ವಿಶೇಷ ವರದಿ
-ದೇವು . ಟಿ .ವಡ್ಡಿಗೆರೆ
ಸೊರಬ ತಾಲ್ಲೂಕು ಹಂಚಿ ಗ್ರಾಮ ಪಂಚಾ ಯಿತಿಗೆ ಸೇರಿದ ಹಿರೇಮಾಗಡಿ ವಡ್ಡಿಗೆರೆ ಸಮೀಪದಲ್ಲಿ ಕರಿಕಲ್ಲು ಕೋರೆ ಗಣಿಗಾರಿಕೆ ಸುಮಾರು ಎರಡು ವರ್ಷದಿಂದ ಸದ್ದಿಲ್ಲದೆ ನಡೆಯುತ್ತಿದೆ. ನೀರಾವರಿ ಸೌಲಭ್ಯ ಇಲ್ಲದ ಮಳೆ ಆಶ್ರಿತ ಕೃಷಿ ಪ್ರದೇಶ ಇದಾಗಿದ್ದು, ಇಲ್ಲಿನ ಕಾಡು ಎಂದೋ ನಾಶವಾಗಿ ಮಳೆ ಕಡಿಮೆಯಾಗಿ ಬಯಲು ಸೀಮೆಯ ಬರ ಇಲ್ಲಿಗೂ ಆವರಿಸುತ್ತಿದೆ. ಇಂತಹ ಸಂದರ್ಭ ದಲ್ಲಿ ಈ ಗಣಿಗಾರಿಕೆ ಹೆಮ್ಮಾರಿ ಬಂದಿರುವುದು ಇಲ್ಲಿಯ ಜನರನ್ನು ಕಂಗೆಡಿಸಿದೆ.
ರಸ್ತೆ ನಿರ್ಮಾಣ ಮತ್ತು ಕಟ್ಟಡ ಕಟ್ಟುವ ಉದ್ಯಮಿ ಮುರುಡೇಶ್ವರದ ಆರ್‌ಎನ್ ಶೆಟ್ಟಿ ಇಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಇಲ್ಲಿನ ಶ್ರೀ ಮುರುಘರಾಜೇಂದ್ರ ಮಠಕ್ಕೆ ಸೇರಿದ ಕಂದಾಯ ಜಾಗದಲ್ಲಿ ಜಲ್ಲಿ ಕ್ರಷರ್ ಮತ್ತು ಡಾಂಬರ್ ತಯಾರಿಕ ಘಟಕಗಳು ತಲೆಯೆ ತ್ತಿವೆ. ಮಠದ ಒಡೆತನದ ಜಮೀನು ಸರ್ವೆ ನಂಬರ್ ೧೯೨ ರಲ್ಲಿ ಸುಮಾರು ೩೦ ಎಕರೆ ಇದ್ದು, ಅದರಲ್ಲಿನ ೧೫ ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿದೆ. ಇಲ್ಲಿಂದ ೩ ಕಿ.ಮೀ.ದೂರದಲ್ಲಿನ ತ್ಯಾವರತೆಪ್ಪ ಗ್ರಾಮಕ್ಕೆ ಸೇರಿದ ಖಾಸಗಿ ವ್ಯಕ್ತಿಯ ಜಮೀನಿನಲ್ಲಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತದೆ.ಆ ಕಲ್ಲನ್ನು ಇಲ್ಲಿಗೆ ತಂದು ಕ್ರಷರ್‌ನಲ್ಲಿ ಅರೆಯಲಾಗುತ್ತದೆ.
