ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಶಾಸಕಿ ಪೂರ್ಯನಾಯ್ಕ್ ಹೇಳಿಕೆ
ಶಿವಮೊಗ್ಗ : ಜೆಡಿಎಸ್ ಪಕ್ಷವೀಗ ಎನ್ ಡಿಎ ಮೈತ್ರಿಕೂಟದ ಭಾಗವಾಗಿದೆ. ಎನ್ ಡಿ ಎಸ ಸರ್ಕಾರ ರಚನೆಯ ಕುರಿತು ತಯಾರಿ ನಡೆಸಿದೆ. ನಮ್ಮ ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರ ಸ್ವಾಮಿ ಅವರು ದೆಹಲಿಗೆ ಹೋಗಿದ್ದು, ಅವರಿಗೆ ಮಂತ್ರಿ ಸ್ಥಾನ ಸಿಗುವ ಭರವಸೆ ಇದೆ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಶಾಸಕಿ ಶಾರದಾ ಪೂರ್ಯ ನಾಯ್ಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಮತದಾರರು ಯಾವ ಪಕ್ಷಕ್ಕೂ ಬೇಜಾರು ಮಾಡಿಲ್ಲ. ಸಮಾಧಾನಕರವಾದ ಸ್ಥಾನಗಳು ಎನ್ ಡಿಎಗೆ ಲಭಿಸಿವೆ. ಸರಕಾರ ರಚನೆ ಕುರಿತು ಕುಮಾರಸ್ವಾಮಿಯವರು ದೆಹಲಿಗೆ ಹೋಗಿದ್ದಾರೆ. ಮೋದಿಯವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಕುಮಾರಸ್ವಾಮಿಯವರಿಗೂ ಒಂದು ಸಚಿವ ಸ್ಥಾನ ನೀಡಲಿದ್ದಾರೆ ಎಂಬ ಭರವಸೆಯಿದೆ ಎಂದರಲ್ಲದೆ, ಲೋಕಸಭೆ ಚುನಾವಣೆಯ ಒಟ್ಟಾರೆ ಪರಿಸ್ಥಿತಿ ನೋಡಿದರೆ ದೇಶದಲ್ಲಿ ಮೋದಿ ಅಲೆ ಕಡಿಮೆ ಆಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದರು.
ಉತ್ತರ ಪ್ರದೇಶದ ಸ್ತಿತಿಯನ್ನು ನೋಡಿದರೆ ಮೋದಿ ಅಲೆ ಕಡಿಮೆಯಾಗಿರುವುದು ತಿಳಿದು ಬರುತ್ತದೆ. ತುಮಕೂರು, ಮೈಸೂರು ಮುಂತಾದ ಕಡೆ ನಮ್ಮ ಮೈತ್ರಿಯಿಂದಾಗಿ ಬಿಜೆಪಿಯವರಿಗೆ ಸಹಾಯವಾಗಿದೆ. ನಮ್ಮ ಪಕ್ಷದ ಹಾಸನ ಅಭ್ಯರ್ಥಿಯ ಸೋಲಿಗೆ ಸಮರ್ಥನೆ ಮಾಡಿಕೊಳ್ಳಲು ಹೋಗುವುದಿಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಬಿಜೆಪಿಗೆ ನಮ್ಮ ಮೈತ್ರಿಯು ಬಲ ತುಂಬಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ರಾಜ್ಯದ ಕಾಂಗ್ರೆಸ್ ಪಕ್ಷದ ಸಾಧನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಕೆಲಸ ಮಾಡಿಲ್ಲ. ಜನತೆ ಇದನ್ನೆಲ್ಲಾ ಬಯಸಿಲ್ಲ. ಅಭಿವೃದ್ಧಿಯನ್ನು ಬಯಸುತ್ತಾರೆ. ರಾಘವೇಂದ್ರ ಅವರು ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಮಾಡಿದ್ದಾರೆ. ಬಿಜೆಪಿಯೊಂದಿಗಿನ ಹಿಂದಿನೆಲ್ಲಾ ಕಹಿ ಮರೆತು ಪ್ರಚಾರ ಕಾರ್ಯವನ್ನು ಮಾಡಿದ್ದೇವೆ. ನಮ್ಮ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿಯವರ ತೀರ್ಮಾನಕ್ಕೆ ಒಗೊಟ್ಟು ಚುನಾವಣೆಯನ್ನು ಎದುರಿಸಿದ್ದೇವೆ.
ರಾಘವೇಂದ್ರ ಅವರನ್ನು ಅಭಿನಂದಿಸುತ್ತೇನೆ. ಅವರು ನಮ್ಮ ಮೈತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆಂದು ಹೇಳಿದರು.