ಶಿವಮೊಗ್ಗ : ಪ್ರಸಕ್ತ ಮುಂಗಾರು ಹಂಗಾಮಿ ನಲ್ಲಿ ಬೆಳೆದ ಭತ್ತದ ಬೆಳೆಗೆ ಸೈನಿಕ ಹುಳುವಿನ ಭಾದೆ ಕಂಡುಬಂದಿದ್ದು, ಕಟಾವಿಗೆ ಬಂದ ಬೆಳೆ ಕೈಗೆಟುಕದಂತಾಗಿದೆ. ಅದಕ್ಕಾಗಿ ಸೈನಿಕ ಹುಳುವಿನ ಭಾದೆಯಿಂದ ಪೀಡಿತವಾಗಿರುವ ಬೆಳೆಯ ಸಮೀಕ್ಷೆ ನಡೆಸಿ, ಪರಿಹಾರಕ್ಕಾಗಿ ಕೂಡಲೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅವರು ಜಂಟಿ ಕೃಷಿ ನಿರ್ದೇಶಕ ಡಾ.ಮಧು ಸೂದನ್‌ಗೆ ಸೂಚಿಸಿದರು.
ಇಂದು ಜಿ.ಪಂ. ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಕಾಲದಲ್ಲಿ ಸೂಕ್ತ ತಂತ್ರ ಜ್ಞಾನ ಬಳಸಿ ಹುಳುವಿನ ಬಾಧೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಭೆಗೆ ಜಂಟಿ ಕೃಷಿ ನಿರ್ದೇಶಕ ಡಾ.ಮಧುಸೂದನ್ ಮಾಹಿತಿ ನೀಡಿ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ.೨೫ರಷ್ಟು ಮಳೆಯ ಅಭಾವ ದಿಂದ ಹಾಗೂ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಕಾಲದಲ್ಲಿ ನೀರು ಲಭ್ಯವಾಗದ ಹಿನ್ನೆಲೆಯಲ್ಲಿ ಮುಂಗಾರು ಭತ್ತದ ಬಿತ್ತನೆಯ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡಿದೆ. ಮಾತ್ರವಲ್ಲ ನಿಗಧಿಪಡಿಸಿದ ಗುರಿಗಿಂತ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಯಾಗಿದೆ. ಸೈನಿಕ ಹುಳುವಿನ ಭಾದೆಗೊಳಗಾದ ನೀರಾವರಿ ಪ್ರದೇಶದ ಭೂಮಿ ಹೊಂದಿರುವ ಜಮೀನಿನ ಮಾಲೀಕರಿಗೆ ೧೩,೫೦೦/-ರೂ. ಹಾಗೂ ಮಳೆ ಆಶ್ರಿತ ಜಮೀನಿನ ಮಾಲೀಕರಿಗೆ ೬,೮೦೦/-ರೂ. ಗಳನ್ನು ಪರಿಹಾರಧನವಾಗಿ ನೀಡಲು ಅವಕಾಶ ವಿದೆ. ಸದ್ಯ ಸಮೀಕ್ಷೆ ನಡೆಯು ತ್ತಿದ್ದು, ಅಗತ್ಯವಿ ರುವ ಅನುದಾನವನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಡಿಸೆಂಬರ್ ೧೫ರೊಳಗಾಗಿ ಪಡಿತರ ಚೀಟಿಗಾಗಿ ಆನ್‌ಲೈನ್ ಮೂಲಕ ಈಗಾಗಲೇ ಅರ್ಜಿ ಸಲ್ಲಿಸಿದ ಎಲ್ಲಾ ಅರ್ಜಿದಾರರಿಗೂ ಪಡಿತರ ಕಾರ್ಡ್‌ಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದ ಸಚಿವರು, ಜಿಲ್ಲೆಯ ಆಯ್ದ ಭಾಗಗಳಲ್ಲಿ ಕೈಗೊಂಡ ಗ್ರಾಮೀಣ ಕುಡಿಯುವ ನೀರಿನ ಕಾಮಗಾರಿಗಳಿಗೆ ನೀರು ಸರಬರಾಜು ಮಾಡಲು ಅಗತ್ಯವಿರುವ ೨೪೭ ವಿದ್ಯುತ್ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ, ಅದಕ್ಕಾಗಿ ಈ ಹಿಂದೆ ನಿರ್ಧರಿಸಲಾದ ರೀತಿಯಲ್ಲಿ ಪ್ರತ್ಯೇಕವಾದ ಲೈನನ್ನು ಅಳವಡಿಸುವಂತೆ ಮೆಸ್ಕಾಂ ಅಭಿ ಯಂತರರಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ನಗರದ ಕುಡಿಯುವ ನೀರು, ಯು.ಜಿ.ಡಿ ಮತ್ತು ಕೊಳಚೆ ಪ್ರದೇಶಗಳಲ್ಲಿ ವಾಸವಾಗಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಸಂಬಂಧ ಇರುಬಹುದಾದ ಸಮಸ್ಯೆಗಳ ಇತ್ಯರ್ಥಕ್ಕಾಗಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ಕರೆದು ನಿರ್ಣಯ ಕೈಗೊಳ್ಳು ವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ ಸಚಿವರು, ಕೆರೆ ಸಂಜೀವಿನಿ ಯೋಜನೆಯಡಿ ಕೆರೆಗಳ ಹೂಳೆತ್ತಿ ಕೆರೆ-ಕಟ್ಟೆಗಳಲ್ಲಿ ನೀರನ್ನು ತುಂಬಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಮಾತನಾಡಿ, ಮುಖ್ಯಮಂತ್ರಿಗಳು ಅನಿಲಭಾಗ್ಯ ಯೋಜನೆಯಡಿ ಶಿವಮೊಗ್ಗ ಜಿಲ್ಲೆ ವಂಚಿತವಾ ಗಿದ್ದು, ಇಲ್ಲಿನ ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆ ವಿತರಿಣೆ ಆಗುತ್ತಿಲ್ಲ. ಆದ್ದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಚಿವರು ಅನಿಲಭಾಗ್ಯ ಯೋಜನೆಯ ಸಮರ್ಪಕ ಅನುಷ್ಟಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಶಿವಮೊಗ್ಗ ಮಹಾನಗರಪಾಲಿಕೆಗೆ ಸರ್ಕಾರ ದಿಂದ ಸ್ಮಾರ್ಟ್‌ಸಿಟಿ ಯೋಜನೆಯಡಿ ಬಿಡುಗಡೆಯಾಗುವ ೧೦೦೦ಕೋಟಿ ರೂ.ಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಲು ಹಾಗೂ ವ್ಯವಸ್ಥಿತ ನೀರು ಸರಬರಾಜು, ಯು.ಜಿ.ಡಿ ನಿರ್ವಹಣೆ ಮತ್ತು ನಗರಸೌಂದರ್ಯ ಇತ್ಯಾದಿಗಳ ಕುರಿತು ಸೂಕ್ತ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಹಾಗೂ ಆದ್ಯತೆಯ ಮೇಲೆ ಬಳಸುವಂತೆ ಮಹಾನಗರಪಾಲಿಕೆ ಆಯುಕ್ತ ಮುಲ್ಲೈ ಮುಹಿಲನ್ ಅವರಿಗೆ ಸಚಿವರು ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್, ಜಿ.ಪಂ. ಸಿಇಓ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅಭಿನವ ಖರೆ ಸೇರಿದಂತೆ ಶಾಸಕರು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.