ಈ ಮೂರು ಕಿ.ಮೀ.ನಡುವೆ ಪೂರ್ತಿ ಕೃಷಿ ಜಮೀನು ಜಮೀನುಗಳಿದ್ದು, ಬೃಹತ್ತಾದ ಟಿಪ್ಪರ್‌ಗಳು ಕಲ್ಲು ಹೇರಿಕೊಂಡು ಆಕಾಶ ದೆತ್ತರ ಧೂಳೆಬ್ಬಿಸಿಕೊಂಡು ಓಡಾಡುತ್ತಿವೆ. ಇದರಿಂದ ಈ ಭಾಗದ ಪರಿಸರ ಪೂರ್ತಿಯಾಗಿ ಕಂದು ಬಣ್ಣಕ್ಕೆ ತಿರುಗಿದೆ.ಈ ಗಣಿಗಾರಿಕೆ ಮತ್ತು ಕ್ರಷರ್, ಇನ್ನು ಒಂದು ವರ್ಷ ಮುಂದುವರೆ ಯಲಿದೆ ಎಂಬ ಸುದ್ದಿ ಇದೆ. ಈಗಲೇ ಧೂಳು ಕುಡಿದು ಸಾಯುತ್ತಿದ್ದೇವೆ. ಮುಂದುವರೆದರೆ ಗತಿಯೇನು? ಎಂದು ಜನರು ಆತಂಕ ವ್ಯಕಪಡಿಸುತ್ತಾರೆ.
ಜನ ವಸತಿ ಇರುವಲ್ಲಿ ಅನುಮತಿ ಕೊಟ್ಟಿರುವುದು ವಿಪರ್ಯಾಸ, (ಕೊಟ್ಟಿದ್ದರೆ)?
ಮಠದ ಜಮೀನಿನಲ್ಲಿ ಸ್ವಾಮಿಗಳ ಅನು ಮತಿಯಿಲ್ಲದೆ ಶೆಟ್ಟಿ ಗಣಿಗಾರಿಕೆ ವ್ಯಾವಹಾರ ಮಾಡಲು ಸಾಧ್ಯವಿಲ್ಲ. ಕೋರೆ ಉದ್ದಿಮೆ ಗಳಿಂದ ಹಣ ತೆಗೆದುಕೊಂಡು ಪರವಾನಿಗೆಗೆ ಕೊಡುವುದಾದರೆ ಮಠದ ಜನಪರ ಪರಿಸರ ಕಾಳಜಿ ಎಲ್ಲಿದೆ? ಎಂದು ಸಂತ್ರಸ್ತ ಜನರು ಪ್ರಶ್ನಿಸುತ್ತಿದ್ದಾರೆ.
ಶಿವಮೊಗ್ಗ-ಹುಬ್ಬಳ್ಳಿ ನಡುವಿನ ರಾಜ್ಯ ಹೆದ್ದಾರಿ ರಸ್ತೆ ಕಾಮಗಾರಿಯನ್ನು ಶೆಟ್ಟಿ ನಡೆಸು ತ್ತಿದ್ದು, ಶಿಕಾರಿಪುರದಿಂದ ಹಾನಗಲ್ ವರೆಗೆ ಮಾತ್ರ ಆತನಿಗೆ ತುಂಡು ಗುತ್ತಿಗೆ ಸಿಕ್ಕಿದೆ. ಸಾರ್ವಜನಿಕರ ರಸ್ತೆ ಕಾಮಗಾರಿ ನಡೆಸಲು ಸ್ಥಳೀಯ ವಾಗಿ ಕಚ್ಚಾವಸ್ತುಗಳು ಸಿಕ್ಕರೆ ಅನುಕೂಲ. ಹಾಗಾಗಿ ಕೋರೆ ನಡೆಸುವುದಾಗಿ ಸುಳ್ಳು ಹೇಳಿ ಪರವಾನಿಗಿ ಪಡೆದುಕೊಂಡಿ ದ್ದಾರೆ. ಆದರೆ ಆರ್‌ಎನ್ ಶೆಟ್ಟಿ ಅಖಿಲ ಭಾರತ ಮಟ್ಟದ ಗುತ್ತಿಗೆದಾರ ಮತ್ತು ಬಿಲ್ಡರ್ ಆಗಿದ್ದು, ಈ ಕೋರೆಗಳಿಂದಲೇ ರಾಜ್ಯದ ಬೇರೆಡೆಗೆ ಬೇಕಾಗುವಷ್ಟು