ್ನತ ಶಿಕ್ಷಣ ಸಿಗುವಂತಾಗಿದೆ ಎಂದ ಅವರು, ಹೆಣ್ಣು ಮಕ್ಕಳು ಬದುಕಿಗೆ ದಾರಿ ಯನ್ನು ಕಂಡುಕೊಳ್ಳಬೇಕಾದರೆ ಅನೇಕ ಅಡೆತಡೆಗಳನ್ನು ದಾಟಿ ಸಾಗಬೇಕಾಗುತ್ತದೆ. ಇಂತಹ ಪರಿಸ್ಥಿತಿ ಗಂಡು ಮಕ್ಕಳಿಗೆ ಇರುವುದಿಲ್ಲ ಎಂದು ಹೇಳಿದರು.
ಒಕ್ಕಲಿಗರ ಸಂಘ ಹೆಣ್ಣು ಮಕ್ಕಳಿಗಾಗಿ ಉಚಿತವಾಗಿ ವಿದ್ಯಾರ್ಥಿನಿ ನಿಲಯವನ್ನು ಆರಂಭ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದ ಅವರು, ಸಂಘದಲ್ಲಿಯೂ ಸಹ ಹೆಣ್ಣು ಮಕ್ಕಳಿಗೆ ಶೇ.೨೫ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕು ಆ ಮೂಲಕ ಮಹಿಳೆಯರಿಗೆ ಆದ್ಯತೆಯನ್ನು ನೀಡಬೇಕು ಎಂದು ಹೇಳಿದರು.
ಆದಿಚುಂಚನಗಿರಿ ಮಠ ಕೇವಲ ಒಕ್ಕಲಿಗರ ಮಠವಾಗಿಲ್ಲ. ಅದು ಎಲ್ಲಾ ಜಾತಿ-ಜನಾಂಗದ ಮಠ ವಾಗಿದೆ. ಅಲ್ಲದೇ ಇಂದು ಒಕ್ಕಲಿಗ ಸಮು ದಾಯ ಮುಂದುವರೆದಿದೆ ಎಂದರೆ ಅದಕ್ಕೆ ಶ್ರೀ ಬಾಲ ಗಂಗಾಧರ ನಾಥ ಸ್ವಾಮಿಗಳೇ ಕಾರಣ ಎಂದರು.
ಕೇವಲ ರಾಜ್ಯದಲ್ಲಷ್ಟೇ ಅಲ್ಲದೇ ಹೊರ ರಾಜ್ಯಗಳಲ್ಲೂ ಹಾಗೂ ವಿದೇಶಗಳಲ್ಲೂ ಆದಿಚುಂಚನಗಿರಿ ಮಠ ಖ್ಯಾತಿ ಪಡೆದಿದೆ. ಅಲ್ಲದೇ ಹರಿದು ಹಂಚಿ ಹೋಗಿದ್ದ ಒಕ್ಕಲಿಗ ಸಮುದಾಯ ಇಂದು ಒಂದಾಗಿ ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಿದ್ದರು. ಸಮಾರಂಭದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕರುಗಳಾದ ಅಪ್ಪಾಜಿಗೌಡ,ಕೆ.ಬಿ.ಪ್ರಸನ್ನಕುಮಾರ್, ಡಾ.ಸಿ. ಎನ್.ಅಶ್ವಥ್‌ನಾರಾಯಣ, ಕಾಡಾಧ್ಯಕ್ಷ ಹೆಚ್.ಎಸ್,ಸುಂದರೇಶ್,ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯದ ಅಧ್ಯಕ್ಷ ಡಿ.ವಿ.ರಮೇಶ್, ಪ್ರೊ.ಎಂ.ನಾಗರಾಜ್. ವೇದಾವಿಜಯಕುಮಾರ್ ಉಪಸ್ಥಿತರಿದ್ದರು.