ಶಿವಮೊಗ್ಗ: ತಂಬಾಕು ಸೇವನೆಯಿಂದ ಭಾರತ ದೇಶದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಸಲಹೆಗಾರ ಜಿ.ಕೆ.ರವಿರಾಜ್ ಹೇಳಿದರು.
ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಆರೋಗ್ಯ ಜಾಗೃತಿ ಮತ್ತು ವಿಶ್ವ ತಂಬಾಕುರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ಸಂಬಂಧಿ ಹಾಗೂ ಅನೇಕ ಮಾರಣಾಂತಿಕ ಕಾಯಿಲೆಗಳು ಬರುತ್ತವೆ ಎಂದು ತಿಳಿಸಿದರು.
ಸಿಗರೇಟ್, ಬಿಡಿ ತಂಬಾಕು ಉತ್ಪನ್ನಗಳಲ್ಲಿ ರಾಸಾಯನಿಕ ವಸ್ತುಗಳಿದ್ದು, ಕ್ಯಾನ್ಸರ್‌ಕಾರಕ ಅಂಶಗಳನ್ನು ಒಳಗೊಂಡಿದೆ. ಜಗಿಯುವ ತಂಬಾಕಿನಲ್ಲಿರುವ ರಾಸಾಯನಿಕ ಅಂಶಗಳಿAದಲೂ ಕ್ಯಾನ್ಸರ್ ಬರುತ್ತದೆ. ತಂಬಾಕು ಸೇವನೆಯಿಂದ ಪ್ರತಿ ನಿತ್ಯ ಸಾವಿರಾರು ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು.
ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದರು. ನಂತರ ನಡೆದ ಸಂವಾದದಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು.
ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಸತೀಶ್ ಚಂದ್ರ ಮಾತನಾಡಿ, ಆರೋಗ್ಯ ಪ್ರತಿಯೊಬ್ಬರಿಗೂ ಮುಖ್ಯ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜೀವನಶೈಲಿಯಲ್ಲಿ ಸಕರಾತ್ಮಕ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ತಂಬಾಕು ಸೇವನೆಯಿಂದ ದೂರವಿರಬೇಕು ಎಂದು ಹೇಳಿದರು.
ಆರೋಗ್ಯ ಜಾಗೃತಿ ಹಾಗೂ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದ ರವಿರಾಜ್ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಡಾ. ಗುಡದಪ್ಪ ಕಸಬಿ, ಐಎಂಎ ಶಿವಮೊಗ್ಗ ಮಾಜಿ ಅಧ್ಯಕ್ಷ ಡಾ. ಅರುಣ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕಿಶೋರ್‌ಕುಮಾರ್, ಮಾಜಿ ಅಧ್ಯಕ್ಷ ಎನ್.ಎಚ್.ಶ್ರೀಕಾಂತ್, ಕೇಶವಪ್ಪ, ಕೃಷ್ಣಮೂರ್ತಿ, ನಿಯೋಜಿತ ಅಧ್ಯಕ್ಷ ಅರುಣ್ ದೀಕ್ಷಿತ್, ಗಣೇಶ್, ಎ.ಒ.ಮಹೇಶ್, ಸಂತೋಷ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ಸುರೇಂದ್ರ ಕೋಟ್ಯಾನ್, ಶೇಷಗಿರಿ, ರೋಟರಿ ಸದಸ್ಯರು ಇದ್ದರು.