ಕಲ್ಲನ್ನು ಹುಬ್ಬಳ್ಳಿಯ ತನ್ನ ಗೋಡೌನ್‌ಗೆ ಸಾಗಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಶೆಟ್ಟಿ ಇಲ್ಲಿ ಕೋರೆ ಗಣಿಗಾರಿಕೆ ಮಾಡುವ ಮೊದಲು ಸ್ಥಳೀಯ ಉದ್ಯಮಿಗಳು ೩ ಕಿಮೀ ವ್ಯಾಪ್ತಿಯಲ್ಲಿ ೪ -೫ ಕಲ್ಲುಕೋರೆಗಳಲ್ಲಿ ಗಣಿ ಗಾರಿಕೆ ನಡೆಸುತ್ತಿದ್ದರು. ಅವು ಸಣ್ಣ ಪ್ರಮಾಣ ದಲ್ಲಿದ್ದು ಶಬ್ಧ ಮಾಲಿನ್ಯ ಉಂಟು ಮಾಡುತ್ತಿ ದ್ದವು. ಕ್ರಷರ್ ಇಲ್ಲದಿದ್ದ ಕಾರಣ ಧೂಳು ಏಳುತ್ತಿರಲಿಲ್ಲ. ಆದರೂ ಜನ ಅದನ್ನೂ ವಿರೋಧಿಸುತ್ತ ಬಂದಿದ್ದರು .ಈಗ ಆ ಕೋರೆ ಗಳ ಪರವಾನಿಗೆ ರದ್ದಾಗಿದ್ದರಿಂದ ಅವುಗಳನ್ನು ಮುಚ್ಚಲಾಗಿದೆ. ತನಗೆ ಯಾರೂ ಪೈಪೋಟಿ ಇರಬಾರದೆಂದು ಶೆಟ್ಟಿಯೇ ಮುಂದೆ ನಿಂತು ಅವರೆಲ್ಲರ ಪರವಾನಿಗೆಯನ್ನ ರದ್ದುಪಡಿಸಿರ ಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಭೂಗರ್ಭ ಮತ್ತು ಗಣಿ ಇಲಾಖೆಗೆ ಪರವಾನಿಗೆ ವಿಷಯದಲ್ಲಿ ಒಂದೇ ನಿಯಮ -ನ್ಯಾಯ ಇರುವುದಾದರೆ ಈ ತಾರತಮ್ಯ ಯಾಕೆಂದು ಸಂಬಂಧಪಟ್ವ ವರು ಪ್ರಶ್ನಿಸುತ್ತಿ ದ್ದಾರೆ. ಪರಿಸರ ನಿಯಮಗಳನ್ನು ಮುಂದಿಟ್ಟು ಈಗಾಗಲೇ ಅಲ್ಲಿರುವ ಕೋರೆಗಳನ್ನು ಮುಚ್ಚಿಸಿ ಶೆಟ್ಟಿಗೆ ಮಾತ್ರ ಗಣಿಗಾರಿಕೆಗೆ ಅವಕಾಶ ಮಾಡಿ ಕೊಡಲಾಗಿದೆ ಎಂದರೆ ಗಣಿ ಭೂಗರ್ಭ ಇಲಾಖೆ ಶೆಟ್ಟಿ ನಡುವೆ ಏನೋ ಮಸಲತ್ತು ನಡೆದಿರ ಬಹುದು.ಇಲ್ಲವೆ ಕೋರೆ ಕ್ರಷರ್ ನಡೆಸಲು ಪರವಾನಿಗೆ ಇಲ್ಲದೆವೂ ಶೆಟ್ಟಿ ನಡೆಸುತ್ತಿರಬಹುದು ಎಂಬ ಅಭಿಪ್ರಾಯ ಗಳು ಕೇಳಿ ಬರುತ್ತಿವೆ.ಇದರಲ್ಲಿ ಯಾವುದು ಸರಿ ಯೆಂದು ಗಣಿ ಇಲಾಖೆ ಸ್ಪಷ್ಟೀ ಕರಿಸಬೇಕಿದೆ.
ಹಿರೇಮಾಗಡಿ ವಡ್ಡಿಗೆರೆ ಗ್ರಾಮ ಗುಡ್ಡದ ಮೇಲಿರುವ ರಮಣಿಯ ಊರು.ಸುತ್ತಲೂ ಕುರುಚಲು ಕಾಡುಳ್ಳ ಬೋಳು ಬೋಳಾಗಿ ಕಾಣುವ ಗುಡ್ಡಗಳು, ಹುಲ್ಲುಗಾವಲಿನಿಂದ ಆವೃತ್ತವಾದ ಅರೆಮಲೆನಾಡು. ಇಲ್ಲಿ ಒಂದೆರೆಡು ಬೇರೆ ಜಾತಿ ಕುಟುಂಬಗಳು ಬಿಟ್ಟು ಉಳಿದವರೆಲ್ಲಾ ಹಿಂದುಳಿದ ಸಮುದಾಯಕ್ಕೆ ಸೇರಿದವರಿದ್ದಾರೆ. ಇಲ್ಲಿ ಸುಮಾರು ೧೦೦ ಮನೆಗಳಿದ್ದು, ಕೂಲಿಕಾರ್ಮಿಕರು ಸಣ್ಣ ರೈತರೇ ಹೆಚ್ಚಿದ್ದಾರೆ.
ಕಲ್ಲುಕೋರೆ ಕ್ರಷರ್, ಡಾಂಬರ್ ಫ್ಯಾಕ್ಟರಿಯ ಶಬ್ದ ಮಾಲಿನ್ಯ ಮತ್ತು ಧೂಳಿಗೆ ಈ ಗ್ರಾಮ ಸಂಪೂರ್ಣ ತುತ್ತಾಗಿದೆ. ಜನವಸತಿ ಪ್ರದೇಶ ಈ ಕರಿಕಲ್ಲು ಕೋರೆಯಿಂದ ಕೇವಲ ೫೦ ಮೀಟರ್‌ನಷ್ಟು ಹತ್ತಿರವಿದೆ. ದಿನದ ೨೪ ಗಂಟೆಯೂ ಕ್ರಷರ್ ಕಲ್ಲು ಅರೆಯುತ್ತಿರುವುದ ರಿಂದ ವಿಪರೀತ ಶಬ್ಧವಾಗುವುದರಿಂದ ಜನರು ಹಗಲು ರಾತ್ರಿಯೆನ್ನದೆ ಬೆಚ್ಚಿ ಬೀಳುತ್ತಿದ್ದಾರೆ. ನಿದ್ರೆ– ವಿಶ್ರಾಂತಿಗೆ ಭಂಗವಾಗುತ್ತಿದೆ. ಮಕ್ಕಳು, ವಯಸ್ಸಾದವರು ಗರ್ಭಿಣಿ ಮಹಿಳೆಯರು ನಿದ್ರಾಹೀನರಾಗಿದ್ದಲ್ಲದೆ, ಡಾಂಬರಿನ ವಾಸನೆಯಿಂದ ಮೂಗು ಮುಚ್ಚಿ ಓಡಾಡುವ ಸ್ಥಿತಿ ಏರ್ಪಟ್ಟಿದೆ. ಕಲ್ಲಿನ ಧೂಳು ಡಾಂಬರ್‌ನ ವಾಸನೆ ಕುಡಿದು ಅಸ್ತಮ, ಅಲರ್ಜಿ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.
ಈ ಫ್ಯಾಕ್ಟರಿ ಪಕ್ಕದಲ್ಲೇ ಮೂರು ಊರಿನ ದನಗಳು ನೀರು ಕುಡಿಯುವ ಗೋಕಟ್ಟೆ ಇದೆ. ಅದು ಧೂಳು ಡಾಂಬರಿನ ತ್ಯಾಜದಿಂದ ತುಂಬಿದ್ದು ಅದರಲ್ಲಿ ದನಗಳು ನೀರು ಕುಡಿಯುತ್ತಿಲ್ಲ. ಕೃಷಿಕರು ದನಗಳಿಗೆ ನೀರು ಕುಡಿಸಲು ಕೊಳೆವೆ ಬಾವಿಗಳನ್ನು ಆಶ್ರಯಿಸಿದ್ದಾರೆ. ಈ ಫ್ಯಾಕ್ಟರಿಗಳ ಧೂಳು ಸುಮಾರು ಎರಡು ಮೂರು ಕಿ ಮೀ ಹರಡುತ್ತಿದೆ. ಇಲ್ಲಿನ ಕೆರೆ ನೀರು, ಬೆಳೆ, ದನಗಳು ಮೇಯುವ ಹುಲ್ಲುಗಾವಲು, ನೆಡುತೋಪು, ಕೃಷಿ ಜಮೀನು, ಜನ ವಸತಿ ಪ್ರದೇಶ ಪ್ರತಿಯೊಂದು ಧೂಳಿನಿಂದ ತುಂಬಿ ಹೋಗಿವೆ. ಬೆಳ್ಳಿಗ್ಗೆ ಮತ್ತು ಸಂಜೆ ಕಲ್ಲು ಮಣ್ಣು ಮಿಶ್ರಿತ ಹಿಮದಂತಹ ಧೂಳಿ ನಿಂದ ಈ ಗ್ರಾಮಗಳು ಮುಚ್ಚಿರುತ್ತವೆ ಎಂದು ಸಂತ್ರಸ್ತರು ಶಾಪ ಹಾಕುತ್ತಿದ್ದಾರೆ.
ಸಾಮಾನ್ಯವಾಗಿ ಜಲ್ಲಿ ಕ್ರಷರ್‌ನಲ್ಲಿ ರಸ್ತೆಗೆ ಬಳಸುವ ವಿವಿಧ ರೂಪದ ಕಚ್ಚಾವಸ್ತು ತಯಾರಿಸುವಾಗ ಕ್ರಷರ್‌ಗೆ ನೀರು ಬಳಸಬೇಕು ಆಗ ಧೂಳು ನಿಯಂತ್ರಣವಾಗುತ್ತದೆ.ನೀರಿಗೆ ಯಾಕೆ ಹಣ ಖರ್ಚುಮಾಡಬೇಕೆಂದು ಅದನ್ನು ಇಲ್ಲಿ ಮಾಡುತ್ತಿಲ್ಲ ಎಂದು ಇಲ್ಲಿನ ಕೆಲಸಗಾರರು ತಮ್ಮ ಅನುಭವವನ್ನು ತೆರೆದಿಡುತ್ತಾರೆ.
ಇಲ್ಲಿ ಎಲ್ಲವೂ ಕಾನೂನು ಬಾಹಿರವಾಗಿಯೇ ರಾಜರೋಷವಾಗಿ ನಡೆಯುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಶಬ್ಧ – ವಾಯು ಮಾಲಿನ್ಯ ಮಾಡುವಂತಹ ಯಾವುದೇ ಕೈಗಾರಿಕಾ ಘಟಕಗಳು ಜನ ವಸತಿ ಪ್ರದೇಶದಲ್ಲಿ ಇರಬಾರದು, ಒಂದು ವೇಳೆ ಇದ್ದರೆ ೫೦೦ ಮೀಟರ್ ದೂರ ಇರಬೇಕು, ರಾತ್ರಿವೇಳೆ ಜನರಿಗೆ ತೊಂದರೆಯಾಗವಂತಿದ್ದರೆ ಫ್ಯಾಕ್ಟರಿ ಚಾಲನೆಯಲ್ಲಿರಬಾರದು ಎಂದಿದೆ. ಕೃಷಿ ಜಮೀನಿನಲ್ಲಿ ಅಥವಾ ಹತ್ತಿರ ಇರಬಾರದು, ಕೆರೆ, ನೀರು, ಗದ್ದೆ ತೋಟ, ಹುಲ್ಲುಗಾವಲು, ಪರಿಸರ, ಜೀವ ಸಂಕುಲಕ್ಕೆ ತೊಂದರೆಯಾಗಬಾರದು ಎಂಬ ನಿಯಮಗಳಿವೆ. ಅವುಗಳೆಲ್ಲವನ್ನು ಇಲ್ಲಿ ಉಲ್ಲಂಘಿಸಲಾಗಿದೆ.
ಎರಡು ವರ್ಷದ ಹಿಂದೆ ಈ ಕಂಪೆನಿ ಇಲ್ಲಿ ತಲೆಯೆತ್ತಲು ಶುರುವಾದಾಗ ಶಬ್ದ ಮಾಲಿನ್ಯ ಧೂಳು ತುಂಬ ಬಹುದು ಎಂದು ಇಲ್ಲಿನ ಜನರು ಊಹಿಸಿ ಇದನ್ನು ಪ್ರಶ್ನಿಸಿದ್ದರು. ಸ್ಥಳೀಯವಾಗಿ ನೂರಾರು ಜನರಿಗೆ ಕಂಪೆನಿಯಲ್ಲಿ ಕೆಲಸ ಸಿಗುತ್ತದೆ. ತೊಂದರೆಯಾಗುವ ನಾಲ್ಕೈದು ಗ್ರಾಮಗಳ ರಸ್ತೆಗಳಿಗೆ ಉಚಿತವಾಗಿ ಡಾಂಬರಿಕರಣ ಮಾಡಿಸಲಾಗುವುದು, ಊರಿಗೆ ದೇವಾಸ್ಥಾನ ಕಟ್ಟಿಸಿ ಕೊಡಲಾಗುವುದು, ಮುಂತಾದ ಆಮಿಷಗಳನ್ನು ಮಾಲೀಕರು ಜನರಿಗೆ ಒಡ್ಡಿದ್ದರು. ಈ ಘಟಕ ಕೆಲವು ತಿಂಗಳು ಮಾತ್ರ ಇಲ್ಲಿ ಇರುತ್ತದೆ ಎಂದು ಸುಳ್ಳು ಹೇಳಿ ಜನರನ್ನು ನಂಬಿಸಿ ಮೋಸ ಮಾಡಲಾಯಿತು. ಈ ಕಂಪೆನಿಯಲ್ಲಿ ಒಂದಷ್ಟು ಯುವಕರಿಗೆ ಚಾಲಕ, ನಿರ್ವಾಹಕ ಸಹಾಯಕ ಕೂಲಿ ಕೆಲಸ ಕೊಟ್ಟಿದ್ದು ಬಿಟ್ಟರೆ, ಅಂದಿನ ಒಪ್ಪಂದದ ರೀತ್ಯಾ ಯಾವ ಕೆಲಸವನ್ನು ಇಲ್ಲಿವರೆಗೆ ಮಾಡಿಲ್ಲ. ‘ಅವರ ಮರ್ಮ ಈಗ ನಮಗೆ ಅರ್ಥವಾಗುತ್ತಿದೆ.ಆದರೆ ಕಾಲ ಮಿಂಚಿ ಹೋಗಿದೆ ಈಗ ಏನು ಮಾಡಲು ಸಾಧ್ಯ’ಎಂದು ತಮ್ಮ ಅಸಹಾಯಕತೆ ಜನರು ಹೊರಹಾಕುತ್ತಾರೆ.
ಈಗ ಕಂಪೆನಿ ಇರುವವರೆಗೂ ಧೂಳು ನಿಯಂತ್ರಣ ಮಾಡಬೇಕು. ಧೂಳು ಮತ್ತು ಶಬ್ದ ಮಾಲಿನ್ಯಕ್ಕೆ ಒಳಗಾದ ಗ್ರಾಮಗಳಲ್ಲಿ ರಸ್ತೆಗಳ ಡಾಂಬರಿಕರಣ ಆಗಬೇಕೆಂದು ಆಗ್ರಹಿಸುತ್ತಿದ್ದಾರೆ. ಸ್ಥಳಿಯ ಜನ ಪ್ರತಿನಿಧಿಗಳು ಮೊದಲು ಧ್ವನಿಯೆತ್ತಿದಂತೆ ಮಾಡಿ ಸುಮ್ಮನಾಗಿದ್ದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಈಗ ಚುನಾವಣೆ ಹತ್ತಿರವಾಗುತ್ತಿದೆ, ಓಟಿನ ಕಾರಣಕ್ಕಾದರೂ ಜನಪ್ರತಿನಿಧಿಗಳು ನಮ್ಮ ಬೇಡಿಕೆ ಪರವಾಗಿರುತ್ತಾರಾ? ಎಂಬ ಪ್ರಶ್ನೆ ಸ್ಥಳೀಯರಲ್ಲಿ ಕಾಡುತ್ತಿದೆ.